×
Ad

ಅಜಿತಾಬ್ ನಾಪತ್ತೆ ಪ್ರಕರಣ: ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದ ಹೈಕೋರ್ಟ್

Update: 2018-02-26 22:40 IST

ಬೆಂಗಳೂರು, ಫೆ.26: ಸಾಫ್ಟ್‌ವೇರ್ ಎಂಜಿನಿಯರ್ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಅಪರಾಧ ತನಿಖಾ ದಳ(ಸಿಐಡಿ)ಕ್ಕೆ ವರ್ಗಾಯಿಸಿ ಆದೇಶಿಸಿದೆ.

ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಎಸ್‌ಐಟಿಯಿಂದ ಸಿಐಡಿಗೆ ವರ್ಗಾಯಿಸಲು ನಗರ ಪೊಲೀಸ್ ಆಯುಕ್ತರು ಹೈಕೋರ್ಟ್‌ಗೆ ಅನುಮತಿ ಕೋರಿದ್ದರು. ಸೋಮವಾರ ಈ ಮನವಿ ಪುರಸ್ಕರಿಸಿದ ಹೈಕೋರ್ಟ್, ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಅನುಮತಿ ನೀಡಿತು.

ಅಜಿತಾಬ್ ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್‌ಗೆ ಆದೇಶಿಸಿತ್ತು. ಅದರಂತೆ ಎಸ್‌ಐಟಿ ರಚಿಸಲಾಗಿತ್ತು. ಸುಮಾರು 80 ಪೊಲೀಸ್ ಅಧಿಕಾರಿಳು ಎಸ್‌ಐಟಿ ತನಿಖೆ ಕೈಗೊಂಡಿದ್ದಾರೆ.

ಸೋಮವಾರ ಸಿನ್ಹಾ ಅವರ ಅರ್ಜಿ ಮತ್ತೆ ವಿಚಾರಣೆಗೆ ಬಂದಿತ್ತು. ಈ ವೇಳೆ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಎ.ಜಿ.ಶಿವಣ್ಣ ಅವರು ಪ್ರಕರಣದ ತನಿಖೆ ಕುರಿತ ಪ್ರಗತಿ ವರದಿಯನ್ನು ಕೊರ್ಟ್‌ಗೆ ಸಲ್ಲಿಸಿದರು. ಹಾಗೆಯೇ, ಪ್ರಸ್ತುತ ಎಸ್‌ಐಟಿಯಲ್ಲಿ 80 ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯ ಕಾರ್ಯ ನಿರ್ವಹಣೆಗೆ 80 ಪೊಲೀಸರು ಬೇಕಾಗಿದ್ದಾರೆ. ಕ್ರಿಮಿನಲ್ ಪ್ರಕರಣಗಳ ತನಿಖೆಗಳಿಗಾಗಿಯೇ ಸಿಐಡಿ ರಚಿಸಿದ್ದು, ಅಜಿತಾಬ್ ಪ್ರಕರಣದ ತನಿಖೆಯನ್ನು ಅದಕ್ಕೆ ವಹಿಸಲು ನಗರ ಪೊಲೀಸರು ಆಯಕ್ತರು ನಿರ್ಧರಿಸಿದ್ದಾರೆ. ಅದಕ್ಕಾಗಿ ಕೋರ್ಟ್ ಅನುಮತಿ ನೀಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರು, ಸಿಐಡಿಗೆ ವರ್ಗಾಯಿಸಲು ಕೋರ್ಟ್ ಅನುಮತಿ ಏಕೆ ಬೇಕು? ಎಂದು ಪ್ರಶ್ನಿಸಿದರು. ಶಿವಣ್ಣ ಉತ್ತರಿಸಿ, ಪ್ರಕರಣ ವಿಚಾರಣೆ ನ್ಯಾಯಾಲಯದಲ್ಲಿದೆ. ಹೀಗಾಗಿ ಸಿಐಡಿಗೆ ವಹಿಸಲು ನ್ಯಾಯಾಲಯದ ಅನುಮತಿ ಕೇಳಲಾಗುತ್ತಿದೆ ಎಂದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಅಜಿತ್ ನಾಪತ್ತೆ ಪ್ರಕರಣವನ್ನು ಸಿಐಡಿಗೆ ವಹಿಸಲು ಅನುಮತಿ ನೀಡಿತು ಮತ್ತು ಮಾರ್ಚ್ 12ರಂದು ತನಿಖೆ ಪ್ರಗತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತು.

ಪ್ರಕರಣವೇನು: ಬ್ರಿಟಿಷ್ ಟೆಲಿಕಾಂ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಕುಮಾರ್ ಅಜಿತಾಬ್ 2017ರ ಡಿ.18ರ ಸಂಜೆ 6.30ಕ್ಕೆ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಮಾರ್ ಅಜಿತಾಬ್ ತಂದೆ ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಮಗ ಪತ್ತೆಯಾಗದ ಕಾರಣ ಹೈಕೋರ್ಟ್ ಮಟ್ಟಿಲೇರಿರುವ ತಂದೆ ಅಶೋಕ್ ಕುಮಾರ್ ಸಿನ್ಹಾ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News