×
Ad

ಮಡಿಕೇರಿ: ಪ್ಲಾಸ್ಟಿಕ್ ನಿಷೇಧ ನಿಯಮ ಪಾಲಿಸದ ಅಂಗಡಿಗಳ ಪರವಾನಗಿ ರದ್ದು ಮಾಡಿ: ಪಿ.ಐ ಶ್ರೀವಿದ್ಯಾ

Update: 2018-02-26 23:38 IST

ಮಡಿಕೇರಿ ಫೆ.26 : ಪ್ಲಾಸ್ಟಿಕ್ ನಿಷೇಧ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ನಿಯಮಗಳನ್ನು ಪಾಲಿಸದಿರುವ ಅಂಗಡಿಗಳ ಪರವಾನಗಿ ರದ್ದುಪಡಿಸುವಂತೆ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.  

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ಲಾಸ್ಟಿಕ್ ನಿಷೇಧ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮ ಪಂಚಾಯತ್  ನಗರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಗಳಲ್ಲಿ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದರೂ ಸಹ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂಬ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ನಗರಸಭೆ, ಪಟ್ಟಣ ಪಂಚಾಯತ್, ಗ್ರಾ.ಪಂ.ವ್ಯಾಪ್ತಿಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ನಾಮಫಲಕಗಳನ್ನು ಅಂಗಡಿ ಮುಂಗಟ್ಟುಗಳಲ್ಲಿ ಅಳವಡಿಸಬೇಕು. ಇದನ್ನು ಉಲ್ಲಂಘಸಿದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರ ಜೊತೆಗೆ ಅಂಗಡಿ ಪರವಾನಗಿ ರದ್ದು ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದರು.

ಕಾವೇರಿ ನದಿ ಪಾತ್ರದಲ್ಲಿನ ಗ್ರಾ.ಪಂ.ವ್ಯಾಪ್ತಿಯಲ್ಲಿನ ಕಲುಷಿತ ನೀರು ಬಿಡದಂತೆ ಎಚ್ಚರಿಕೆ ವಹಿಸಬೇಕು. ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬೀಸಾಡದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್‍ಗಳನ್ನು ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು. ಹೋಟೆಲ್‍ಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಇತರೇ ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ನಾಮಫಲಕ ಅಳವಡಿಸಿ ಜಾಗೃತಿ ಮೂಡಿಸಬೇಕು. ಇದನ್ನು ಉಲ್ಲಂಘಿಸಿದಲ್ಲಿ ಕಾಯ್ದೆ ಪ್ರಕಾರ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಪ್ಲಾಸ್ಟಿಕ್ ನಿಷೇಧ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಪ್ಲಾಸ್ಟಿಕ್‍ನ್ನು ನಿರ್ಮೂಲನೆ ಮಾಡಲು ಸಾಧ್ಯ ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 

ಪ್ಲಾಸ್ಟಿಕ್ ನಿಷೇಧ ಸಂಬಂಧಿಸಿದಂತೆ ಚೆಕ್‍ಪೋಸ್ಟ್ ಗಳಲ್ಲಿ ತಪಾಸಣೆ ಮಾಡಬೇಕು. ಪೇಪರ್ ಬ್ಯಾಗ್ ಅಥವಾ ಚೀಲದ ಬ್ಯಾಗ್‍ನ್ನು ಉಪಯೋಗಿಸಲು ಮಾಹಿತಿ ನೀಡಬೇಕಿದೆ ಎಂದು ಅವರು ಹೇಳಿದರು.

ಪರಿಸರ ಅಧಿಕಾರಿ ಗಣೇಶ್ ಮಾತನಾಡಿ, ಪ್ಲಾಸ್ಟಿಕ್ ಉತ್ಪಾದನಾ ಘಟಕಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ. ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ನಿಷೇಧ, ಪರಿಸರ ಸಂರಕ್ಷಣೆ ಬಗ್ಗೆ ಅವರು ಹಲವು ಮಾಹಿತಿ ನೀಡಿದರು.  

ಪವನ್ ಅಯ್ಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ, ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಪ್ರವಾಸಿ ಸ್ಥಳಗಳಲ್ಲಿ ಎಲ್ಲೆಂದರೆಲ್ಲಿ ಪ್ಲಾಸ್ಟಿಕ್‍ಗಳನ್ನು ಬೀಸಾಡಿ ಹೋಗುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಅವರು ಹೇಳಿದರು. 

ಅರುಣ್ ಅಪ್ಪಚ್ಚು ಅವರು ಮಾತನಾಡಿ, ಸ್ವಚ್ಛ ಕೊಡಗು ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಪ್ಲಾಸ್ಟಿಕ್ ನಿಷೇಧ ಅನುಷ್ಠಾನಗೊಳಿಸಲು ಸಾಧ್ಯ ಎಂದು ಅವರು ಹೇಳಿದರು.

ಸಿದ್ದಾಪುರ, ಗೋಣಿಕೊಪ್ಪ, ನೆಲ್ಲೆಹೊದಿಕೇರಿ, ಭಾಗಮಂಡಲ, ದುಬಾರೆ, ಅಭಿ ಜಲಪಾತ ಮತ್ತೀತರ ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಅತಿ ಹೆಚ್ಚಾಗಿದೆ. ಆದ್ದರಿಂದ  ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸುನೀಲ್ ಉತ್ತಪ್ಪ ಅವರು ಕೋರಿದರು.

ಮೊಂತಿ ಗಣೇಶ್ ಅವರು ಮಾತನಾಡಿ, ಮಡಿಕೇರಿ ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಹೆಚ್ಚಿನ ಅರಿವು ಇದೆ. ಉಳಿದ ಕಡೆಗಳಲ್ಲಿ ಇನ್ನಷ್ಟು ಅರಿವು ಮೂಡಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.  

ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಸಂಚಾಲಕರಾದ ಚಂದ್ರಮೋಹನ್ ಅವರು ಮಾತನಾಡಿ, ಕುಶಾಲನಗರ ಬಳಿ ಕಾವೇರಿ ನದಿಗೆ ಕಲುಷಿತ ನೀರನ್ನು ಬಿಡಲಾಗುತ್ತಿದ್ದು, ಇದನ್ನು ತಡೆಯಲಾಗಿದೆ ಕಾವೇರಿ ನದಿ ಪಾತ್ರದಲ್ಲಿ ಕಲುಷಿತ ನೀರು ಬಿಡದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಅವರು ತಿಳಿಸಿದರು. 

ಜಿ.ಪಂ.ಉಪಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ನಗರಾಭಿವೃದ್ಧಿ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕರಾದ ಗೋಪಾಲ ಕೃಷ್ಣ, ಪೌರಾಯುಕ್ತರಾದ ಬಿ.ಶುಭಾ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾದ ಶ್ರೀಧರ, ನಾಚಪ್ಪ, ಕೃಷ್ಣ ಪ್ರಸಾದ್, ತಹಶೀಲ್ದಾರರಾದ ಗೋವಿಂದರಾಜು, ನಗರ ಸಭೆಯ ಹಿರಿಯಾಧಿಕಾರಿ ರಮೇಶ್, ತಾಲ್ಲೂಕು ಪಂಚಾಯತ್ ಸಿಇಒ ಜೀವನ್ ಕುಮಾರ್ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News