ಚಾಮರಾಜನಗರ: ಸಮಗ್ರ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ನೀಡಲು ಒತ್ತಾಯಿಸಿ ಧರಣಿ
ಚಾಮರಾಜನಗರ, ಫೆ,26: ಹಿಂದುಳಿದ ಗಡಿ ಪ್ರದೇಶ, ದಕ್ಷಿಣ ಭಾಗದ ಕೊನೆಯ ಜಿಲ್ಲೆ ಚಾಮರಾಜನಗರ ಅಭಿವೃದ್ದಿಗೆ ರಾಜ್ಯ ಆಯ-ವ್ಯಯ ದಲ್ಲಿ ಯಾವುದೇ ಸಹಾಯ ಮಾಡದಿರುವ ನೀತಿಯನ್ನು ಖಂಡಿಸಿ ಹಾಗೂ ಸಮಗ್ರ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇದಕ್ಕೂ ಮೊದಲು ಶ್ರೀ ಚಾಮರಾಜೇಶ್ವರ ಉದ್ಯಾನವನ ಮುಂಭಾಗದಿಂದ ವಾಟಾಳ್ ನಾಗರಾಜ್ ಅವರ ನಾಯಕತ್ವದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳು ಮೆರವಣಿಗೆ ಹೊರಟು ತ್ಯಾಗರಾಜ ರಸ್ತೆಯ ಮುಖಾಂತರ ಸಾಗಿ ಶ್ರೀ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಚಾಮರಾಜನಗರ ದಿಕ್ಕು ಕೆಟ್ಟ ನಗರವಾಗಿದೆ. ಯಾವ ದಿಕ್ಕಿಗೆ ಹೋಗಬೇಕು ಎಂಬುವುದು ಗೊತ್ತಾಗುತ್ತಿಲ್ಲ. ನಾಮಫಲಕ ಹಾಕಿಲ್ಲ. ರಸ್ತೆಯ ಕಾಮಗಾರಿ ಹೆಸರಿನಲ್ಲಿ ರಸ್ತೆಗಳನ್ನು ಬಂದ್ ಮಾಡಿರುವುದು ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ವೈಜ್ಞಾನಿಕವಾಗಿ ಪ್ರಗತಿ ಕಾರ್ಯ ನಡೆಯುತ್ತಿಲ್ಲ. ನಗರದಲ್ಲಿ ಹೇಳುವರು-ಕೇಳುವರು ಇಲ್ಲವಂತಾಗಿದೆ. ಜಿಲ್ಲಾ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದರು.
ರಸ್ತೆ ಮಾಡುವ ನೆಪದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ, ಮಳಿಗೆಗಳು, ಮನೆಗಳನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡದೆ ನೋಯಿಸಿದ್ದಿರಿ. ಅವರನ್ನು ಹೆದರಿಸಿ-ಬೆದರಿಸಿ ರೌಡಿಸಂ ಮಾಡಿದ್ದಿರಿ. ಇದೇನೋ ಮಿಲಿಟರಿ ಸರ್ಕಾರವೇ ಎಂದು ಪ್ರಶ್ನಿಸಿದ ವಾಟಾಳ್ ಜಿಲ್ಲಾ ಆಡಳಿತ ಸತ್ತು ಹೋಗಿದೆ ಎಂದರು.
ಪೌರಕಾರ್ಮಿಕರಿಗೆ ಕಳೆದ 3ತಿಂಗಳಿಂದ ಸಂಬಳ ನೀಡಿಲ್ಲ. ಅವರ ಪರಿಸ್ಥಿತಿ ಚಿಂತಾ ಜನಕವಾಗಿದೆ. ಇನ್ನು ಒಂದು ವಾರದ ಒಳಗೆ ಪೌರಕಾರ್ಮಿಕರಿಗೆ ಸಂಬಳ ಕೊಡದಿದ್ದರೆ ನಗರ ಸಭೆಯ ಮುಂದೆ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಗೆ ಬೀಗ ಹಾಕಿ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್ ತಿಳಿಸಿದರು.
ಚಾಮರಾಜನಗರದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಚಾಮರಾಜನಗರದಲ್ಲಿ ವಾಸ್ತವ್ಯ ಮಾಡುತ್ತಿಲ್ಲ. ಮೈಸೂರಿನಿಂದ ಬೆಳಿಗ್ಗೆ ಬರುತ್ತಾರೆ ಮಧ್ಯಾಹ್ನ ಅಥವಾ ಸಂಜೆ ಮೈಸೂರಿಗೆ ತೆರಳುತ್ತಾರೆ. ನೀವೂ ಏನೋ ಮೈಸೂರಿನ ಅಧಿಕಾರಿಗಳೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್, ಜಿಲ್ಲಾ ಆಡಳಿತ ಅಧಿಕಾರಿಗಳನ್ನು ತಮ್ಮ ಹಿಡಿತಕ್ಕೆ ಇಟ್ಟುಕೊಳ್ಳಲು ಜಿಲ್ಲಾ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ತಾಳವಾಡಿ, ಹೊಸೂರು, ಅಕ್ಕಲಕೋಟೆ, ಅಥಣಿ, ಸೊಲ್ಲಾಪುರ, ಕಾಸರಗುಡು ಸೇರಿದಂತೆ ಹೊರನಾಡು, ಗಡಿನಾಡು, ಹೈದರಾಬಾದ್, ಕರ್ನಾಟಕ, ಉತ್ತರ ಕರ್ನಾಟಕ, ನಂಜುಂಡಪ್ಪ ವರದಿ ಸೇರಿದಂತೆ ಇನ್ನು ಅನೇಕ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗಮನಹರಿಸದೆ ಸ್ಟಂಟ್ ಚುನಾವಣಾ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಟಾಳ್ ಆರೋಪಿಸಿದರು.
ಈ ಸಂದರ್ಭದಲ್ಲಿ ದಳಪತಿ ವೀರತಪ್ಪ, ಕಾರ್ ನಾಗೇಶ್, ಚಾ.ರಂ.ಶ್ರೀನಿವಾಸಗೌಡ, ಸುರೇಶ್‍ನಾಗ್, ನಾಗರಾಜಮೂರ್ತಿ, ಹುಂಡಿಬಸವಣ್ಣ, ವರದನಾಯಕ, ರಾಮಯ್ಯ, ಕಾಗಲವಾಡಿ ಶಿವು, ಮಿಠಾಯಿಲಿಂಗಣ್ಣ, ಶಿವಲಿಂಗಮೂರ್ತಿ, ಗೋವಿಂದನಾಯಕ, ಕೆಂಪಣ್ಣ, ರೇವಣ್ಣಸ್ವಾಮಿ, ಚಿಕ್ಕಹೊಳೆ ಸಿದ್ದರಾಜು, ಪ್ರಕಾಶ್‍ಹೆಗ್ಗೋಠಾರ, ನಿಂಗಶೆಟ್ಟಿ, ಲಿಂಗರಾಜು, ಮಹೇಶ್, ಚನ್ನಂಜಯ್ಯ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.