ಯೋಗಿಯ ವೇಷದಲ್ಲಿ ಖಾಕಿಯ ಕ್ರೌರ್ಯ

Update: 2018-02-26 18:46 GMT

ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 2017ರ ಮಾರ್ಚ್ ಮತ್ತು 2018ರ ಜನವರಿಯ ನಡುವೆ 921 ಎನ್‌ಕೌಂಟರ್‌ಗಳು ನಡೆದಿವೆ ಮತ್ತು ಇವುಗಳಲ್ಲಿ 33 ಜನರು ಸಾವನ್ನಪ್ಪಿದ್ದಾರೆ. ಈ ಅಪಾರ ಸಂಖ್ಯೆಯ ಕೊಲೆಗಳನ್ನು ಗಮನಕ್ಕೆ ತೆಗೆದುಕೊಂಡ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತಾನೇ ಸ್ವಯಂ ಪ್ರೇರಿತವಾಗಿ ಉತ್ತರಪ್ರದೇಶ ಸರಕಾರಕ್ಕೆ ಕಳೆದ ನವೆಂಬರ್‌ನಲ್ಲಿ ನೋಟಿಸನ್ನು ನೀಡಿದೆ. ಆದರೆ ಉತ್ತರಪ್ರದೇಶ ಸರಕಾರ ಈವರೆಗೆ ಅದಕ್ಕೆ ಉತ್ತರಿಸುವ ಗೋಜಿಗೂ ಹೋಗಿಲ್ಲ. ವಿಶೇಷವೆಂದರೆ ತನ್ನನ್ನು ತಾನು ಸ್ವಯಂಘೋಷಿತ ಸನ್ಯಾಸಿಯೆಂದು ಹೇಳುತ್ತಿರುವ ಯೋಗಿ ಆದಿತ್ಯನಾಥ್‌ಗೆ ಈ ಹಿಂಸೆಯ ಬಗ್ಗೆ ಹೆಮ್ಮೆಯಿದೆ. ‘‘ಉತ್ತರ ಪ್ರದೇಶದ ಪೊಲೀಸರು ಗುಂಡಿಗೆ ಗುಂಡಿನಿಂದಲೇ ಉತ್ತರಿಸುತ್ತಾರೆ’’ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಹಿಂದಿನ ಸರಕಾರಗಳಂತಲ್ಲದೆ ನಮ್ಮ ಸರಕಾರವು ಈ ಸಮಸ್ಯೆಯನ್ನು ಬಗೆಹರಿಸಲು ಯಾವ ಪದ್ಧತಿಯು ಸಮರ್ಪಕವಾದದ್ದೋ ಅದನ್ನು ಅನುಸರಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ಬಹುಶಃ ಯೋಗಿಯ ಆಡಳಿತದಲ್ಲಿ ಮೆಚ್ಚತಕ್ಕ ಯಾವ ಅಂಶಗಳೂ ಈವರೆಗೆ ಪ್ರಕಟವಾಗದ ಹಿನ್ನೆಲೆಯಲ್ಲಿ, ಅವರ ಭಕ್ತರು ಇದನ್ನೇ ಉತ್ತರಪ್ರದೇಶ ಸರಕಾರದ ಸಾಧನೆಯೆಂದು ಹೇಳಿಕೊಳ್ಳಬಹುದು. ಅವರ ಕ್ಷಾತ್ರೀಯ ತೇಜಸ್ಸಿಗೆ ಈ ಎನ್‌ಕೌಂಟರ್‌ಗಳನ್ನು ಉದಾಹರಣೆಯಾಗಿ ಭಕ್ತರು ಬಳಸಿಕೊಳ್ಳಬಹುದು. ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಎನ್‌ಕೌಂಟರ್‌ಗಳು ನಡೆದ ಬಳಿಕವೂ ಉತ್ತರ ಪ್ರದೇಶವು ಯೋಗಿಯ ಆಡಳಿತದಲ್ಲಿ ಹಿಂದೆಂದಿಗಿಂತ ಹೆಚ್ಚು ಕ್ರೈಮ್‌ಗಳಿಗೆ ಸಾಕ್ಷಿಯಾಗಿದೆ. ಈ ಎನ್‌ಕೌಂಟರ್‌ಗಳಿಂದ ನಿಜಕ್ಕೂ ಕ್ರಿಮಿನಲ್‌ಗಳು ಒಬ್ಬೊಬ್ಬರಾಗಿ ಸಾಯುತ್ತಿದ್ದಾರೆ ಎಂದಾದರೆ, ಕ್ರೈಮ್ ಕಾರಣಕ್ಕಾಗಿ ಯಾಕೆ ಉತ್ತರ ಪ್ರದೇಶ ಸುದ್ದಿಯಲ್ಲಿದೆ? ಈ ಪ್ರಶ್ನೆ ಯಾರಿಗೂ ಬೇಕಾಗಿಲ್ಲ.

ಆಸ್ಪತ್ರೆಗಳಲ್ಲಿ ಒಂದೇ ದಿನ ನೂರಕ್ಕೂ ಅಧಿಕ ಶಿಶುಗಳು ಮೃತಪಟ್ಟ ಕಳಂಕವನ್ನು ಯೋಗಿ ಸರಕಾರ ಹೊತ್ತುಕೊಂಡಿದೆ. ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶ ಅಭಿವೃದ್ಧಿಯಲ್ಲಿ ಕೆಳಮಟ್ಟಕ್ಕೆ ತಳ್ಳಲ್ಪಡುತ್ತಿದೆ. ನಕಲಿ ಗೋರಕ್ಷಕರು ಬೀದಿಗಳಲ್ಲಿ ನಡೆಸುತ್ತಿರುವ ಅಪರಾಧಗಳೂ ಹೆಚ್ಚುತ್ತಿವೆ. ಸ್ವತಃ ಯೋಗಿ ಆದಿತ್ಯನಾಥ್ ಅವರ ಪಕ್ಷದ ಕಾರ್ಯಕರ್ತರೇ ಅಪರಾಧ ಪ್ರಕರಣಗಳಲ್ಲಿ ಹೆಚ್ಚು ಹೆಚ್ಚಾಗಿ ಗುರುತಿಸಲ್ಪಡುತ್ತಿದ್ದಾರೆ. ಹೀಗಿರುವಾಗ ಎನ್‌ಕೌಂಟರ್‌ಗಳ ಮೂಲಕ ತನ್ನ ಹಿಂಬಾಲಕರನ್ನು ತಣಿಸುವ ಪ್ರಯತ್ನದಲ್ಲಿದ್ದಾರೆ ಆದಿತ್ಯನಾಥ್. ಆದರೆ ಇದರಿಂದ ಸರ್ವಾಧಿಕಾರಿ ಪೊಲೀಸರ ಸೃಷ್ಟಿಯಾಗುತ್ತದೆಯೇ ಹೊರತು, ಜನರಿಗೆ ನೆಮ್ಮದಿಯಿಲ್ಲ. ಈಗ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಹೆಚ್ಚಿನ ಎನ್‌ಕೌಂಟರ್‌ಗಳೂ ನಕಲಿಯಾಗಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಕೊಲೆಯಾದವರ ಕುಟುಂಬದವರು ಹೇಳುವಂತೆ ಆ ವ್ಯಕ್ತಿಗಳನ್ನು ಪೊಲೀಸರು ಮನೆಯಿಂದ ಎಳೆದೊಯ್ದಿರುತ್ತಾರೆ. ಆದರೆ ನಂತರದಲ್ಲಿ ಅವರು ಎನ್‌ಕೌಂಟರ್‌ನಲ್ಲಿ ಕೊಲೆಯಾದರೆಂಬ ಸುದ್ದಿ ಪತ್ರಿಕೆಗಳಲ್ಲಿ ಬರುತ್ತದೆ. ಆದರೆ ರಾಜ್ಯ ಸರಕಾರವು ಮಾತ್ರ ಈ ಆತಂಕಗಳನ್ನು ಕಿಂಚಿತ್ತೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಬದಲಿಗೆ ಈ ಎನ್‌ಕೌಂಟರ್ ಕೊಲೆಗಳು ರಾಜ್ಯದ ಕ್ರಿಮಿನಲ್ ಲೋಕದ ಮೇಲೆ ಸರಕಾರವು ಗಳಿಸಿದ ಜಯವೆಂಬಂತೆ ಬಣ್ಣಿಸುತ್ತಿದೆ. ಆದರೆ ವಾಸ್ತವದಲ್ಲಿ ಉತ್ತರಪ್ರದೇಶದ ಕ್ರಿಮಿನಲ್ ಗ್ಯಾಂಗುಗಳ ಬೇರುಗಳು ರಾಜ್ಯದ ರಾಜಕೀಯವನ್ನೇ ಬೆಸೆದುಕೊಂಡಿದೆ.

ಇಂದು ತನ್ನ ವಿರೋಧಿ ತಂಡವನ್ನು ಬಗ್ಗು ಬಡಿಯಲು ಆದಿತ್ಯನಾಥ್ ಸರಕಾರ, ಎನ್‌ಕೌಂಟರ್ ಹೆಸರಲ್ಲಿ ಪೊಲೀಸರಿಗೆ ಅಧಿಕಾರ ನೀಡಿದೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಹೂಡಿಕಾ ಸಮಾವೇಶಕ್ಕೂ ಈ ಎನ್‌ಕೌಂಟರ್‌ಗಳಿಗೆ ನೇರ ಸಂಬಂಧವಿದೆ. . ಪ್ರಧಾನಿ ನರೇಂದ್ರ ಮೋದಿಯವರು, 18 ಜನ ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು ಮತ್ತು ಪ್ರಮುಖ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದ ಉತ್ತರಪ್ರದೇಶದ ಹೂಡಿಕಾ ಸಮಾವೇಶಕ್ಕೆ ಮುಂಚಿನ 10 ದಿನಗಳಲ್ಲಿ ಪೊಲೀಸರು ಮತ್ತು ತಥಾಕಥಿತ ಕ್ರಿಮಿನಲ್‌ಗಳ ನಡುವೆ ನಾಲ್ಕು ಎನ್‌ಕೌಂಟರ್‌ಗಳು ನಡೆದವು. ಪೊಲೀಸರನ್ನು ಮುಂದಿಟ್ಟುಕೊಂಡು ಎಲ್ಲ ಪ್ರಶ್ನೆಗಳನ್ನು, ಪ್ರತಿಭಟನೆಗಳನ್ನು ಮುಚ್ಚಿ ಹಾಕುವ, ದಮನಿಸುವ ಸ್ಪಷ್ಟ ಉದ್ದೇಶವನ್ನು ಆದಿತ್ಯನಾಥ್ ಹೊಂದಿದ್ದಾರೆ. ಪ್ರಭುತ್ವದ ಬೆಂಬಲದೊಂದಿಗೆ ನಡೆಯುವ ಎನ್‌ಕೌಂಟರ್‌ಗಳ ಅಂತಿಮ ಪರಿಣಾಮ ಏನು ಎನ್ನುವುದಕ್ಕೆ ಗುಜರಾತ್ ಮತ್ತು ಮಹಾರಾಷ್ಟ್ರ ನಮ್ಮ ಮುಂದೆ ಉದಾಹರಣೆಯಾಗಿ ನಿಂತಿದೆ.

ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ಗಳ ತನಿಖೆ ಪೊಲೀಸರ ನಿಜ ಸ್ವರೂಪವನ್ನು ಹಂತಹಂತವಾಗಿ ಬಯಲಿಗೆ ತರುತ್ತಿದೆ. ಪೊಲೀಸರ ಈ ಸರ್ವಾಧಿಕಾರವನ್ನು ಶ್ರೀಸಾಮಾನ್ಯರು ಬೆಂಬಲಿಸತೊಡಗಿದರೆ ಪೊಲೀಸರು ಕೋವಿ ಹಿಡಿದುಕೊಂಡು ಒಂದಲ್ಲ ಒಂದು ದಿನ ಅವರ ಮನೆ ಬಾಗಿಲಿಗೇ ಬರುತ್ತಾರೆ. ಎನ್‌ಕೌಂಟರ್‌ಗಳ ವೈಭವೀಕರಣ ಆರಂಭವಾದುದು ಮಹಾರಾಷ್ಟ್ರದಲ್ಲಿ. ಭೂಗತ ಪಾತಕಿಗಳನ್ನು ನಿಯಂತ್ರಿಸುವುದಕ್ಕಾಗಿ ಈ ಎನ್‌ಕೌಂಟರ್‌ಗಳು ಅನಿವಾರ್ಯ ಎಂದು ಜನ ಸ್ವಾಗತಿಸತೊಡಗಿದರು. ಇದರಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳು ಜನಸಾಮಾನ್ಯರ ಪಾಲಿಗೆ ಹೀರೋಗಳಾದರು. ಆದರೆ ಈ ಎನ್‌ಕೌಂಟರ್‌ಗಳ ಹೆಸರಿನಲ್ಲಿ ಪೊಲೀಸರೇ ಭೂಗತ ಪಾತಕಿಗಳ ಜೊತೆಗೆ ನಿಂತು ಅವರ ವೈರಿಗಳನ್ನು ಸದೆಬಡಿಯಲು ನೆರವಾದರು. ಆ ಮೂಲಕ ಪೊಲೀಸ್ ಅಧಿಕಾರಿಗಳು ಕೋಟಿ ಗಟ್ಟಳೆ ಹಣ ಮಾಡಿಕೊಂಡರು. ಹಲವು ಅಮಾಯಕರೂ ಈ ಪೊಲೀಸರ ಕ್ರೌರ್ಯಕ್ಕೆ ಬಲಿಯಾಗಬೇಕಾಯಿತು. ಒಂದು ರೀತಿಯಲ್ಲಿ, ಪೊಲೀಸರು ನ್ಯಾಯಾಲಯದ ಪಾತ್ರವನ್ನು ವಹಿಸತೊಡಗಿದ್ದು ಇದೇ ಸಂದರ್ಭದಲ್ಲಿ. ಪೊಲೀಸ್ ಕ್ರೌರ್ಯ ಮಹಾರಾಷ್ಟ್ರದಿಂದ ಗುಜರಾತ್‌ಗೆ ರವಾನೆಯಾಯಿತು. ಅಲ್ಲಿಂದೀಗ ಉತ್ತರಪ್ರದೇಶಕ್ಕೆ ವಿಸ್ತರಣೆಗೊಂಡಿದೆ.

ಪೊಲೀಸರಿಗೆ ಗುಂಡಿಕ್ಕುವ ಸರ್ವ ಹಕ್ಕುಗಳನ್ನು ನೀಡುವ ಮೂಲಕ, ರಾಜ್ಯದ ನ್ಯಾಯಾಲಯಗಳ ಬಾಗಿಲಿಗೆ ಆದಿತ್ಯನಾಥ್ ಬೀಗ ಜಡಿಯಲು ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಎನ್‌ಕೌಂಟರ್ ಕೊಲೆಗಳ ಬಗ್ಗೆ ಉತ್ತರಪ್ರದೇಶ ಸರಕಾರವನ್ನು ಉತ್ತರದಾಯಿಯನ್ನಾಗಿ ಮಾಡುವ ಕ್ರಮಗಳನ್ನು ಮುಂದುವರಿಸುವುದು ತುಂಬಾ ಮುಖ್ಯ. ಒಂದು ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ಅದನ್ನು ಅವರು ಸಂಶಯಾತೀತವಾಗಿ ಸಾಬೀತುಮಾಡಬೇಕು. ಹಾಗಿಲ್ಲದೆ ಎನ್‌ಕೌಂಟರ್‌ನಲ್ಲಿ ಕೊಲೆಯಾದ ಕೆಲವು ವ್ಯಕ್ತಿಗಳ ಮರಣೋತ್ತರ ಪರೀಕ್ಷೆಗಳ ವರದಿಗಳು ತೋರಿಸುವಂತೆ ತೀರಾ ಹತ್ತಿರದಿಂದ ಗುಂಡು ಹೊಡೆದು ವ್ಯಕ್ತಿಯ ಕೊಲೆಯಾಗಿದ್ದಲ್ಲಿ ಕಾನೂನನ್ನು ಪಾಲಿಸಲು ನೇಮಕವಾದವರೇ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಭಾವಿಸಲು ಅದು ಸಾಕಷ್ಟು ಕಾರಣಗಳನ್ನು ಒದಗಿಸುತ್ತದೆ. ಅಪರಾಧಿಗಳನ್ನು ಮಟ್ಟ ಹಾಕುವ ಹೆಸರಿನಲ್ಲಿ ಪ್ರಭುತ್ವವೇ ಧೂರ್ತನಾಗಿ ವರ್ತಿಸತೊಡಗಿದಾಗ ಅಮಾಯಕ ಜೀವನಗಳು ಹೆಚ್ಚೆಚ್ಚು ಅಪಾಯಕ್ಕೆ ಈಡಾಗುತ್ತವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News