×
Ad

ಕೇಂದ್ರದಿಂದ ದೊರೆತ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ: ಪ್ರಧಾನಿ ಮೋದಿ

Update: 2018-02-27 20:15 IST

ದಾವಣಗೆರೆ,ಫೆ.27: ಕರ್ನಾಟಕ ಜನ ಬಹಳ ಒಳ್ಳೆಯವರು. ಇಲ್ಲಿನ ಜನ ಎಂತಹ ತ್ಯಾಗಕ್ಕೂ ಸಿದ್ಧ ಎಂಬುದನ್ನು ನಾನು ಬಲ್ಲೆ. ಕರ್ನಾಟಕ ಅಭಿವೃದ್ಧಿ ಹೊಂದಿದರೆ ಇಡೀ ದೇಶವೇ ಮುಂದುವರೆಯುತ್ತದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ 2 ಲಕ್ಷ ಕೋಟಿ ಅನುದಾನ ನೀಡಿದ್ದರೂ ಇಲ್ಲಿನ ಸರ್ಕಾರ ಅದರ ಬಹುಪಾಲು ಭಾಗ ಬಳಕೆಯನ್ನೇ ಮಾಡಿಲ್ಲ ಎಂದು ಪ್ರಧಾನಿ ಮೋದಿ ಅವರು ಟೀಕಿಸಿದರು. 

ನಗರದ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ಬಿ.ಎಸ್. ಯಡಿಯೂರಪ್ಪ ಅವರು 75ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಾಜ್ಯರೈತ ಸಮಾವೇಶದಲ್ಲಿ ಅವರು ಮಾತನಾಡಿದರು. ಜನರ ಧ್ವನಿಯಾಗಿ ಕೆಲಸ ಮಾಡುವ ಪ್ರಾಮಾಣಿಕ ಸರ್ಕಾರ ರಾಜ್ಯಕ್ಕೆ ಬೇಕಿದೆ. ಕೇಂದ್ರದಲ್ಲಿ ಜನರಿಗೆ ಸ್ಪಂದಿಸುವ ಸರ್ಕಾರವಿದ್ದು, ರಾಜ್ಯದಲ್ಲೂ ಅಂತಹ ಸರ್ಕಾರ ಬಂದರೆ ಇಷ್ಟು ದಿನ ಆಗದ ಕೆಲಸಗಳನ್ನು ಇನ್ನು 5 ವರ್ಷದಲ್ಲಿ ಮಾಡಿತೋರಿಸುತ್ತೇವೆ. ರೈತನಾಯಕ ಯಡಿಯೂರಪ್ಪ ಜನ್ಮದಿನದಂದು ಸಮೃದ್ಧ ರಾಜ್ಯ, ಸುಖೀ ರೈತ, ಸುಭದ್ರ ಮಹಿಳೆ, ಸ್ವಾವಲಂಬಿ ಯುವಜನ ಕನಸುಗಳನ್ನು ಸಾಕಾರಗೊಳಿಸಲು ಸಂಕಲ್ಪ ಮಾಡೋಣ ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಜ್ಯಕ್ಕೆ ಹಣಕಾಸು ಆಯೋಗದಿಂದ 73 ಸಾವಿರ ಕೋಟಿ ಅನುದಾನ ಬರುತ್ತಿತ್ತು. ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ. ಕೊಟ್ಟಿದ್ದೇವೆ. ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದಿಂದ ಸಾಕಷ್ಟು ಅನುದಾನ, ನೆರವು ನೀಡಿದ್ದೇವೆ. ಆದರೆ, ಇಲ್ಲಿನ ಬೇಜವಾಬ್ದಾರಿ ಸರ್ಕಾರವು ಕೇಂದ್ರದ ಯೋಜನೆ, ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಕೇಂದ್ರದ ಅನುದಾನವನ್ನೂ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಸರ್ವ ಶಿಕ್ಷಾ ಅಭಿಯಾನ, ತಾಂತ್ರಿಕ ಶಿಕ್ಷಣ, ಕುಡಿಯುವ ನೀರು ಯೋಜನೆ, ನೀರಾವರಿ ಯೋಜನೆ, ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಹೀಗೆ ಎಲ್ಲಾ ಯೋಜನೆಗಳಲ್ಲಿ ಹಣ ಖರ್ಚಾಗದೇ ಉಳಿದಿದೆ. ಅಭಿವೃದ್ಧಿಗಾಗಿ ಕೊಟ್ಟ ಅನುದಾನ ಖರ್ಚು ಮಾಡಲೂ ಇಲ್ಲಿನ ಸರ್ಕಾರಕ್ಕೆ ಸಾಮರ್ಥ್ಯವಿಲ್ಲ. ಇಂತಹದ್ದೊಂದು ಸಂವೇದನಾರಹಿತ ಸರ್ಕಾರ ಇಲ್ಲಿ ಆಡಳಿತ ನಡೆಸುತ್ತಿರುವುದು ಜನರ ದೌರ್ಭಾಗ್ಯ ಎಂದರು.

ಭಾರತದ ಭವಿಷ್ಯ ಬದಲಾಗಲು ಗ್ರಾಮ ಮತ್ತು ರೈತರ ಜೀವನ ಸುಧಾರಿಸಬೇಕು ಎಂಬುದು ಬಿಜೆಪಿ ನಂಬಿಕೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಕಲ್ಯಾಣ, ಕೃಷಿ ವಿಕಾಸ, ಗ್ರಾಮೀಣ ಪರಿವರ್ತನೆ ದಿಸೆಯಲ್ಲಿ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ. ಫಸಲ್ ವಿಮಾ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್ ರೀತಿಯ ಕ್ರಾಂತಿಕಾರಕ ಯೋಜನೆಗಳು ಯಶಸ್ವಿಯಾಗಿದ್ದು, ರೈತರಲ್ಲಿ ಆಶಾಭಾವ ಮೂಡಿಸಿವೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ವೈಜ್ಞಾನಿಕ ಬೆಲೆ, ಜಾಗತಿಕ ಬಂಡವಾಳ ಹೂಡಿಕೆ, ಆಧುನಿಕ ತಂತ್ರಜ್ಞಾನದ ಮೂಲಕ ಇನ್ನು 5 ವರ್ಷದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ದೂರದೃಷ್ಟಿಯೊಂದಿಗೆ ನಾವು ಮುಂದುವರೆಯುತ್ತಿದ್ದೇವೆ ಎಂದು ಅವರು ನುಡಿದರು.

ಸಮಾವೇಶದಲ್ಲಿ ಸಿ.ಟಿ. ರವಿ, ಗೋವಿಂದ ಕಾರಜೋಳ, ಸಿ.ಎಂ.ಉದಾಸಿ, ಎಸ್.ಎ.ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ಸಂಸದರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಬಸವರಾಜ ನಾಯ್ಕ, ಎಸ್.ವಿ.ರಾಮಚಂದ್ರ, ಬಿ.ಪಿ. ಹರೀಶ, ಮಾಡಾಳ್ ವಿರೂಪಾಕ್ಷಪ್ಪ, ಅರುಣ ಕುಮಾರ, ಶಂಕರಗೌಡ ಪಾಟೀಲ್, ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಈಶ್ವರಚಂದ್ರ, ಯಶವಂತರಾವ್ ಜಾಧವ್ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News