ಬ್ಯಾಂಕ್ ಲೂಟಿಯಲ್ಲಿ ಪ್ರಧಾನಿ ಮೋದಿ ನೇರ ಭಾಗಿ: ರಣದೀಪ್ ಸುರ್ಜೆವಾಲಾ
ಬೆಂಗಳೂರು, ಫೆ.27: ಸಾರ್ವಜನಿಕರ ಹಣ ಲೂಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇರವಾಗಿ ಭಾಗಿಯಾಗಿರುವುದು ವಜ್ರ ವ್ಯಾಪಾರಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಬ್ಯಾಂಕ್ ಹಗರಣದಲ್ಲಿ ಬಹಿರಂಗಗೊಂಡಿದೆ ಎಂದು ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಹ ವಕ್ತಾರರಾದ ಪ್ರಿಯಾಂಕ ಚತುರ್ವೇದಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಳೆದ ಹತ್ತು ದಿನದಲ್ಲೇ 31,691 ಕೋಟಿ ರೂ. ಲೂಟಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು ಕಳ್ಳರಿಗೆ ಸಹಕಾರಿಯಾಗಿವೆ ಎಂದು ದೂರಿದರು.
ಬಿಜೆಪಿ ಆಡಳಿತದ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ನೀರವ್ ಮೋದಿ ಹಾಗೂ ಚೋಕ್ಸಿ ಹಗರಣ ನಡೆದಿವೆ ಎಂದ ಅವರು, ಇದೆಲ್ಲವೂ ಪ್ರಧಾನಮಂತ್ರಿ ಕಚೇರಿ, ಜಾರಿ ನಿರ್ದೇಶನಾಲಯ, ತಂತ್ರಜ್ಞಾನ ವ್ಯವಹಾರಗಳ ಸಚಿವಾಲಯ, ಎಸ್‌ಎಫ್‌ಐಒ (ಗಂಭೀರ ವಂಚನೆಗಳ ತನಿಖಾ ಕಚೇರಿ) ಎಲ್ಲರಿಗೂ ಗೊತ್ತಿದೆ. ಅದಲ್ಲದೆ, ಈ ಎಲ್ಲ ಅಧಿಕಾರಿಗಳಿಗೂ ಲೂಟಿಕೋರರ ಬಗ್ಗೆ ಈ ಹಿಂದೆಯೇ ದೂರುಗಳು ಬಂದಿದ್ದರೂ ಉದ್ದೇಶಪೂರ್ವಕವಾಗಿ ಹಗರಣಕ್ಕೆ ಪ್ರೋತ್ಸಾಹಿಸಿದರು ಎಂದು ಆಪಾದಿಸಿದರು.
ಲಲಿತ್ ಮೋದಿ, ವಿಜಯ್ ಮಲ್ಯ ಬಳಿಕ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಇಬ್ಬರೂ ಸುಮಾರು 30 ಬ್ಯಾಂಕ್‌ಗಳಿಂದ 22,606 ಕೋಟಿ ರೂ. ಕೊಳ್ಳೆ ಹೊಡೆದಿದ್ದಾರೆ. ಮೋದಿ ಆಡಳಿತ ಅವಧಿಯಲ್ಲಿ ಐದು ದಿನಗಳಲ್ಲಿ ರೊಟೊಮ್ಯಾಕ್ ಮಾಲಕ 3,695 ಕೋಟಿ, ಜ್ಯುವೆಲರಿ ಕಂಪೆನಿ ದ್ವಾರಕಾದಾಸ್ ಇಂಟರ್ ನ್ಯಾಷನಲ್ ಪ್ರೈ.ಲಿ. ಪೋಂಜಿ ಬ್ಯಾಂಕ್ ಮತ್ತು ಸಾಲದ ಪತ್ರಗಳನ್ನು ನೀಡಿ ಓರಿಯಂಟಲ್ ಬ್ಯಾಂಕಿಗೆ 390 ಕೋಟಿ ರೂ. ವಂಚಿಸಿರುವುದೂ ಬೆಳಕಿಗೆ ಬಂದಿದೆ ಎಂದರು.
ಹಗರಣದ ಬಗ್ಗೆ ಈ ಮೊದಲೇ ಇಡಬ್ಲೂ ಅಹಮದಾಬಾದ್, ಗುಜರಾತ್ ಡಿಸಿಪಿ ಮತ್ತು ಮುಂಬೈಗಳಲ್ಲಿ ಎಫ್‌ಐಆರ್ ಆಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ನೀರವ್ ಮೋದಿ ಹಾಗೂ ಚೊಕ್ಸಿ ಹಗರಣ 2017 ಹಾಗೂ 2018ರಲ್ಲಿ ನಡೆದಿರುವುದು ಸಿಬಿಐ ಎಫ್‌ಐಆರ್ ವರದಿಯಲ್ಲಿ ಉಲ್ಲೇಖ ಆಗಿದೆ. ವಂಚನೆಗೆ ಅವಕಾಶ ಮಾಡಿಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.
ಬಿಜೆಪಿ ವಕ್ತಾರೆಯೇ ಭಾಗಿ
ಬಿಜೆಪಿ ವಕ್ತಾರರಾದ ಶೈನಾ ಎನ್.ಸಿ. ಅವರ ಸೊಸೆ ಅಪರ್ಣಾ ಚೌದಾಸಮ ಅವರು ನೀರವ್ ಮೋದಿ ಅವರ ವ್ಯಾವಹಾರಿಕ ಅಧಿಕಾರಿ. ಅವರ ಗೀತಾಂಜಲಿ ಸಮೂಹದ ಪ್ರದರ್ಶನಕ್ಕೆ ಶೈನಾ ಎನ್.ಸಿ. ನೆರವಾಗಿದ್ದು, 2015ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯ ಪತ್ನಿ ಅಮೃತಾ ಫಡ್ನವಿಸ್, ಗುಜರಾತ್‌ನ ಅಂದಿನ ಮುಖ್ಯಮಂತ್ರಿ ಆನಂದಿ ಬೆನ್ ಪುತ್ರಿ ಅನಾರ್ ಪಟೇಲ್ ಕೂಡ ಅವರ ಜೊತೆ ಭಾಗಿಯಾಗಿದ್ದರು. ಇಷ್ಟಾದರೂ ಬಿಜೆಪಿ ನಾಯಕರೊಂದಿಗಿನ ಸಂಬಂಧದ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ?
-ರಣದೀಪ್ ಸಿಂಗ್ ಸುರ್ಜೆವಾಲಾ ಎಐಸಿಸಿ ವಕ್ತಾರ