×
Ad

ಶಿವಮೊಗ್ಗ: ಖಬರಸ್ಥಾನದಲ್ಲಿ ರಸ್ತೆ ನಿರ್ಮಾಣಕ್ಕೆ ಯತ್ನ; ಗ್ರಾಮಸ್ಥರ ಪ್ರತಿಭಟನೆ

Update: 2018-02-27 20:59 IST

ಶಿವಮೊಗ್ಗ, ಫೆ. 27: ಜಿಲ್ಲೆಯ ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದಲ್ಲಿರುವ ಖಬರಸ್ಥಾನದಲ್ಲಿ ರಸ್ತೆ ನಿರ್ಮಾಣಕ್ಕೆ ಜಾಗ ನೀಡುವಂತೆ ಕೆಲವರು ಒತ್ತಡ ಹಾಕುತ್ತಿದ್ದಾರೆ. ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಆನವೇರಿ ಗ್ರಾಮಸ್ಥರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿದರು.

'ಗ್ರಾಮದ ಸರ್ವೇ ನಂಬರ್ 6 ರಲ್ಲಿ ಖಬರಸ್ಥಾನವಿದೆ. ಈ ಸ್ಥಳದಲ್ಲಿ ಸಮೀಪದಲ್ಲಿಯೇ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಇವರಿಗೆ ಓಡಾಡಲು ಸೂಕ್ತ ರಸ್ತೆಯಿದೆ. ಆದರೆ ಖಬರಸ್ಥಾನದಲ್ಲಿಯೇ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡಬೇಕು ಎಂದು ಇವರು ಒತ್ತಾಯಿಸುತ್ತಿದ್ದಾರೆ' ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಖಬರಸ್ಥಾನದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ನೀವು ಊರಿನಲ್ಲಿ ಇರಬಾರದು ಎಂದು ಜೀವ ಬೆದರಿಕೆಯನ್ನು ಕೆಲವರು ಹಾಕಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ನಮಗೆ ಜೀವ ಬೆದರಿಕೆ ಹಾಕಿ ಜೀವನ ನಡೆಸಲು ತೊಂದರೆ ಮಾಡಲಾಗುತ್ತಿದ್ದು, ಭಯ ಉಂಟು ಮಾಡಿದೆ. ಈ ಕಾರಣದಿಂದ ನಮಗೆ ಹಾಗೂ ಖಬರಸ್ಥಾನಕ್ಕೆ ಸೂಕ್ತ ರಕ್ಷಣೆಯ ವ್ಯವಸ್ಥೆ ಮಾಡಬೇಕು. ಈ ಕುರಿತಂತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಲ್ಕೀಷ್ ಭಾನು, ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್ ಯೂಸೂಫ್ ಭಯ್ಯಾ, ಆನವೇರಿ ಗ್ರಾಮದ ಮುಖಂಡರಾದ ರಫೀಕ್, ಸಾಧಿಕ್, ಮಜೀದ್, ನಜರ್, ಸಯ್ಯದ್ ಸಮೀವುಲ್ಲಾ, ದಾದಾಪೀರ್ ಸೇರಿದಂತೆ ಮೊದಲಾದವರಿದ್ದರು.

ಏನಿದು ವಿವಾದ: ಗ್ರಾಮದ ಸರ್ವೇ ನಂಬರ್ 6 ರಲ್ಲಿ 38 ಗುಂಟೆ ಜಾಗದಲ್ಲಿ ಖಬರಸ್ಥಾನವಿದೆ. ಇಲ್ಲಿರುವ ರಸ್ತೆಯ ಮೂಲಕವೇ ಕೆಲವರು ತಮ್ಮ ಮನೆಗಳಿಗೆ ಓಡಾಡುತ್ತಿದ್ದರು. ಖಬರಸ್ಥಾನದ ಮೂಲಕ ಓಡಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಇತ್ತೀಚೆಗೆ ಖಬರಸ್ಥಾನದ ಸುತ್ತಲೂ ಗ್ರಾಮಸ್ಥರು ತಂತಿ ಬೇಲಿಯನ್ನು ಹಾಕಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಸೋಮವಾರ ಗ್ರಾಮದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದರು. ಖಬರಸ್ಥಾನದ ರಸ್ತೆಯ ಮೂಲಕ ಓಡಾಡಲು ಅವಕಾಶ ಕೊಡುವಂತೆ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಒತ್ತಾಯಿಸಿದ್ದರು. ಮತ್ತೊಂದೆಡೆ ಇದನ್ನು ವಿರೋಧಿಸಿದ ಕೆಲವರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದರು.

ಇದರಿಂದ ಸ್ಥಳದಲ್ಲಿ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ತಾಲೂಕು ಆಡಳಿತದ ಅಧಿಕಾರಿಗಳು ಪ್ರತಿಭಟನಾಕಾರರ ಜೊತೆ ಸಮಾಲೋಚನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ನಡೆಸಿದ್ದರು. ಖಬರಸ್ಥಾನದ ಬಳಿ ನೆರೆದಿದ್ದ ಗುಂಪುಗಳನ್ನು ಚದುರಿಸಿದ್ದರು. ಸೋಮವಾರದ ಘಟನೆಯ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲವೆಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಆನವೇರಿ ಗ್ರಾಮದಲ್ಲಿ ಪೊಲೀಸ್ ಕಟ್ಟೆಚ್ಚರ

ಖಬರಸ್ಥಾನದಲ್ಲಿನ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದಲ್ಲಿ ಮಂಗಳವಾರ ಪರಿಸ್ಥಿತಿ ಶಾಂತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿಯಿತ್ತು ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ವಿವಾದಿತ ಖಬರಸ್ಥಾನದ ಬಳಿ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಮತ್ತೊಂದೆಡೆ ಭದ್ರಾವತಿ ತಾಲೂಕು ಆಡಳಿತವು ಬುಧವಾರ ಎರಡು ಸಮುದಾಯಗಳ ಮುಖಂಡರ ಸಭೆ ನಡೆಸಿ, ವಿವಾದ ಪರಿಹಾರಕ್ಕೆ ಕ್ರಮಕೈಗೊಂಡಿದೆ.

'ಸಭೆ ನಡೆಸಿ ನಿರ್ಧಾರ' : ತಹಶೀಲ್ದಾರ್ ನಾಗರಾಜ್

'ಆನವೇರಿ ಗ್ರಾಮದ ಖಬರಸ್ಥಾನದ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ನಾಳೆ ತಮ್ಮ ಕಚೇರಿಯಲ್ಲಿ ಗ್ರಾಮದ ಎರಡು ಸಮುದಾಯದವರ ಸಭೆ ಕರೆದು ಕೂಲಂಕಷವಾಗಿ ಚರ್ಚಿಸಿ ಶಾಂತಿಯುತವಾಗಿ ವಿವಾದ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು' ಎಂದು ಭದ್ರಾವತಿ ತಹಶೀಲ್ದಾರ್ ನಾಗರಾಜ್‍ರವರು ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News