×
Ad

ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

Update: 2018-02-27 21:12 IST

ಬೆಂಗಳೂರು, ಫೆ.27: 2018ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮಾ.1 ರಿಂದ 17ರವರೆಗೆ ನಡೆಯುವ ಪರೀಕ್ಷೆಗೆ 6.90 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

ರಾಜ್ಯಾದ್ಯಂತ 1004 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ವೀಕ್ಷಣೆ ವ್ಯವಸ್ಥೆ ಅಳವಡಿಸಲಾಗಿದೆ ಹಾಗೂ ಪರೀಕ್ಷಾ ದಿನದ ಮುಖ್ಯ ಕ್ರಿಯೆಗಳನ್ನು ಕಡ್ಡಾಯವಾಗಿ ಸಿಸಿಟಿವಿ ವೀಕ್ಷಣಾ ಕ್ಷೇತ್ರದಲ್ಲಿ ನಡೆಸಲು ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪರೀಕ್ಷಾ ಕೇಂದ್ರಗಳನ್ನು Randomisation ನಂತರ ನಿಗದಿ ಪಡಿಸಲಾಗಿದ್ದು, ವಿದ್ಯಾರ್ಥಿಗಳು ತಾವು ಅಭ್ಯಸಿಸಿದ ಕಾಲೇಜುಗಳಲ್ಲದೆ ಬೇರೆ ಪರೀಕ್ಷಾ ಕೇಂದ್ರದಲ್ಲಿ ಬರೆಯಬೇಕಿದೆ. ತಾಲೂಕಿಗೆ ಏಕೈಕ ಪರೀಕ್ಷಾ ಕೇಂದ್ರವಿದ್ದಲ್ಲಿ ಅಥವಾ ಭೌಗೋಳಿಕ ಕಾರಣಗಳಿಂದಾಗಿ ಅಳವಡಿಕೆ ಸಾಧ್ಯವಾಗದ 243 ಪರೀಕ್ಷಾ ಕೇಂದ್ರಗಳಿಗೆ ಬಾಹ್ಯ ಪರೀಕ್ಷಕರನ್ನು ನೇಮಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ಬಳಸಲಾಗುವ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಹಾಗೂ ಈ ವಾಹನಗಳ ವಿತರಣಾ ಮಾರ್ಗಗಳ ನೈಜ ಸ್ಥಿತಿಯ ನೇರ ಪ್ರಸಾರವನ್ನು ಜಿಲ್ಲಾ ಮಟ್ಟದಲ್ಲಿ ವಿಶ್ಲೇಷಿಸಲಾಗುತ್ತದೆ ಎಂದು ಶಿಖಾ ಹೇಳಿದ್ದಾರೆ.

ಕಲಾ ಸಂಯೋಜನೆ-2,01,278, ವಾಣಿಜ್ಯ ಸಂಯೋಜನೆ-2,56,479 ಹಾಗೂ ವಿಜ್ಞಾನ ಸಂಯೋಜನೆ-2,32,393 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಬಾಲಕರು-3,52,292, ಬಾಲಕಿಯರು-3,37,860 ವಿದ್ಯಾರ್ಥಿಗಳು ಪರೀಕ್ಷೆ ಕೈಗೊಳ್ಳಲಿದ್ದಾರೆ. ಈ ಪೈಕಿ ಹೊಸ ವಿದ್ಯಾರ್ಥಿಗಳು-5,39,430, ಪುನರಾವರ್ತಿತ ವಿದ್ಯಾರ್ಥಿಗಳು-1,22,346 ಹಾಗೂ ಖಾಸಗಿ ವಿದ್ಯಾರ್ಥಿಗಳು-28,374 ಮಂದಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಒಟ್ಟು 286 ತಾಲೂಕು ಮಟ್ಟದ ಹಾಗೂ 32 ಜಿಲ್ಲಾ ಮಟ್ಟದ ಜಾಗೃತದಳ(ಮೂವರು ಸದಸ್ಯರು) ನೇಮಿಸಲಾಗಿದೆ. ಪರೀಕ್ಷೆ ವೇಳೆಯಲ್ಲಿ ಸುರಕ್ಷತೆಗಾಗಿ ಅವಶ್ಯ ಪರೀಕ್ಷಾ ಕೇಂದ್ರಗಳಿಗೆ 300 ಗೃಹ ರಕ್ಷಣಾ ದಳದ ಸದಸ್ಯರ ಸೇವೆಯನ್ನು ಪಡೆಯಲಾಗಿದೆ ಎಂದು ಶಿಖಾ ಹೇಳಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಮನವಿ ಮೇರೆಗೆ ರಾಜ್ಯ ಸಾರಿಗೆ ಇಲಾಖೆಯು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ಹಾಜರು ಪಡಿಸಿದ್ದಲ್ಲಿ ಉಚಿತ ಸೇವೆ ನೀಡಲು ಆದೇಶ ಹೊರಡಿಸಲಾಗಿದೆ. ಇಲಾಖೆ ಕೇಂದ್ರ ಕಚೇರಿಯಲ್ಲಿ ‘ಸಹಾಯವಾಣಿ ಕೇಂದ್ರ’ ನಿರ್ಮಿಸಲಾಗಿದ್ದು, ದೂರವಾಣಿ ಸಂಖ್ಯೆ 080-23083900ರಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಪರೀಕ್ಷಾ ಸಂಬಂಧ ವಿಷಯಗಳ ಕುರಿತು ಮಾಹಿತಿ ಪಡೆಯಬಹುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಒಟ್ಟು ವಿದ್ಯಾರ್ಥಿಗಳು- 6,90,152
ಬಾಲಕರು- 3,52,292
ಬಾಲಕಿಯರು- 3,37,860
ಪರೀಕ್ಷಾ ಕೇಂದ್ರಗಳು- 1004
ಸಹಾಯವಾಣಿ-080 23083900

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News