ಅನ್ನದಾತ ನೆಮ್ಮದಿ, ಗೌರವದಿಂದ ಬಾಳುವುದಕ್ಕಾಗಿ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ: ಯಡಿಯೂರಪ್ಪ

Update: 2018-02-27 16:02 GMT

ದಾವಣಗೆರೆ,ಫೆ.27: ನನಗೆ ಬೇರೆ ಆಸೆಯೇನೂ ಇಲ್ಲ. ನನ್ನದೊಂದೇ ಆಸೆ. ಅನ್ನದಾತನು ನೆಮ್ಮದಿ, ಗೌರವದಿಂದ ಬಾಳಬೇಕು. ಅದಕ್ಕಾಗಿ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ತಾಲೂಕಿನ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ರಂಗಸ್ವಾಮಿ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಆರೂವರೆ ಕೋಟಿ ಜನರ ಕಣ್ಣೀರೊರೆಸಲು ನಾನು ಬದ್ದ, ರೈತರ ಸಂಕಷ್ಟಗಳಿಗೆ ಸ್ಪಂದಿಸುವೆ. ಇದೇ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ನೊಂದ ಕುಟುಂಬಗಳಿಗೆ ಸಾಂತ್ವನ ಪತ್ರ ನೀಡಿ, ಧೈರ್ಯ ತುಂಬುತ್ತಿದ್ದೇನೆ. ರಾಜ್ಯದಲ್ಲಿ 3750 ರೈತರು ಸಾವಿಗೆ ಶರಣಾಗಿದ್ದಾರೆ. ಆ ರೈತ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದರು.

ಪ್ರಧಾನಿ ಮೋದಿ ಕೇಂದ್ರದ ಬಜೆಟ್‍ನಲ್ಲಿ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬ ಸದುದ್ದೇಶದಿಂದ ಈಗಿರುವ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಬೆಲೆ ಸಿಗುವಂತಹ ವ್ಯವಸ್ಥೆ ತರುವ ಭರವಸೆ ನೀಡಿದ್ದಾರೆ. ದೇಶದ 10 ಕೋಟಿ ಕುಟುಂಬಗಳಿಗೆ ಒಂದು ವಿಮಾ ಯೋಜನೆ ಜಾರಿಗೊಳಿಸಿದ್ದಾರೆ. ಪ್ರತಿ ಕುಟುಂಬಕ್ಕೂ 5 ಲಕ್ಷ ರು. ಪರಿಹಾರ ನೀಡುವಂತಹ ಐತಿಹಾಸಿಕ ನಿರ್ಣಯ ಇದಾಗಿದೆ. ಆತ್ಮಹತ್ಯೆ ತಡೆಗೆ ಮುಂಚೆಯೇ ಅನುಕೂಲ ಮಾಡಿಕೊಡಲು ಸಂಕಲ್ಪ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಕೆರೆಯಾಗಳಹಳ್ಳಿ, ಕಂದನಕೋವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ನಿವಾಸಕ್ಕೆ ಹೋಗಿ, ಅಲ್ಲಿಂದ ಪ್ರಧಾನಿ ಭಾಗವಹಿಸುವ ರಾಜ್ಯ ರೈತ ಸಮಾವೇಶಕ್ಕೆ ತೆರಳುತ್ತಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.

50 ಸಾವಿರ ರು. ವೈಯಕ್ತಿಕ ಪರಿಹಾರ
ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಾಲ ಬಾಧೆ ತಾಳಲಾರದೇ ಸಾವಿಗೆ ಶರಣಾಗಿದ್ದ ತಾಲೂಕಿನ ಇಬ್ಬರು ರೈತರ ಮನೆಗೆ ಮಂಗಳವಾರ ಭೇಟಿ ನೀಡಿ, ಸಂತ್ರಸ್ಥ ಕುಟುಂಬಕ್ಕೆ ಸಾಂತ್ವನ ಪತ್ರ, ತಲಾ 50 ಸಾವಿರ ರು. ವೈಯಕ್ತಿಕವಾಗಿ ಪರಿಹಾರ ನೀಡಿದರು. 
ತಾಲೂಕಿನ ಕೆರೆಯಾಗಳಹಳ್ಳಿ ಗ್ರಾಮದ ತನ್ನ ಹೊಲದಲ್ಲಿ ಕಳೆದ ಜ. 14ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವ ರೈತ ರಂಗಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದ ಬಿ.ಎಸ್. ಯಡಿಯೂರಪ್ಪ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 50 ಸಾವಿರ ರು. ಪರಿಹಾರ ನೀಡುವ ಮೂಲಕ ರೈತ ಕುಟುಂಬಕ್ಕೆ ಧೈರ್ಯ ಹೇಳಿದರು.

ಮೃತ ರೈತ ರಂಗಸ್ವಾಮಿಗೆ ಕೇವಲ 32 ವರ್ಷ ವಯಸ್ಸಾಗಿತ್ತು. ರಂಗಸ್ವಾಮಿ ತಂದೆ ರಂಗಪ್ಪ ಹೆಸರಿಗೆ 7 ಎಕರೆ ಜಮೀನಿದ್ದು, ಬೆಳೆ ಬೆಳೆಯಲು ಪ್ರಗತಿ ಕೃಷ್ಣ ಬ್ಯಾಂಕ್‍ನಲ್ಲಿ 1.5 ಲಕ್ಷ, ಕರೂರು ವೈಶ್ಯ ಬ್ಯಾಂಕ್‍ನಲ್ಲಿ 1.5 ಲಕ್ಷ ಸೇರಿದಂತೆ ಖಾಸಗಿಯಾಗಿ ಒಟ್ಟು 8 ಲಕ್ಷ ರು.ಗಳ ಸಾಲವಿತ್ತು. ಸತತ ಬರ, ಬೆಳೆಗೆ ಬೆಲೆ ಸಿಗದೇ ನೊಂದ ರಂಗಸ್ವಾಮಿ ಸಾವಿಗೆ ಶರಣಾದ ವಿಚಾರ ಕುಟುಂಬವು ಯಡಿಯೂರಪ್ಪ ಗಮನಕ್ಕೆ ತಂದಿತು. ಪತ್ನಿ ಮಂಗಳಮ್ಮ, 5 ವರ್ಷದ ಹೆಣ್ಣು ಮಗು, 3 ವರ್ಷದ ಗಂಡು ಮಗುವಿದ್ದ ರಂಗಸ್ವಾಮಿ ಸಾಲದ ಶೂಲಕ್ಕೆ ಹೆದರಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದರು. 

ಈ ವೇಳೆ ಸಂಸದರಾದ ಜಿ.ಎಂ. ಸಿದ್ದೇಶ್ವರ, ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ, ಬಿ.ವೈ. ರಾಘವೇಂದ್ರ, ಎಂ.ಪಿ. ರೇಣುಕಾಚಾರ್ಯ, ಕುಮಾರ ಬಂಗಾರಪ್ಪ, ಮಾಜಿ ಶಾಸಕ ಬಿ.ಪಿ. ಹರೀಶಗೌಡ, ಹುಲಿಕಟ್ಟೆ ಶಿವಣ್ಣ, ಗ್ರಾಪಂ ಅಧ್ಯಕ್ಷ ರಾಜಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News