ಎ.ಕೆ.ಸುಬ್ಬಯ್ಯ ಪ್ರಾಮಾಣಿಕ ರಾಜಕಾರಣದ ಕೊನೆಯ ಕೊಂಡಿ: ಪ್ರೊ.ರವಿವರ್ಮ ಕುಮಾರ್

Update: 2018-02-27 16:50 GMT

ಬೆಂಗಳೂರು, ಫೆ.27: ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕ ರಾಜಕಾರಣಿಗಳು ಕಣ್ಮರೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಎ.ಕೆ.ಸುಬ್ಬಯ್ಯ ಪ್ರಾಮಾಣಿಕ ರಾಜಕಾರಣದ ಕೊನೆಯ ಕೊಂಡಿ ಎಂದು ಎ.ಕೆ.ಸುಬ್ಬಯ್ಯ ಅಭಿನಂದನಾ ಸಮಿತಿ ಅಧ್ಯಕ್ಷ ಪ್ರೊ.ರವಿವರ್ಮ ಕುಮಾರ್ ಹೇಳಿದರು.

ಮಂಗಳವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ, ಎ.ಕೆ.ಸುಬ್ಬಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಎ.ಕೆ.ಸುಬ್ಬಯ್ಯ ಕುರಿತ ‘ದಾರಿದೀಪ’ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕ ರಾಜಕಾರಣಿಗಳು ಕಣ್ಮರೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಎ.ಕೆ.ಸುಬ್ಬಯ್ಯ ಪ್ರಾಮಾಣಿಕ ರಾಜಕಾರಣದ ಕೊನೆಯ ಕೊಂಡಿ ಎಂದ ಅವರು, ನೇರವಾಗಿ ಮಾತನಾಡುತ್ತಿದ್ದ ಎ.ಕೆ.ಸುಬ್ಬಯ್ಯ, ಒಮ್ಮೆ ತಮ್ಮನ್ನು ಕೆಣಕಿದ ನ್ಯಾಯವಾದಿಗೆ ‘ಕಟುಕ’ ಎಂದು ಕರೆದಿದ್ದರು. ರೈತರ ಆತ್ಮಹತ್ಯೆ ಕೇಸ್‌ನಲ್ಲಿ ಪರಿಹಾರ ಕೊಟ್ಟಿಲ್ಲ ಎಂದು ಬೈದಿದ್ದರು ಎಂದು ನೆನಪು ಮಾಡಿಕೊಂಡರು.

ಕೋಮುವಾದಿ ಬಿಜೆಪಿ ಸಜ್ಜನ ರಾಜಕಾರಣಿಗಳನ್ನು ತನ್ನತ್ತ ಆಕರ್ಷಿಸಿತ್ತು. ಆದರೆ, ಕೋಮುವಾದದ ಮುಖ ನೋಡಿದಾಗ ಸಾಕಷ್ಟು ಸಜ್ಜನ ರಾಜಕಾರಣಿಗಳು ಹೊರ ಬಂದದ್ದುಂಟು ಎಂದ ಅವರು, ಎ.ಕೆ. ಸುಬ್ಬಯ್ಯ ಬಿಜೆಪಿ ತೊರೆದ ನಂತರ ಆರೆಸ್ಸೆಸ್ ಅಂತರಂಗದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಬಯಲಿಗೆಳೆಯಲು, ಆರೆಸ್ಸೆಸ್ ಅಂತರಂಗ ಎಂಬ ಪುಸ್ತಕವನ್ನು ಹೊರತಂದರು. ಕೊಡಗು ಜಿಲ್ಲೆಯಲ್ಲಿ ಮುಸ್ಲಿಮರು ಪಾಕಿಸ್ತಾನದ ಧ್ವಜ ಹಾರಿಸಿದರು ಎಂಬ ಆರೋಪ ಪ್ರಕರಣವನ್ನು ಸಂಘಪರಿವಾರದ ವಿರೋಧದ ನಡುವೆಯೂ ಗೆದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಕೆಳಮನೆಯಲ್ಲಿ ಯಾರಿಗೆ ಪ್ರಾತಿನಿಧ್ಯ ಸಿಗುವುದಿಲ್ಲವೋ, ಅಂತವರಿಗೆ ಮೇಲ್ಮನೆಯಲ್ಲಿ ಆದ್ಯತೆ ನೀಡಬೇಕು. ಅವಕಾಶ ವಂಚನೆಯಾದರೆ ಮೇಲ್ಮನೆಯನ್ನ ವಿಸರ್ಜಿಸಬೇಕು. ಚುನಾವಣಾ ಸುಧಾರಣೆಗೆ ಮೊದಲ ಹೆಜ್ಜೆಯಾಗಿ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು.

ಕೆಲವು ಲೋಹಗಳನ್ನ ಜ್ವಾಲಾಮುಖಿ ಶಾಖದಿಂದಲೂ ಕರಗಿಸಲು ಸಾಧ್ಯವಿಲ್ಲ. ಅಂತಹ ಲೋಹಗಳ ಜೊತೆಗೆ ಎ.ಕೆ.ಸುಬ್ಬಯ್ಯ ಸೇರಿದ್ದಾರೆ ಎಂದ ಅವರು, ಅಪರಾಧ ಜಗತ್ತು ಹಾಗೂ ರಾಜಕಾರಣದಿಂದ ದೇಶ ಕಟ್ಟೋಕೆ ಸಾಧ್ಯವಿಲ್ಲ. ಇಂದು ರಾಜಕಾರಣ ಬೆದರಿಕೆಗಳಿಂದ ಕೂಡಿದ್ದು, ಪ್ರಜಾಪ್ರಭುತ್ವವೂ ಸಹ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವೇಳೆ ದಾರಿದೀಪ, ಸೌಹರ್ದನೆಲೆ ಆರೆಸ್ಸೆಸ್ ಅಂತರಂಗ ಹಾಗೂ ಇತರೆ ಲೇಖನಗಳು(ಮೂರು ಸಂಪುಟ), ಸದನದ ಭಾಷಣ ಸಂಗ್ರಹ(ಎರಡು ಸಂಪುಟ), ನಿರ್ಭೀತಿ ಹೆಜ್ಜೆಗಳು, ಫೀನಿಕ್ಸ್ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ರಮೇಶ್‌ಕುಮಾರ್, ಮಾಜಿ ಸಚಿವ ಎಂ.ಸಿ.ನಾಣಯ್ಯ, ರೈತಪರ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಇಂದು ವಂಚನೆ ದ್ರೋಹಗಳು ದೇಶವಾಳುತ್ತಿವೆ. ಮೊನ್ನೆ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆರ್ಭಟಿಸಿ, ಅಭಿನಯಿಸಿ ಮಾತನಾಡುತ್ತಿದ್ದರು. ಅವರ ಭಾಷಣದ ಸುಳ್ಳುಗಳು, ಸುಳ್ಳನ್ನೇ ನಾಚಿಕೆಪಡುವಂತೆ ಮಾಡಿತು. ಅವರ ಮಾತು ಕೇಳಿ ನನಗೆ ಜೀವನದಲ್ಲಿ ಜಿಗುಪ್ಸೆ ಬಂತು.
-ದೇವನೂರ ಮಹಾದೇವ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News