ಸಿದ್ಧಾಂತದಲ್ಲಿ ಎಂದಿಗೂ ರಾಜಿ ಇಲ್ಲ: ಸಿದ್ದರಾಮಯ್ಯ

Update: 2018-02-27 16:53 GMT

ಬೆಂಗಳೂರು, ಫೆ.27: ನಂಬಿಕೆ ಇಟ್ಟುಕೊಂಡಿರುವ ಸಿದ್ಧಾಂತಗಳಲ್ಲಿ ಎಂದಿಗೂ ಯಾರು ರಾಜಿ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಮಂಗಳವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ, ಎ.ಕೆ.ಸುಬ್ಬಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಎ.ಕೆ.ಸುಬ್ಬಯ್ಯ ಕುರಿತ ‘ದಾರಿದೀಪ’ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜಕಾರಣದಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡು ಕೆಲಸ ಮಾಡುವುದು ತುಂಬಾ ಕಷ್ಟ. ಅಲ್ಲದೆ, ತಾನು ಪ್ರಾಮಾಣಿಕ ರಾಜಕಾರಣಿ ಅಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ಹೇಳುತ್ತಾರೆ. ಆದರೆ, ಸಿದ್ಧಾಂತದಲ್ಲಿ ರಾಜಿ ಆಗಬಾರದು. ಸಿದ್ಧಾಂತಕ್ಕೆ ಹಣದ ಅಗತ್ಯವೂ ಇಲ್ಲ ಎಂದು ಅವರು ಹೇಳಿದರು.

ನಾನು ಹಿಂದೆ ಸಚಿವನಾಗಿದ್ದ ವೇಳೆ ಒಂದು ವಿಧೇಯಕ ಮಂಡಿಸಿದ್ದೆ. ಅಂದು ಎ.ಕೆ.ಸುಬ್ಬಯ್ಯ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ, ವಿಧೇಯಕ ಮಂಡನೆ ಆದರೂ, ಎ.ಕೆ.ಸುಬ್ಬಯ್ಯನವರ ವಿರೋಧ ಹಾಗೇ ಉಳಿಯಿತು. ಈ ಘಟನೆ ಆದ ನಂತರ ನಾನು ವಿಧೇಯಕಕ್ಕೆ ವಿರೋಧ ಪಕ್ಷದವರನ್ನು ಮನವೊಲಿಸುವ ರೀತಿಯನ್ನು ಕಲಿತುಕೊಂಡೆ. ಬಳಿಕ ಈ ಪರಿಸ್ಥಿತಿ ಬರಲೇ ಇಲ್ಲ, ಏಕೆಂದರೆ, ಸುಬ್ಬಯ್ಯನವರ ಹಾಗೆ ವಿರೋಧ ಪಕ್ಷದವರು ಇಲ್ಲದೇ ಇರೋದೇ ಕಾರಣ ಇರಬಹುದು ಎಂದು ಸಿದ್ದರಾಮಯ್ಯ ನುಡಿದರು.

ಗುಂಡೂರಾವ್ ಏನು ಮಾಡ್ತಾರೆ?
ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈಜುಕೊಳ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳಿ ಸ್ವತಃ ಅವರೇ ಈಜಾಡುವ ಮೂಲಕ ಈಜುಕೊಳಕ್ಕೆ ಚಾಲನೆ ನೀಡಿದರು. ಮರುದಿನ ಪತ್ರಿಕೆಗಳಲ್ಲಿ ಈ ಬಗ್ಗೆ ವರ್ಣ ರಂಜಿತ ವರದಿಗಳು ಬಂದಿದ್ದವು. ಆದರೆ, ಮತ್ತೊಂದು ದಿನ ಗುಂಡೂರಾಯರು ಹೆರಿಗೆ ಆಸ್ಪತ್ರೆ ಉದ್ಘಾಟನೆಗೆ ಹೋದರೆ, ಏನ್ ಮಾಡುತ್ತಾರೆ ಎನ್ನುವ ಯೋಚನೆ ಎಲ್ಲರಲ್ಲೂ ಇತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹಾಸ್ಯ ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News