ಪ್ರತಿ ತಾಲೂಕಿನಲ್ಲಿ ವಸತಿ ಕಾಲೇಜು ಸ್ಥಾಪನೆ: ಬಸವರಾಜ ರಾಯರೆಡ್ಡಿ

Update: 2018-02-27 16:56 GMT

ಬೆಂಗಳೂರು, ಫೆ.27: ಉನ್ನತ ಶಿಕ್ಷಣ ಕ್ಷೇತ್ರದತ್ತ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ತಾಲೂಕಿನಲ್ಲಿ ವಸತಿ ಕಾಲೇಜುಗಳನ್ನು ತೆರೆಯುವ ಚಿಂತನೆಯಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.

ಮಂಗಳವಾರ ಉನ್ನತ ಶಿಕ್ಷಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ 2017-18ನೆ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈಗಾಗಲೆ ರಾಜ್ಯದಲ್ಲಿ 10 ವಸತಿ ಕಾಲೇಜು ಸ್ಥಾಪಿಸಲಾಗಿದೆ. ಹೈ.ಕರ್ನಾಟಕ ಭಾಗದಲ್ಲಿ 6 ವಸತಿ ಕಾಲೇಜು ಸ್ಥಾಪಿಸಲು ಸಚಿವ ಸಂಪುಟದಲ್ಲಿ ಅನುಮತಿ ಪಡೆಯಲಾಗುತ್ತಿದೆ. ಮುಂದುವರೆದ ಭಾಗವಾಗಿ ಪ್ರತಿ ತಾಲೂಕಿನಲ್ಲಿ ವಸತಿ ಕಾಲೇಜು ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ದೇಶದಲ್ಲೆ ಪ್ರಥಮ: ರಾಜ್ಯ ಸರಕಾರ ಉನ್ನತ ಶಿಕ್ಷಣ ಇಲಾಖೆಗೆ ಸಾಕಷ್ಟು ಅನುದಾನ ನೀಡಿದೆ. ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿರುವ ಸ್ಕೂಲ್ ಆಫ್ ಎಕನಾಮಿಕ್ಸ್ ದೇಶದಲ್ಲಿ ಮಾದರಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ವಿದ್ಯಾಸಿರಿ ಯೋಜನೆಯು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ಇವೆಲ್ಲಾ ಯೋಜನೆಯ ಫಲವಾಗಿ ದೇಶದಲ್ಲಿಯೆ ನಮ್ಮ ಉನ್ನತ ಶಿಕ್ಷಣ ಇಲಾಖೆ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಉನ್ನತ ಶಿಕ್ಷಣವನ್ನು ಓದುವವರ ಸಂಖ್ಯೆ ಶೇ.24ರಿಂದ ಶೇ.28ಕ್ಕೆ ಏರಿಕೆಯಾಗಿದೆ. ಅದನ್ನು ಶೇ.40ಕ್ಕೆ ಹೆಚ್ಚಳ ಮಾಡುವುದು ಸರಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ವಸತಿ ಕಾಲೇಜು, ವಿದ್ಯಾರ್ಥಿನಿಯರಿಗೆ ಉಚಿತ ಪ್ರವೇಶ ಶುಲ್ಕ ಒಳಗೊಂಡಂತೆ ಅನೇಕ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ದೇಶಪಾಂಡೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅವರಿಂದ ಎರಡು ಲಕ್ಷ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಹೀಗಾಗಿ ದೇಶದಾದ್ಯಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರಾಜ್ಯದ ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ವತಿಯಿಂದ 5 ವರ್ಷದಲ್ಲಿ 15 ಲಕ್ಷ ಉದ್ಯೋಗಸೃಷ್ಟಿಸುವ ಭರವಸೆ ನೀಡಿದ್ದೆವು. ಅದೇ ಪ್ರಕಾರ ಈಗಾಗಲೆ 13ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 2018-19ರ ಮಾರ್ಚ್‌ವೊಳಗೆ 15ಲಕ್ಷ ಉದ್ಯೋಗದ ಗುರಿ ಮುಟ್ಟಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ 20 ಪದವಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಉಚಿತ ಲ್ಯಾಪ್‌ಟಾಪ್ ನೀಡಲಾಯಿತು. ಈ ವೇಳೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಯೋಜನೆ ಮತ್ತು ಸಾಂಖ್ಯಿಕ ಸಚಿವ ಎಂ.ಆರ್.ಸೀತಾರಾಮ್, ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಮತ್ತಿತರರಿದ್ದರು.

ರಾಜ್ಯದಲ್ಲಿ ಮೊದಲ ವರ್ಷದ ಪದವಿ ಕಾಲೇಜು, ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಓದುತ್ತಿರುವ ಒಂದು ಲಕ್ಷದ ಐವತ್ತು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಭಾಗ್ಯ ಸಿಗಲಿದೆ. ಈ ಯೋಜನೆ ಕಳೆದ 6 ತಿಂಗಳ ಹಿಂದೆಯೆ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ ಹಾಗೂ ಪ್ರತಿಪಕ್ಷಗಳ ಆಧಾರರಹಿತ ಸುಳ್ಳು ಆರೋಪಗಳಿಂದಾಗಿ ತಡವಾಗಿದೆ.
-ಬಸವರಾಜ ರಾಯರೆಡ್ಡಿ ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News