ಅತಿಯಾದ ಭ್ರಷ್ಟಾಚಾರ ಅವಿದ್ಯಾವಂತರು ಸಹ ರಾಜಕೀಯವನ್ನು ದ್ವೇಷಿಸುವಂತಾಗಿದೆ: ನ್ಯಾ.ಗೋಪಾಲಗೌಡ

Update: 2018-02-27 17:03 GMT

ಬೆಂಗಳೂರು, ಫೆ.27: ಅತಿಯಾದ ಭ್ರಷ್ಟಾಚಾರದಿಂದಾಗಿ ವಿದ್ಯಾವಂತರಷ್ಟೇ ಅಲ್ಲದೆ, ಅವಿದ್ಯಾವಂತರು ಸಹ ರಾಜಕೀಯ ಕ್ಷೇತ್ರವನ್ನು ದ್ವೇಷಿಸುವ ಸ್ಥಿತಿ ಉಂಟಾಗಿದೆ ಎಂದು ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ನಗರದ ರಾಜಭವನ ರಸ್ತೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್‌ಫೇರ್ ಫೌಂಡೇಷನ್ ಆಯೋಜಿಸಿದ್ದ, ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ವಿಶೇಷ ಅಂಚೆ ಲಕೋಟೆ ಹಾಗೂ ಮೈ ಸ್ಟಾಂಪ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಸದೀಯ ಪ್ರಭುತ್ವದಲ್ಲಿ ರಾಜಕೀಯವೆಂದರೆ ಮಾನವೀಯ ವಿಜ್ಞಾನ. ಆದರೆ, ಇಂದು ರಾಜಕೀಯ ಎತ್ತ ಸಾಗುತ್ತಿದೆ. ಅದು ಅಲ್ಲದೆ, ಇತ್ತೀಚಿನ ದಿನಗಳಲ್ಲಿ ರಾಜಕೀಯದ ಬಗ್ಗೆ ಅವಿದ್ಯಾವಂತರು ಕೂಡ ಅಸಹ್ಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಇನ್ನು ಮುಂದಾದರೂ ಶಾಸಕಾಂಗ, ಕಾರ್ಯಾಂಗದ ಈಗಿನ ವ್ಯವಸ್ಥೆ ಬದಲಾಗಬೇಕಿದೆ ಎಂದು ಹೇಳಿದರು.

ಹಿಂದಿನ ಜನ ನಾಯಕರಲ್ಲಿ ಸಾಮಾಜಿಕ ಕಳಕಳಿ ಹಾಗೂ ಪ್ರಗತಿಶೀಲ ರಾಜಕೀಯ ಚಿಂತನೆಗಳಿದ್ದವು. ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ, ಸರಿ ದಾರಿಯಲ್ಲಿ ನಡೆಸುವ ಮೌಲ್ವಿಕ ಗುಣವಿತ್ತು. ಇದಕ್ಕೆ ಉತ್ತಮ ನಿದರ್ಶನವೆಂದರೆ ಕೆ.ಸಿ.ರೆಡ್ಡಿ. ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರೆಯಲು ಅವಕಾಶವಿದ್ದರೂ ಅದನ್ನು ಇನ್ನೊಬ್ಬರ ಬೆಳವಣಿಗೆಗಾಗಿ ತ್ಯಾಗ ಮಾಡಿದರು. ಇಂದು ಕೆ.ಸಿ.ರೆಡ್ಡಿ ಅವರಂತಹ ಧೀಮಂತ ರಾಜಕಾರಣಿಗಳ ಅಗತ್ಯವಿದೆ ಎಂದು ನುಡಿದರು.

ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಮಾತನಾಡಿ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಿದವರಲ್ಲಿ ಕೆ.ಸಿ.ರೆಡ್ಡಿ ಪ್ರಮುಖರು. ಇಂದು ಬೆಂಗಳೂರು ಬೃಹತ್ ಕೈಗಾರಿಕಾ ನಗರವಾಗಿ ಬೆಳೆಯಲು ಅವರ ಕೊಡುಗೆ ಅಪಾರವಾಗಿದ್ದು, ಇವುಗಳಲ್ಲಿ ಪ್ಲಾಟಿನಮ್ ಅಕ್ಷರಗಳಲ್ಲಿ ಬರೆದಿಡುವಂತಹವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ, ಜೆಡಿಯು ಅಧ್ಯಕ್ಷ ಮಹಿಮಾ ಪಟೇಲ್, ಬರಹಗಾರ ಆಂಜನಪ್ಪ ರೆಡ್ಡಿ, ಬೆಂಗಳೂರು ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಅರವಿಂದ ವರ್ಮಾ, ಪ್ರಧಾನ ಪೋಸ್ಟ್ ಮಾಸ್ಟರ್ ಶಿವರಾಮ್ ಸೇರಿ ಪ್ರಮುಖರಿದ್ದರು.

ಕೆ.ಸಿ.ರೆಡ್ಡಿಯವರ ಸ್ಮರಣಾರ್ಥ ಅಂಚೆ ಚೀಟಿ ತರುವ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇನ್ನು ವಿಧಾನಸೌಧದ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ರಾಜ್ಯ ಸರಕಾರ ಕೆ.ಸಿ.ರೆಡ್ಡಿಯವರ ಪ್ರತಿಮೆ ನಿರ್ಮಾಣಕ್ಕೆ ಆಸಕ್ತಿ ತೋರಿರುವುದು ಖುಷಿಯ ಸಂಗತಿ. -ವಸಂತ ಕವಿತಾ ಶ್ರೀಕರ್ ಕೆ.ಸಿ.ರೆಡ್ಡಿ, ಕಾರ್ಯದರ್ಶಿ, ಕೆಸಿರೆಡ್ಡಿ ರೋಜಮ್ಮ ವೆಲ್‌ಫೇರ್ ಫೌಂಡೇಷನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News