ರಾಜ್ಯದ ವಿವಿಧೆಡೆ 93,357 ಉದ್ಯೋಗ ಸೃಷ್ಟಿ: ದೇಶಪಾಂಡೆ
ಬೆಂಗಳೂರು, ಫೆ.27: ರಾಜ್ಯ ಸರಕಾರ ಕಳೆದ ಎರಡು ತಿಂಗಳಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕಂಪೆನಿಗಳೊಂದಿಗೆ 94 ಯೋಜನೆಗಳಿಗೆ ಅನುಮೋದನೆ ನೀಡಿದ್ದು, 12,296 ಕೋಟಿ ರೂ. ಹೂಡಿಕೆಗೆ ಅನುವು ಮಾಡಿಕೊಡಲಾಗಿದೆ. ಇದರಿಂದ 93,357 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಕೈಗಾರಿಕೆ ಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2017ರ ಮೊದಲ ತ್ರೈಮಾಸಿಕದಲ್ಲಿ 30,420 ಕೋಟಿ ಹೂಡಿಕೆಯನ್ನು ಆಕರ್ಷಿಸಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲು ಕರ್ನಾಟಕ ನಾಲ್ಕನೆ ಸ್ಥಾನವನ್ನು ಹೊಂದಿತ್ತು. ಇಗ ಎರಡನೇ ಸ್ಥಾನಕ್ಕೇರಿದೆ ಎಂದರು.
ಫೆ.23ರ ಸಭೆಯಲ್ಲಿ ಸಾಫ್ಟ್‌ವೇರ್, ಎಲೆಕ್ಟ್ರಾನಿಕ್ಸ್, ಬ್ಯಾಟರಿ ಸೇರಿದಂತೆ ಇತರೆ ಸಂಸ್ಥೆಗಳಿಗೆ ಅನುಮೋದನೆ ನೀಡಲಾಗಿದೆ. ವೆಸ್ಟ್ರನ್ ಇನ್‌ಫೋಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಸಂಸ್ಥೆಯು ಕೋಲಾರದ ಅಕ್ಕಚಾತನಹಳ್ಳಿ ಗ್ರಾಮದ ಬಳಿ 43 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ. 682 ಕೋಟಿ ರೂ. ಬಂಡಳವಾಳ ಹೂಡಿಕೆ ಮಾಡಿ ಸ್ಮಾರ್ಟ್ ಫೋನ್, ಬಯೋಟೆಕ್ ಉಪಕರಣಗಳ ಉತ್ಪನ್ನ ಘಟಕವು ತಲೆ ಎತ್ತಲಿದೆ. ಇದರಿಂದ ಆರು ಸಾವಿರ ಮಂದಿಗೆ ಉದ್ಯೋಗ ಲಭಿಸಲಿದೆ ಎಂದು ತಿಳಿಸಿದರು. ಸತ್ಲೇಜ್ ಟೆಕ್ಸ್‌ಟೈಲ್ಸ್ ಮತ್ತು ಇಂಡಸ್ಟ್ರೀಸ್ ಲಿ. ಸಂಸ್ಥೆಯು ಚಾಮರಾಜನಗರದ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 46 ಎಕರೆಯಲ್ಲಿ ಆರಂಭಗೊಳ್ಳಲಿದ್ದು, 786 ಕೋಟಿ ರು. ಹೂಡಿಕೆ ಮಾಡಿ 1800 ಉದ್ಯೋಗ ಲಭ್ಯವಾಗುವ ನಿರೀಕ್ಷೆ ಇದ್ದು, ಟೆಕ್ಸ್‌ಟೈಲ್ ಘಟಕ ಪ್ರಾರಂಭವಾಗಲಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಾಲಗ ಗ್ರಾಮದ ಬಳಿ ಅಂಜಲಿತಾಯ್ ಕೇನ್ಸ್ ಪ್ರೈ ಸಂಸ್ಥೆಯು ಆರಂಭವಾಗಲಿದ್ದು, 532 ಕೋಟಿ ರೂ. ಹೂಡಿಕೆಯಲ್ಲಿ ಸಕ್ಕರೆ ಘಟಕ ಸ್ಥಾಪನೆಯಾಗಲಿದೆ. ಇಲ್ಲಿ 800 ಉದ್ಯೋಗಗಳು ಸೃಷ್ಟಿಯಾಗಲಿವೆ. ಬೆಂಗಳೂರಿನ ದೊಡ್ಡನೆಕ್ಕುಂದಿ ಗ್ರಾಮದ ಬಳಿ ಬಿಪಿಕೆ ಡೆವಲಪ್‌ಮೆಂಟ್ಸ್ ಎಲ್‌ಎಲ್‌ಪಿ ಸಂಸ್ಥೆಯು ಸ್ಥಾಪನೆಯಾಗಲಿದ್ದು, ಐಟಿ ಕಚೇರಿಗಳು, ಹೊಟೇಲ್‌ಗಳು ಆರಂಭವಾಗಲಿದೆ. 3495.15 ಕೋಟಿ ರೂ ವೆಚ್ಚದಲ್ಲಿ ಆರಂಭವಾಗುವ ಘಟಕದಲ್ಲಿ 50 ಸಾವಿರ ಉದ್ಯೋಗಗಳು ಲಭ್ಯವಾಗಲಿವೆ ಎಂದು ಅವರು ಅಂದಾಜಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕೈಗಾರಿಕಾ ಪ್ರದೇಶದಲ್ಲಿ ಅಂಪೀರಿಯಾ ಲಿಥಿಯಂ ಬ್ಯಾಟರಿ ಮ್ಯಾನ್ಯುಫ್ಯಾಕ್ಚರಿಂಗ್ ಸಂಸ್ಥೆ ಆರಂಭವಾಗಲಿದೆ. ವಿದ್ಯುತ್ ಚಾಲಿತ ವಾಹನಗಳಿಗೆ ಲಿಥಿಯಂ ಮತ್ತು ಬ್ಯಾಟರಿ ತಯಾರಿಕೆ ಮಾಡುವ ಸಂಸ್ಥೆ ಇದಾಗಿದೆ. 1210 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತುವ ಸಂಸ್ಥೆಯಲ್ಲಿ 600 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದರು.
ಜ.30ರಂದು, ಫೆ.15 ಮತ್ತು 27ರಂದು ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆಯಲ್ಲಿ ರಾಸಾಯನಿಕ, ಮೂಲಸೌಕರ್ಯ, ಆಹಾರ, ಪ್ಲಾಸ್ಟಿಕ್/ರಬ್ಬರ್ ಸೇರಿದಂತೆ ವಿವಿಧ ಕ್ಷೇತ್ರದ ಕೈಗಾರಿಕೆಗಳನ್ನು ಆಂಭಿಸಲು ಅನುಮೋದನೆ ನೀಡಲಾಗಿದೆ.
2019ರ ವೇಳೆಗೆ 15 ಲಕ್ಷ ಉದ್ಯೋಗ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕೂಕಾಲು ವರ್ಷದಲ್ಲಿ 12.16 ಲಕ್ಷ ರೂ. ಉದ್ಯೋಗ ಸೃಷ್ಟಿಸಲಾಗಿದೆ. ನಮ್ಮ ಸರ್ಕಾರ 2019ರ ವೇಳೆಗೆ 15 ಲಕ್ಷ ಉದ್ಯೊಗ ಸೃಷ್ಟಿಸುವ ಗುರಿ ಮುಟ್ಟಲಿದ್ದೇವೆ.