ಮದ್ದೂರು: ರೈತ ನಾಯಕ ಪುಟ್ಟಣ್ಣಯ್ಯ ಶ್ರದ್ಧಾಂಜಲಿ ಸಭೆ
ಮದ್ದೂರು, ಫೆ.27: ರೈತ ಚೇತನ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದಿಂದ ರಾಜ್ಯದ ಶೋಷಿತ ಸಮುದಾಯಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ವಿಷಾಧ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತಸಂಘ ಹಾಗೂ ಮಧು ಜಿ.ಮಾದೇಗೌಡ ಅಭಿಮಾನಿಗಳ ಬಳಗದಿಂದ ಮಂಗಳವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಪುಟ್ಟಣ್ಣಯ್ಯ ಅವರ ಹೋರಾಟವನ್ನು ಸ್ಮರಿಸಿದರು.
ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ರುದ್ರಪ್ಪ ಅವರ ನೇತೃತ್ವದಲ್ಲಿ 80ರ ದಶದಲ್ಲಿ ಹುಟ್ಟಿದ ರೈತ ಚಳವಳಿಯನ್ನು ನಂತರ, ಇಡೀ ರಾಜ್ಯಕ್ಕೆ ವಿಸ್ತರಿಸಿದವರು ಕೆ.ಎಸ್.ಪುಟ್ಟಣ್ಣಯ್ಯ ಅವರು ಎಂದರು.
ರೈತಸಂಘಟನೆಯನ್ನು ರಾಜ್ಯದುದ್ದಕ್ಕೂ ವಿಸ್ತರಿಸಿ ರೈತರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲಾ ಶೋಷಿತ ಸಮುದಾಯಗಳಿಗೆ ಹೋರಾಟದ ಮೂಲಕ ಅವರ ಹಕ್ಕನ್ನು ಪಡೆಯಲು ಪುಟ್ಟಣ್ಣಯ್ಯ ಶ್ರಮಿಸಿದರು ಎಂದು ಅವರು ಹೇಳಿದರು.
ರೈತರ ಜೀವನಾಡಿ ಕಾವೇರಿ ಹೋರಾಟವನ್ನು ಪಾರ್ಲಿಮೆಂಟ್‍ವರೆಗೆ ತೆಗೆದುಕೊಂಡು ಹೋದರು. ಯಾವುದೇ ಸರಕಾರಗಳು ರೈತರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟರು. ಅಂತೆಯೇ ಬ್ಯಾಂಕ್‍ಗಳ ಮನೆ ಜಪ್ತಿ ಬಗ್ಗೆ ರೈತರಿಗೆ ಅರಿವು ಮೂಡಿಸಿದರು ಎಂದು ಅವರು ಸ್ಮರಿಸಿದರು.
ರೈತ ಚಳವಳಿಯಿಂದ ಎರಡು ಬಾರಿ ಶಾಸಕರಾಗಿ ಶಾಸನ ಸಭೆಯಲ್ಲಿ ರೈತರ, ದಲಿತರ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಪುಟ್ಟಣ್ಣಯ್ಯ ಅವರು ನಡೆಸಿದ ಹೋರಾಟ ಅವಿಸ್ಮರಣೀಯ ಎಂದು ಅವರು ಶ್ಲಾಘಿಸಿದರು.
ಪುಟ್ಟಣ್ಣಯ್ಯ ಅವರ ಜತೆಗೆ ಕೋಣಸಾಲೆ ನರಸರಾಜು, ವಿ.ಅಶೋಕ್ ಅವರನ್ನೂ ಕಳೆದುಕೊಂಡ ಕುಟುಂಬಗಳು, ಶೋಷಿತ ಸಮುದಾಯ ದೊಡ್ಡ ನಷ್ಟ ಅನುಭವಿಸಿವೆ. ಪ್ರಗತಿಪರ ಸಂಘಟನೆಗಳು ರೈತ ಚಳವಳಿಯನ್ನು ಸಮರ್ಥವಾಗಿ ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದರು.
ರೈತಸಂಘದ ಮುಖಂಡರಾದ ಅಣ್ಣೂರು ಮಹೇಂದ್ರ, ಯಧುಶೈಲ ಸಂಪತ್, ಜಿ.ಎ.ಶಂಕರ್, ಕೀಳಘಟ್ಟ ನಂಜುಂಡಯ್ಯ, ವರದರಾಜು, ಕದುರುಗುಂಡಿ ನಾಗರಾಜು, ಗೊಲ್ಲರದೊಡ್ಡಿ ಅಶೋಕ್, ರವಿಕುಮಾರ್, ಸಿದ್ದೇಗೌಡ, ಲಿಂಗಪ್ಪಾಜಿ, ರಾಮಣ್ಣ, ಮಧು ಜಿ.ಮಾದೇಗೌಡ ಬಳಗದ ಅವಿನಂದನ್, ಮಾಚಹಳ್ಳಿ ಕುಮಾರ್, ರಮೇಶ್, ಕುಮಾರ್, ಕೃಷ್ಣ, ಭರತೇಶ, ಇತರರು ಹಾಜರಿದ್ದರು.