ಕನ್ನಡ ಸಾಹಿತ್ಯದ ಮಹಾನ್ ಕವಿ ಸರ್ವಜ್ಞ: ಡಾ.ಎಂ.ಪಿ.ಹರ್ಷ

Update: 2018-02-27 18:28 GMT

ಮಂಡ್ಯ, ಫೆ.27: 17ನೆ ಶತಮಾನದ ಕನ್ನಡದ ಮಹಾನ್ ಕವಿ ಸರ್ವಜ್ಞ ಅವರು ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಸಾರಿದ ಮಹಾನ್ ಚೇತನ ಎಂದು ಮೈಸೂರಿನ ಕ್ರೆಡಿಟ್ ಐ.ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಂ.ಪಿ.ಹರ್ಷ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕರತಿ ಇಲಾಖೆ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ಮಂಗಳವಾರ ನಡೆದ ಸಂತ ಕವಿ ಸರ್ವಜ್ಞ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಕುಂಬಾರ ಮನೆತನದಲ್ಲಿ ಹುಟ್ಟಿದ ಸರ್ವಜ್ಞಕವಿ ಮಡಕೆ ಮಾಡುವ ಕಾಯಕದ ಜತೆಗೆ ಸಮಾಜದ ನ್ಯೂನತೆಗಳ ಸರಿಪಡಿಸುವ ಕೆಲಸ ಕಾರ್ಯಗಳನ್ನು  ಮಾಡುತ್ತಿದ್ದರು. ಅನ್ಯಾಯವನ್ನು ನೇರವಾಗಿ ಎದುರಿಸುತ್ತಿದ್ದರು. ತನ್ನ ಬದುಕನ್ನೆ ಜಗತ್ತಿಗೆ ಮಾದರಿಯಾಗಿಕೊಟ್ವ ಅವರು ಕನ್ನಡದ ಸಾಹಿತ್ಯ ವಚನಗಳನ್ನು ಜಾಗತಿಕ ಮಟ್ಟದಲ್ಲಿ ಸಾರಿದರು ಎಂದು ಅವರು ತಿಳಿಸಿದರು.

ಸರ್ವಜ್ಞ ಅವರ ವಚನಗಳು ಮತ್ತು ತ್ರಿಪದಿಗಳು ಜೀವನಕ್ಕೆ ತುಂಬಾ ಹತ್ತಿರವಾಗಿದ್ದು, ಪ್ರತಿಯೊಬ್ಬರು ಕೂಡ ತಿಳಿಯಬೇಕು ಹಾಗೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ನೈತಿಕ ವಾತಾವರಣ ಸೃಷ್ಟಿಯಾಗಲಿದೆ ಎಂದು ಅವರು ನುಡಿದರು.

ಉಪವಿಭಾಗಾಧಿಕಾರಿ ರಾಜೇಶ್ ಮಾತನಾಡಿ, ಸರ್ವಜ್ಞ ಅವರ ತ್ರಿಪದಿಗಳು ಮನುಕುಲಕ್ಕೆ ಹತ್ತಿರ ಇವೆ. ತಮಿಳುನಾಡಿನ ಪೆರಿಯಾರ್ ರೀತಿಯಲ್ಲಿ ಕನ್ನಡದ ಮಹಾನ್ ಸಂತರಾದ ಸರ್ವಜ್ಞ ಅವರು ಹಾಡು ಭಾಷೆಯ ಮೂಲಕವಾಗಿ ಜನರಿಗೆ ಸಂದೇಶ ಸಾರುತ್ತಾ ಕನ್ನಡ ಭಾಷೆಯನ್ನು ಉನ್ನತೀಕರಿಸಿದ್ದಾರೆ ಎಂದರು.

ತಾಪಂ ಅಧ್ಯಕ್ಷೆ ಶೈಲಜ, ತಹಶೀಲ್ದಾರ್ ನಾಗೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News