ತನ್ನ ಮರ್ಯಾದೆ ಒಂದು ರೂ. ಎಂದು ಒಪ್ಪಿಕೊಂಡ ಪ್ರಕಾಶ್ ರೈ: ಸಂಸದ ಪ್ರತಾಪ್ ಸಿಂಹ

Update: 2018-02-28 15:00 GMT

ಮೈಸೂರು,ಫೆ.28: ಸಮಾಜದಲ್ಲಿ ನಟ ಪ್ರಕಾಶ್ ರೈ ಅವರ ಮಾನ ಮರ್ಯಾದೆಗೆ ಇರುವ ಬೆಲೆ ಒಂದು ರೂಪಾಯಿ ಎಂಬುದನ್ನು ನ್ಯಾಯಾಲಯದಲ್ಲಿ ಅವರೇ ಒಪ್ಪಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಜಲದರ್ಶಿನಿಯಲ್ಲಿರುವ ತಮ್ಮ ಕಚೇರಿ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕಾಶ್ ರೈ ಅವರಿಗೆ ಅಭಿನಂದನೆ ಸಲ್ಲಿಸಿದರು. ರೀಲ್ ಮತ್ತು ರಿಯಲ್ ಎರಡೂ ಲೈಫ್ ನಲ್ಲಿ ಸಮಾಜದಲ್ಲಿ ಅವರಿಗೆ ಕೊಡುತ್ತಿರುವ ಬೆಲೆ ಮೂರು ಕಾಸಿನದ್ದಾಗಿದೆ. ಹಾಗಾಗಿ ಅವರು ಒಂದು ರೂ. ಬದಲಿಗೆ ಮೂರು ಕಾಸಿಗೆ ಮಾನ ನಷ್ಟ ಮೊಕದ್ದಮೆ ಹೂಡಲು ಸಲಹೆ ನೀಡಿದರು.

ನಾನು ಇಲ್ಲದ ವೇಳೆ ಅವರ ಲೀಗಲ್ ನೋಟಿಸ್ ಬಂದಿತ್ತು. ಅದು ದೆಹಲಿಯ ಜುಬಲಿ ಹಿಲ್ಸ್ ಪ್ರಕಾಶ್ ರಾಜ್ ಹೆಸರಲ್ಲಿ ಬಂದಿತ್ತು. ಆಗ ನಾನು ಹೆಸರು ಗೊಂದಲವಾಗಿ, ಅವರ ಹೆಸರು ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್ ಎಂದು ಸ್ಪಷ್ಟ ಪಡಿಸುವಂತೆ ಕೇಳಿದ್ದೇನೆ. ಒಂದೊಂದು ಸಿನಿಮಾದಲ್ಲಿ ಖಳನಟರಿಗೆ ಬೇರೆ ಬೇರೆ ಹೆಸರಿರುತ್ತದೆ. ಹಾಗೇ ಇವರು ಕೂಡ. ಒಂದೊಂದು ಕಡೆ ಹೋದರೂ ಕೂಡ ಒಂದೊಂದು ಹೆಸರು ಹೇಳುತ್ತಾರೆ. ದೆಹಲಿಯಲ್ಲಿ ಪ್ರಕಾಶ್ ರಾಜ್ ಅಂತ ಹೇಳಿಕೊಳ್ಳುತ್ತಾರೆ. ಮೈಸೂರಿನಲ್ಲಿ ಪ್ರಕಾಶ್ ರೈ ಎಂದು ಹೇಳುತ್ತಾರೆ. ಆದರೆ ಅವರ ನಿಜವಾದ ಹೆಸರು ಯಾವುದು ಅನ್ನೋದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಹೇಳಿದರು.

ನಾನು ಅವರ ವಿರುದ್ಧ ಟ್ವೀಟ್ ಮಾಡಿಲ್ಲ. ತಪಸ್ವೀ ಎಂಬವರು ಪೋಸ್ಟ್ ಮಾಡಿದ್ದು, ಅದನ್ನು ನಾನು ಶೇರ್ ಮಾಡಿದ್ದೇನೆ. ಅವರ ಮೇಲೆ ಮೊಕದ್ದಮೆ ದಾಖಲಿಸದೆ ನನ್ನ ಮೇಲೆ ಮೊಕದ್ದಮೆ ಹೂಡಿದ್ದಾರೆ. ಹಾಗಾದರೇ ಶೇರ್ ಮಾಡಿದವರ ಮೇಲೆ ಮೊಕದ್ದಮೆ ಹೂಡುತ್ತಾರಾ. ನಾನು ಮೇಟಿ ವಿಚಾರ ಸೇರಿದಂತೆ ಯಾವ ವಿಚಾರದಲ್ಲೂ ವೈಯುಕ್ತಿಕ ವಿಚಾರಗಳನ್ನು ಎಳೆದು ತಂದಿಲ್ಲ. ನಾನು ಈಗಲೂ ಅವರ ಬಗ್ಗೆ ಮಾತನಾಡಲ್ಲ. ತಾರ್ಕಿಕವಾಗಿ ಮಾತನಾಡಿದ್ದೇನೆ ಅಷ್ಟೇ. ಕೋರ್ಟ್ ವಿವರಣೆ ಕೇಳಿದರೆ ಕೊಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News