ಅತ್ಯಾಚಾರ ಆರೋಪಗಳಿಂದ ಮುಕ್ತಗೊಳಿಸಲು ಮನವಿ: ಹೈಕೋರ್ಟ್‌ ಮೆಟ್ಟಿಲೇರಿದ ನಿತ್ಯಾನಂದ ಸ್ವಾಮಿ, ಶಿಷ್ಯರು

Update: 2018-02-28 15:44 GMT

ಬೆಂಗಳೂರು, ಫೆ.28: ಭಕ್ತೆಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಗಳಿಂದ ಮುಕ್ತಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ರಾಮನಗರ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಮತ್ತವರ ಐವರು ಶಿಷ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ನಿತ್ಯಾನಂದ ಸ್ವಾಮೀಜಿ ಮತ್ತು ಆತನ ಶಿಷ್ಯರಾದ ಶಿವ ವಲ್ಲಭನೇನಿ, ರಾಗಿಣಿ ವಲ್ಲಭನೇನಿ, ಧನಶೇಖರ ಮತ್ತು ಜಮುನ ರಾಣಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಸಂಬಂಧ ಸುದೀರ್ಘ ತನಿಖೆ ನಡೆಸಿದ ಪೊಲೀಸರು, ನಮ್ಮ ವಿರುದ್ಧದ ಆರೋಪಗಳನ್ನು ದೃಢಪಡಿಸುವಂತಹ ಯಾವುದೇ ಸಾಕ್ಷಾಧಾರ ಹಾಗೂ ದಾಖಲೆಗಳನ್ನು ಸಂಗ್ರಹಿಸಿಲ್ಲ. ಆದರೂ ಧಾರ್ಮಿಕ ಭಾವನೆಗಳ ಧಕ್ಕೆ, ವಂಚನೆ, ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ, ಜೀವ ಬೆದರಿಕೆ ಮತ್ತು ಅಪರಾಧಿಕ ಒಳಸಂಚು ಆರೋಪ ಸಂಬಂಧ ನಮ್ಮ ವಿರುದ್ಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.

ಅಲ್ಲದೆ, ಈ ದೋಷಾರೋಪ ಪಟ್ಟಿ ಆಧರಿಸಿ ಬಿಡದಿ ಸೆಷನ್ಸ್ ನ್ಯಾಯಾಲಯ ನಮ್ಮ ವಿರುದ್ದ ಆರೋಪಗಳನ್ನು ರಚಿಸಿದೆ. ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪ ಮುಕ್ತಗೊಳಿಸಲು ಕೋರಿ ನಾವು ಅರ್ಜಿ ಸಲ್ಲಿಸಿದ್ದೆವು. ಆದರೆ, ಆ ಅರ್ಜಿಯನ್ನು ನ್ಯಾಯಾಲಯವು ಸೂಕ್ತ ವಿವೇಚನೆ ಬಳಸದೆ ವಜಾಗೊಳಿಸಿದೆ. ಆ ಕ್ರಮ ಕಾನೂನು ಬಾಹಿರ. ಹೀಗಾಗಿ, ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಹಾಗೂ ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಕೋರಿದ್ದಾರೆ.

ಈ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ಪೀಠದ ಬುಧವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಕೆಲ ಕಾಲ ವಾದ ಮಂಡಿಸಿ, ಪ್ರಕರಣದಲ್ಲಿ ಅಧೀನ ನ್ಯಾಯಾಲಯದಿಂದಾಗಿರುವ ಹಲವು ಕಾನೂನು ತೊಡಕುಗಳ ಬಗ್ಗೆ ನ್ಯಾಯಪೀಠಕ್ಕೆ ವಿವರಿಸಿದರು. ನ್ಯಾಯಪೀಠವು ವಕೀಲರ ವಾದವನ್ನು ಆಲಿಸಿ ಅರ್ಜಿಯನ್ನು ಮುಂದೂಡಿತು.

ಭಕ್ತೆಯ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಸಲ್ಲಿಸಿದ್ದ ದೋಷಾರೋಪ ಪಟ್ಟಿ ಆಧರಿಸಿ ಆರೋಪಗಳನ್ನು ರಚಿಸಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್, 2017ರ ಡಿಸೆಂಬರ್‌ನಲ್ಲಿ ರಾಮನಗರ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಅದರಂತೆ ಆರೋಪಗಳನ್ನು ರಚಿಸಿ ವಿಚಾರಣೆ ಮಾಡುತ್ತಿದ್ದ ಅಧೀನ ನ್ಯಾಯಾಲಯ, ಆರೋಪಗಳಿಂದ ಮುಕ್ತಗೊಳಿಸುವಂತೆ ಕೋರಿ ನಿತ್ಯಾನಂದ ಸ್ವಾಮಿ ಮತ್ತವರ ಶಿಷ್ಯರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News