ಹರಿಹರ: ಹುತಾತ್ಮ ಯೋಧ ಜಾವೀದ್ ಮನೆಗೆ ಯಡಿಯೂರಪ್ಪ ಭೇಟಿ

Update: 2018-02-28 18:03 GMT

ಹರಿಹರ,ಫೆ.28: ಭಾರತ ಸೈನಿಕರು ರಾಜಸ್ಥಾನದ ಜೋದ್‍ಪುರ ಜಿಲ್ಲೆಯ ಪೋಕ್ರಾನ್ ಅಣುಬಾಂಬ್ ತರಬೇತಿ ಕೇಂದ್ರದಲ್ಲಿ ನಡೆಸಿದ್ದ ಬಾಂಬ್ ಹಾರಿಸುವ ತರಬೇತಿಯಲ್ಲಿ ಭಾಗವಹಿಸಿ ವೀರಮರಣವನ್ನಪ್ಪಿರುವ ಹರಿಹರ ನಗರದ ಸೈನಿಕ ಜಾವೀದ್ ಮನೆಗೆ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ರಾಜ್ಯ ಬಿಜೆಪಿ ಯಿಂದ ಜಾವೀದ್ ಕುಟುಂಬಕ್ಕೆ ಒಂದು ಲಕ್ಷ ರು. ನಗದು ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೌಜನ್ಯಕ್ಕಾದರೂ ವೀರಮರಣವನ್ನಪ್ಪಿರುವ ಯೋಧನ ಮನೆಗೆ ಭೇಟಿ ನೀಡದಿರುವುದು, ನಿಜಕ್ಕೂ ವೀರ ಸೈನಿಕನಿಗೆ ತೋರುವ ಅಗೌರವಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರದಲ್ಲಿರುವವರು ಎಲ್ಲರನ್ನು ಸಮಾನದೃಷ್ಠಿಯಿಂದ ನೋಡಬೇಕು. ದೇಶ ಕಾಯುವ ಯೋಧ, ಅನ್ನದಾತ, ಕಾರ್ಮಿಕ ಇವರು ದೇಶದ ಬೆನ್ನೆಲುಬು. ಇವರ ಬಗ್ಗೆ ಅಗೌರವ ತೋರುತ್ತಿರುವುದು ಕಾಂಗ್ರೆಸ್ ಮೂರ್ಖತನದ ಪರಮಾವಧಿ. ತಕ್ಷಣವೇ ರಾಜ್ಯ ಸರ್ಕಾರ ವೀರಮರಣವನ್ನಪ್ಪಿರುವ ಸೈನಿಕನ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಬಿ.ಎಸ್ ವೈ ಆಗ್ರಹಿಸಿದರು.

ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ರೈತರ, ದೇಶಕಾಯುವ ಸೈನಿಕರ, ಪೊಲೀಸ್ ಅಧಿಕಾರಿಗಳ, ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಮರಣವನ್ನಪ್ಪಿದರೂ ಅವರ ಸಾವಿನ ಕುರಿತು ಕಂಬನಿ ಮಿಡಿಯುವುದಾಗಲಿ, ಸಾಂತ್ವನ ಹೇಳುವುದಕ್ಕಾಗಲಿ ಸರ್ಕಾರ ಮುಂದಾಗಿಲ್ಲ. ವೀರಮರಣವನ್ನಪ್ಪಿರುವ ಹರಿಹರದ ಯೋಧನ ಪತ್ನಿ ಸರತಾಜ್‍ಭಾನು ಬಿ.ಎ. ಪದವೀಧರಳಾಗಿದ್ದು, ಅವಳಿಗೆ ರಾಜ್ಯ ಸರ್ಕಾರ ನೌಕರಿ ನೀಡಬೇಕು. ತಂದೆ ಅಬ್ದುಲ್‍ಖಾದರ್, ತಾಯಿ ಫಾತಿಮಾಭಿ ಸೇರಿದಂತೆ ಸಹೋದರರು ಕಂಗಾಲಾಗಿದ್ದು, ಜೀವನ ನಿರ್ವಹಣೆಗೆ ಕುಟುಂಬಕ್ಕೆ ಕಂದಾಯ ಇಲಾಖೆಯಿಂದ ಜಮೀನನ್ನು ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಬಿ.ಪಿ ಹರೀಶ, ಜಿಪಂ ಮಾಜಿ ಅಧ್ಯಕ್ಷ ಹನಗವಾಡಿ ವಿರೇಶ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಂ.ಶಿವಾನಂದಪ್ಪ, ನಗರಾಧ್ಯಕ್ಷ ರಾಜು ರೋಖಡೆ, ಮಹಿಳಾ ಅಧ್ಯಕ್ಷೆ ರೂಪಾ ಕಾಟವೆ, ನಗರಸಭಾ ಸದಸ್ಯೆ ಅಂಬುಜಾಬಾಯಿ, ಮಂಜುಳಾ ಅಜ್ಜಯ್ಯ, ಮಾಲತೇಶ ಭಂಡಾರಿ, ನಗರ ಬಿಜೆಪಿ ಕಾರ್ಯದರ್ಶಿ ತುಳಜಪ್ಪ, ಹೆಚ್.ಸಿ.ಕಿರ್ತಿಕುಮಾರ, ಮಂಜಾ ನಾಯ್ಕ, ಜಿಗಳಿ ಮಂಜುನಾಥ, ರಾಘವೇಂದ್ರ, ಎಪಿ ಆನಂದ, ಮಾಲತೇಶ, ಎಂ ಪ್ರಶಾಂತ, ಅಂಜುಮನ್ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಬಿ.ಕೆ. ಸೈಯದ ರೆಹೆಮಾನ್, ಶಮಿಉಲ್ಲಾ ಇತರರು ಹಾಜರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News