ಹಾಸನ: ಜಿಲ್ಲಾಧಿಕಾರಿಯಿಂದ ಮತ ಎಣಿಕೆ ಕೇಂದ್ರ ಪರಿಶೀಲನೆ

Update: 2018-02-28 18:14 GMT

ಹಾಸನ, ಫೆ.28: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಂ ಹಾಗೂ ಮತ ಎಣಿಕೆ ಕೇಂದ್ರ ತೆರೆಯಲು ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಗುರುತಿಸಿದ್ದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ಅವರು ಸ್ಥಳ ಪರಿಶೀಲನೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಸೇರಿದಂತೆ ಲೋಕೋಪಯೋಗಿ, ಸೆಸ್ಕ್, ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿದರು. 

ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಭದ್ರತಾ ಕೊಠಡಿ, ಎಣಿಕಾ ಕೇಂದ್ರ ತೆರೆಯಬೇಕಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸ್ಥಳಾವಕಾಶ ಲಭ್ಯ ಇರುವುದನ್ನು ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಲಾಯಿತು. ಅಲ್ಲದೆ, ಮಾಧ್ಯಮ ಕೇಂದ್ರ, ಪೊಲೀಸ್ ಕೊಠಡಿ ತೆರೆಯುವುದರ ಜೊತೆಗೆ ಕುಡಿಯುವ ನೀರು, ಕಟ್ಟಡದ ಸುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.

ಪೊಲೀಸ್ ಬಂದೋಬಸ್ತ್: ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಕಾಯ್ದಿರಿಸಿರುವ ಮತಪೆಟ್ಟಿಗೆಗಳ ಕಾವಲಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಸಿಸಿ ಕ್ಯಾಮೆರಾದ ಕಣ್ಗಾವಲು ಇರಿಸಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜ್ಯೋತಿ ವೈಜಿನಾಥನ್ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News