ಸಿರಿಯದಲ್ಲಿ ಮೆರೆಯುತ್ತಿರುವ ಮಾನವ ವೈಫಲ್ಯ

Update: 2018-02-28 18:44 GMT

ಸಿರಿಯ ದೇಶವು ಕಳೆದ ಹಲವು ವರ್ಷಗಳಿಂದ ಪದೇ ಪದೇ ಜಗತ್ತಿನ ಗಮನ ಸೆಳೆಯುತ್ತಿದೆ. ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಯ ತವರೆಂದು ಗುರುತಿಸಲಾಗುವ ಈ ಪುಟ್ಟ ದೇಶ ಏನಾದರೂ ಒಳ್ಳೆಯದನ್ನು ಸಾಧಿಸಿ ಗಮನ ಸೆಳೆದಿಲ್ಲ. ಯುದ್ಧ, ವಿಧ್ವಂಸ, ನಾಶ ನಷ್ಟ, ನಿರಾಶ್ರಿತರು ಹೀಗೆ ಎಲ್ಲ ತಪ್ಪುಕಾರಣಗಳಿಗಾಗಿ ಅದು ಚರ್ಚೆಯಲ್ಲಿದೆ. ಮಧ್ಯ ಪ್ರಾಚ್ಯ ಹಾಗೂ ಪಶ್ಚಿಮ ಏಶ್ಯಾದ ಇತರ ಹಲವು ದೇಶಗಳಂತೆ ಸಿರಿಯ ಕೂಡಾ ಬಹುಕಾಲದಿಂದ ಸರ್ವಾಧಿಕಾರಿ ವಂಶಾಡಳಿತದ ಅಧೀನದಲ್ಲಿದೆ. ಮೂರು ದಶಕಗಳ ಕಾಲ ಹಾಫಿಝ್ ಅಸದ್‌ರ ಮುಷ್ಟಿಯಲ್ಲಿದ್ದ ಸಿರಿಯ ಕಳೆದ ಬಹುತೇಕ ಎರಡು ದಶಕಗಳಿಂದ ಅವರ ಉತ್ತರಾಧಿಕಾರಿ ಪುತ್ರ ಬಶಾರ್ ಅಲ್ ಅಸದ್‌ರ ಮುಷ್ಟಿಯೊಳಗೆ ನರಳುತ್ತಿದೆ.

ಜಗತ್ತಿನ ಇತರ ಅನೇಕ ದೇಶಗಳು ವಸಾಹತು ಶಾಹಿತ್ವದಿಂದ ಮುಕ್ತಿ ಪಡೆದ 20ನೇ ಶತಮಾನದ ಪೂರ್ವಾರ್ಧದಲ್ಲಿ ಸಿರಿಯ ಕೂಡ ಫ್ರೆಂಚ್ ಆಕ್ರಮಣಕಾರಿಗಳ ವಶದಿಂದ ಮುಕ್ತವಾಗಿ ಒಂದು ಸ್ವತಂತ್ರ ಪ್ರಜಾಸತ್ತಾತ್ಮಕ ದೇಶವಾಗಿ ಅರಳುವ ಲಕ್ಷಣಗಳನ್ನು ತೋರಿತ್ತು. ಆದರೆ ನೆರೆಯ ಇಸ್ರೇಲ್‌ನ ಆಕ್ರಮಣ ಮತ್ತು ಸ್ವತಃ ತನ್ನದೇ ಸೇನಾ ದಂಡ ನಾಯಕರ ಮಹತ್ವಾಕಾಂಕ್ಷೆಗೆ ಬಲಿಯಾಗಿ ಸರ್ವಾಧಿಕಾರ ಮತ್ತು ಆಂತರಿಕ ಬಿಕ್ಕಟ್ಟಿಗೆ ತುತ್ತಾಯಿತು. 2011ರಲ್ಲಿ ಅಸದ್ ಸರಕಾರ ಮಾಡಿದ ಒಂದು ಸಣ್ಣ ಎಡವಟ್ಟು ರಕ್ತಪಾತ ಹಾಗೂ ದುರಂತಗಳ ಒಂದು ದೀರ್ಘ ಸರಣಿಯನ್ನೇ ಆರಂಭಿಸಿದ್ದು ಸಿರಿಯ ದೇಶವು ಅದರಿಂದ ಇನ್ನೂ ಹೊರ ಬಂದಿಲ್ಲ. ಆ ವರ್ಷ ಹದಿಹರೆಯದ ಕೆಲವು ಹುಡುಗರು ಗೋಡೆಗಳಲ್ಲಿ ಕೆಲವು ಸರಕಾರ ವಿರೋಧಿ ಘೋಷಣೆಗಳನ್ನು ಬರೆದರೆಂದು ಅವರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಕೆಲವರು ಪೊಲೀಸ್ ಕಸ್ಟಡಿಯಲ್ಲಿ ಹತರಾಗಿದ್ದರು. ಈ ಕುರಿತು ಜನರು ಪ್ರತಿಭಟಿಸಿದಾಗ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಹಲವರನ್ನು ಕೊಲ್ಲಲಾಯಿತು. ಸರ್ವಾಧಿಕಾರಿ ಸರಕಾರದ ಈ ಉದ್ಧಟ ಧೋರಣೆಯಿಂದ ಜನ ಮತ್ತಷ್ಟು ಕೆರಳಿದರು. ಇನ್ನೂ ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಬಂದು ತಮ್ಮ ಆಕ್ರೋಶ ಪ್ರಕಟಿಸಿದರು. ತತ್ ಕ್ಷಣದ ಪ್ರಚೋದನೆಗಳ ಜೊತೆ ಸಿರಿಯ ದೇಶದಲ್ಲಿ ಕ್ಷಿಪ್ರವಾಗಿ ಹೆಚ್ಚುತ್ತಿದ್ದ ಆರ್ಥಿಕ ಸಂಕಷ್ಟಗಳು, ಭ್ರಷ್ಟಾಚಾರ ಮತ್ತು ನಿರುದ್ಯೋಗದ ಸಮಸ್ಯೆಗಳು ಅವರ ಆಕ್ರೋಶಕ್ಕೆ ಬಲ ಹಾಗೂ ಸ್ಥಿರತೆಯನ್ನು ನೀಡಿದವು. ಜನರ ಕೋಪತಾಪಗಳು ಮಿತಿಮೀರಿದಾಗ ಅಸದ್ ಸರಕಾರ ತುಸು ಮೃದು ಧೋರಣೆ ತಾಳಿ ಜನತೆಯನ್ನು ಓಲೈಸಲು ಶ್ರಮಿಸಿತು. ಆದರೆ ಆಗಲೇ ಪರಿಸ್ಥಿತಿ ಕೈಮೀರಿತ್ತು. ವಿವಿಧ ಬಗೆಯ ಹಿತಾಸಕ್ತಿಗಳು ಕಣಕ್ಕಿಳಿದವು. ಸರಕಾರ ವಿರೋಧಿ ಆಂದೋಲನವು ಹಲವೆಡೆ ಹಲವರ ಸಹಭಾಗಿತ್ವದೊಂದಿಗೆ ಸಶಸ್ತ್ರ ಹೋರಾಟದ ರೂಪ ತಾಳಿತು. ಸೇನೆಯೊಳಗಿನ ಅತೃಪ್ತ ಗುಂಪುಗಳು ರಂಗ ಪ್ರವೇಶ ಮಾಡಿದವು. ಕ್ರಮೇಣ ಹಲವು ವಿದೇಶಿ ಶಕ್ತಿಗಳು ಸಿರಿಯದಲ್ಲಿ ಹಸ್ತ ಕ್ಷೇಪ ಆರಂಭಿಸಿದವು.

ಇಸ್ರೇಲ್‌ನ ಅಕ್ಕ ಪಕ್ಕದಲ್ಲಿ ಯಾವುದೇ ಶಕ್ತಿಶಾಲಿ ದೇಶ ಇರಬಾರದು ಎಂಬ ತಮ್ಮ ಹಳೆಯ ಧೋರಣೆಗೆ ಅನುಸಾರವಾಗಿ ಇಸ್ರೇಲ್ ಮತ್ತು ಅಮೆರಿಕ ಸರಕಾರಗಳು ಸಿರಿಯದ ಸರಕಾರ ಮತ್ತು ಸಮಾಜವನ್ನು ಅಸ್ತವ್ಯಸ್ತಗೊಳಿಸುವುದಕ್ಕೆ ಬೇಕಾದ ಸರ್ವ ಉಪಕ್ರಮಗಳನ್ನು ಕೈಗೊಂಡವು. ಮಧ್ಯ ಪ್ರಾಚ್ಯದ ಮೇಲೆ ತಮ್ಮ ಪ್ರಾಬಲ್ಯ ಸ್ಥಾಪಿಸುವುದಕ್ಕಾಗಿ ಬಹುಕಾಲದಿಂದ ಪರಸ್ಪರ ತೀವ್ರ ಪೈಪೋಟಿ ನಡೆಸುತ್ತಿರುವ ಇರಾನ್ ಮತ್ತು ಸೌದಿ ಅರೇಬಿಯಾದ ಸರಕಾರಗಳು ಕೂಡ ಕಣಕ್ಕಿಳಿದವು. ಸಿರಿಯದಲ್ಲಿ ತಮಗೆ ವಿಧೇಯ ಗುಂಪುಗಳನ್ನು ಗುರುತಿಸಿ ಅವುಗಳಿಗೆ ಸೈನಿಕ ತರಬೇತಿ ಒದಗಿಸಲು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲು ಆರಂಭಿಸಿದರು. ಸಾಲದ್ದಕ್ಕೆ ಜಗತ್ತಿನ ವಿವಿಧ ಭಾಗಗಳಲ್ಲಿ ಮುಗ್ಧ ಯುವಕರಿಗೆ ವಿಕೃತ ಧರ್ಮದ ಅಮಲೇರಿಸಿ ಧರ್ಮಯುದ್ಧದ ಹೆಸರಲ್ಲಿ ಸಿರಿಯಗೆ ಕಳಿಸಲಾಯಿತು. ಇಸ್ರೇಲ್, ಸೌದಿ, ಅಮೆರಿಕ ಮುಂತಾದ ದೇಶಗಳು ಮತ್ತು ಅವರ ಕೃಪಾಪೋಷಿತ ಭಯೋತ್ಪಾದಕ ಗುಂಪುಗಳು ಅಸದ್‌ರನ್ನು ಪದಚ್ಯುತಗೊಳಿಸುವ ನೆಪದಲ್ಲಿ ರಂಗಕ್ಕಿಳಿದರೆ, ಅರಾಜಕತಾವಾದಿಗಳ ಆಕ್ರಮಣದಿಂದ ಅಸದ್ ಸರಕಾರವನ್ನು ರಕ್ಷಿಸುವ ಹೆಸರಲ್ಲಿ ರಶ್ಯ, ಇರಾನ್ ಮತ್ತು ಅದರ ಬೆಂಬಲಿತ ಹಿಜ್ಬುಲ್ಲಾ ಮತ್ತಿತರ ಗುಂಪುಗಳು ಸಿರಿಯದಲ್ಲಿ ಹಸ್ತಕ್ಷೇಪ ಆರಂಭಿಸಿದವು. ಈ ರೀತಿ ಸಿರಿಯ ಎಲ್ಲ ಬಗೆಯ ವಿಷಜಂತುಗಳ ಪಾಲಿಗೆ ತಮ್ಮ ವಿನಾಶ ಸಾಮರ್ಥ್ಯವನ್ನು ಮೆರೆಯುವ ವೇದಿಕೆಯಾಗಿ ಬಿಟ್ಟಿತು. ಎಲ್ಲ ಬಗೆಯ ಯುದ್ಧ ತಂತ್ರಗಳಿಗೆ, ವಿನಾಶಕಾರಿ ಅಸ್ತ್ರಗಳಿಗೆ ಮತ್ತು ಭಯೋತ್ಪಾದಕ ಕಾರ್ಯ ತಂತ್ರಗಳಿಗೆ ಸಿರಿಯ ಒಂದು ಪ್ರಯೋಗಶಾಲೆಯಾಯಿತು.

‘ಸಿವಿಲ್ ವಾರ್’ ಎಂಬೊಂದು ಹೆಸರು ಕೊಟ್ಟು ಅಲ್ಲಿಯ ಬಿಕ್ಕಟ್ಟನ್ನು ಜಗತ್ತಿನ ಮುಂದೆ ಬೇರೆಯೇ ರೀತಿಯಲ್ಲಿ ಚಿತ್ರಿಸಲಾಯಿತು. ಈ ಎಲ್ಲದರ ನಡುವೆ ಆ ನೆಲದಲ್ಲಿ ಲಕ್ಷಾಂತರ ಜೀವಗಳು ಆಹುತಿಯಾದವು. ಅಪಾರ ಸಂಖ್ಯೆಯ ಜನರ ಬದುಕು ನಾಶವಾಯಿತು. ಒಂದು ಅಂದಾಜಿನಂತೆ ಪ್ರಸ್ತುತ ಬಿಕ್ಕಟ್ಟು ಆರಂಭವಾದಾಗಿನಿಂದ ಮುಗ್ಧ ನಾಗರಿಕರು, ಸರಕಾರಿ ಪಡೆಗಳು ಮತ್ತು ಸರಕಾರ ವಿರೋಧಿ ಸಶಸ್ತ್ರ ಗುಂಪುಗಳು ಸೇರಿದಂತೆ ನಾಲ್ಕು ಲಕ್ಷಕ್ಕೂ ಅಧಿಕ ಜನರು ಅಲ್ಲಿ ಹತರಾಗಿದ್ದಾರೆ. ದೇಶದೊಳಗೆ 60 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ. 50 ಲಕ್ಷಕ್ಕೂ ಹೆಚ್ಚಿನವರು ಬೇರೆ ದಾರಿ ಕಾಣದೆ ತಮ್ಮ ನಾಡನ್ನು ತೊರೆದು ಯಾವ್ಯಾವುದೋ ದೇಶದಲ್ಲಿ ಆಶ್ರಯ ಅರಸುತ್ತಾ ಅಲೆಯುತ್ತಿದ್ದಾರೆ. ಯಾವುದಾದರೂ ನಾಡಿನಲ್ಲಿ ಸುರಕ್ಷಿತರಾಗಿರೋಣ ಎಂಬ ಹಂಬಲ ಹೊತ್ತು ತಮ್ಮ ಕುಟುಂಬ ಮತ್ತು ಹಸುಗೂಸುಗಳೊಂದಿಗೆ ಸಣ್ಣಪುಟ್ಟ ಬೋಟುಗಳನ್ನು ಹತ್ತಿ ಸಮುದ್ರ ದಾಟುವ ಸಾಹಸಕ್ಕಿಳಿದವರಲ್ಲಿ ಸಹಸ್ರಾರು ಮಂದಿ ಕಡಲ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಹಲವೊಮ್ಮೆ ಈ ವಲಸಿಗರು ಮತ್ತವರ ಎಳೆಯ ಮಕ್ಕಳ ಶವಗಳು ಮಾತ್ರ ಯಾವುದಾದರೂ ದೇಶದ ಕಡಲ ತೀರವನ್ನು ತಲುಪಿವೆ. ಸಿರಿಯದ ಹೆಚ್ಚಿನೆಲ್ಲ ನಗರಗಳು, ನಾಗರಿಕ ಸವಲತ್ತುಗಳು ಸರ್ವನಾಶವಾಗಿವೆ. ಬಾಂಬು ದಾಳಿ, ಡ್ರೋನ್ ದಾಳಿ, ಮಿಸೈಲ್ ದಾಳಿ, ಸ್ಫೋಟ ಇತ್ಯಾದಿಗಳು ಅಸದ್ ಪರ ಮತ್ತು ಅಸದ್ ವಿರೋಧಿ ಪಡೆಗಳ ಮತ್ತು ಯೋಧರ ಮಾತ್ರವಲ್ಲ, ಮುಗ್ಧ ಜನಸಾಮಾನ್ಯರ, ಮಹಿಳೆಯರು ಮತ್ತು ಮಕ್ಕಳ ಸಾವು ನೋವುಗಳ ಸುದ್ದಿಗಳು ಮಾತ್ರ ನಿತ್ಯವೂ ಹರಿದು ಬರುತ್ತಲೇ ಇವೆ.

ಇಂದು ಸಿರಿಯದಲ್ಲಿ ನಡೆಯುತ್ತಿರುವ ವಿನಾಶಕಾರಿ ಸಂಘರ್ಷಕ್ಕೆ ಯಾವುದೇ ತಾತ್ವಿಕ, ಸೈದ್ಧಾಂತಿಕ, ರಾಷ್ಟ್ರೀಯ ಅಥವಾ ಧಾರ್ಮಿಕ ಭಿನ್ನತೆ ಖಂಡಿತ ಕಾರಣವಲ್ಲ. ಕೆಲವು ಶಕ್ತಿಶಾಲಿ ವ್ಯಕ್ತಿಗಳು, ಸರಕಾರಗಳು ಮತ್ತು ಪಂಗಡಗಳ ಸ್ವಾರ್ಥ, ಅಧಿಕಾರ ಲಾಲಸೆ ಮತ್ತು ಇತರ ದುರಂತಗಳಿಂದ ಲಾಭ ಪಡೆಯುವ ವ್ಯಾಧಿಗ್ರಸ್ತ ಮನಸ್ಸು ಮಾತ್ರ ಇದಕ್ಕೆ ಕಾರಣ. ಇಲ್ಲಿ, ಮಾನವ ಸಮಾಜ ನಾಚಿ ತಲೆ ತಗ್ಗಿಸಬೇಕಾದ ಸಂಗತಿ ಏನೆಂದರೆ, ಜನರ ನಡುವಣ ವಿವಾದ, ಬಿಕ್ಕಟ್ಟುಗಳ ಇತ್ಯರ್ಥಕ್ಕೆ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಇರುವಂತಹ ಏನಾದರೂ ಏರ್ಪಾಡು ಇಂದು ಜಾಗತಿಕ ಮಟ್ಟದಲ್ಲಿ ಇಲ್ಲ. ಇಪ್ಪತ್ತೊಂದನೇ ಶತಮಾನದಲ್ಲೂ, ಸಣ್ಣ ಜಗಳಗಳನ್ನು ದೊಡ್ಡ ಯುದ್ಧಗಳಾಗಿ ಮಾರ್ಪಡಿಸುವ ಸವಲತ್ತುಗಳಿವೆಯೇ ಹೊರತು ಮಾನವ ಸಮಾಜದ ಜಗಳ ನಿರತ ಗುಂಪುಗಳನ್ನು ಒಂದೆಡೆ ಕೂರಿಸಿ ಮಧ್ಯಸ್ಥಿಕೆ ನಡೆಸಿ, ಅವರಲ್ಲಿ ವಿವೇಕ ಮೂಡಿಸುವ ಯಾವ ಸವಲತ್ತೂ ಇಲ್ಲ. ವಿಶ್ವ ಸಂಸ್ಥೆ ಎಂಬೊಂದು ಸಂಸ್ಥೆಯನ್ನು ಇದೇ ಉದ್ದೇಶಕ್ಕಾಗಿ ಸ್ಥಾಪಿಸಲಾಗಿತ್ತಾದರೂ ವೀಟೋ ಧಾರಿಗಳ ಅಟ್ಟಹಾಸದ ಮುಂದೆ ಆ ಸಂಸ್ಥೆ ಅಸಹಾಯಕವಾಗಿ ನರಳುತ್ತಿದೆ. ಹಲವರ ಪಾಲಿಗೆ ಇವತ್ತು ಸಿರಿಯ ಒಂದು ರಂಗ ಭೂಮಿ. ಅಲ್ಲಿ ನಡೆಯುತ್ತಿರುವ ಮರಣಾನೃತ್ಯಕ್ಕೆ ಜಗತ್ತಿನವರೆಲ್ಲ ಉತ್ಸಾಹಿ ವೀಕ್ಷಕರು ಮತ್ತು ವಿಮರ್ಶಕರು. ಇದು ಹೀಗೆಯೇ ಮುಂದುವರಿದರೆ ಇಂದು ವೀಕ್ಷಕರಾಗಿರುವವರ ನಾಡುಗಳು ನಾಳೆ ಸಿರಿಯದಂತಹ ರಂಗ ಭೂಮಿಗಳಾಗುವುದನ್ನು ತಪ್ಪಿಸಲು ಖಂಡಿತ ಸಾಧ್ಯವಿಲ್ಲ. ದುರಂತವನ್ನು ನಮ್ಮಿಂದ ದೂರವಿಡುವುದಕ್ಕಿರುವುದು ಒಂದೇ ದಾರಿ. ನಾವು ಅಂಜುವ ದುರಂತವನ್ನು ಎಲ್ಲರಿಂದ ದೂರವಿಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News