ದ್ವಿತೀಯ ಪಿಯು ಪರೀಕ್ಷೆ : ಕಪ್ಪುಪಟ್ಟಿ ಧರಿಸಿ ಉಪನ್ಯಾಸಕರ ಪ್ರತಿಭಟನೆ

Update: 2018-03-01 14:06 GMT

ಬೆಂಗಳೂರು, ಮಾ. 1: ವಿದ್ಯಾರ್ಥಿಗಳ ಭವಿಷ್ಯದ ಪರೀಕ್ಷೆಯಾದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯದ 1004 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯೊಂದಿಗೆ ಆರಂಭಗೊಂಡಿದ್ದು, ಮಾ.17 ರವರೆಗೂ ಪರೀಕ್ಷೆಗಳು ನಡೆಯಲಿವೆ.

ರಾಜ್ಯಾದ್ಯಂತ ಮೊದಲ ದಿನದಂದು 5,39,430 ಹೊಸ ವಿದ್ಯಾರ್ಥಿಗಳು ಹಾಗೂ 1,22,346 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 28,374 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ಬರೆದರು. ನ್ಯಾಯಯುತವಾದ ಹಾಗೂ ಯಾವುದೇ ಅಕ್ರಮಕ್ಕೆ ಅವಕಾಶ ನೀಡದ ರೀತಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ: ಪದವಿಪೂರ್ವ ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸುವಂತೆ ಆಗ್ರಹಿಸಿ ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರಾಗಿ ನೇಮಕಗೊಂಡಿರುವ ಉಪನ್ಯಾಸಕರು, ಕಪ್ಪುಪಟ್ಟಿ ಧರಿಸಿ ಪರೀಕ್ಷಾ ಕರ್ತವ್ಯದಲ್ಲಿ ಹಾಜರಾಗಿದ್ದರು.

ಕಲಾವಿಭಾಗದಲ್ಲಿ 2,01,278 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗಗಳಲ್ಲಿ 2,56,479 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 2,32,393 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇದರಲ್ಲಿ 3,52,292 ಬಾಲಕರು ಹಾಗೂ 3,37,860 ಬಾಲಕಿಯರಿದ್ದಾರೆ.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಡಿಯಲ್ಲಿ ಪರೀಕ್ಷೆ ನಡೆದಿದ್ದು, ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕರು ಯಾವುದೇ ಅಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ. ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ತಾಲ್ಲೂಕು ಮಟ್ಟದಲ್ಲಿ 286 ಮತ್ತು ಜಿಲ್ಲಾಮಟ್ಟದಲ್ಲಿ 32 ಜಾಗೃತ ಸಮಿತಿಗಳನ್ನು ರಚಿಸಲಾಗಿದೆ. ಪರೀಕ್ಷಾ ವೇಳೆಯಲ್ಲಿ ಸುರಕ್ಷತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ 300 ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News