ರಾಜ್ಯ ಸರಕಾರಿ ನೌಕರರ ‘ವೇತನ ಪರಿಷ್ಕರಣೆ’ ಆದೇಶ

Update: 2018-03-01 11:52 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 1: ರಾಜ್ಯ ಸರಕಾರಿ ನೌಕರರಿಗೆ 6ನೆ ವೇತನ ಆಯೋಗದ ವರದಿ ಶಿಫಾರಸ್ಸಿನ ಅನ್ವಯ ವೇತನ ಪರಿಷ್ಕರಣೆ ಸಂಬಂಧ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

ವೇತನ ಪರಿಷ್ಕರಣೆ ಸಂಬಂಧ ಅಧಿಕೃತ ಆದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ. ಆರನೆ ವೇತನ ಆಯೋಗದ ಶಿಫಾರಸಿನನ್ವಯ ನೌಕರರ ವೇತನ ಶೇ.30ರಷ್ಟು ಹೆಚ್ಚಳವಾಗಲಿದೆ. ಶನಿವಾರ (ಮಾ.3) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಘಟನೋತ್ತರ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ರಾಜ್ಯ ಸರಕಾರಿ ನೌಕರರ ಮೂಲ ವೇತನಕ್ಕೆ ಶೇ.30ರಷ್ಟು ಫಿಟ್‌ಮೆಂಟ್ ಬೆನಿಫಿಟ್(ತಾರತಮ್ಯ ಸರಿದೂಗಿಸುವ ಮೊತ್ತ) ನೀಡಿ ವೇತನ ಪರಿಷ್ಕರಿಸಲಾಗಿದೆ. ಎಪ್ರಿಲ್ 1ರಿಂದ ನೌಕರರು ಪರಿಷ್ಕೃತ ವೇತನ ಪಡೆಯಲಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ತುಟ್ಟಿಭತ್ತೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಿ, ಕನಿಷ್ಠ ಮೂಲ ವೇತನವನ್ನು 17 ಸಾವಿರ ರೂ.ಗಳಿಗೆ ನಿಗದಿ ಮಾಡಲಾಗಿದೆ. ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯನ್ನು 4,800 ರೂ.ಗಳಿಗೆ ನಿಗದಿಪಡಿಸಲಾಗಿದೆ. ಚುನಾವಣೆ ಹೊಸ್ತಿಲಿನಲ್ಲಿ ಸರಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲು ಸರಕಾರ ನಿರ್ಧರಿಸಿದೆ.

25 ವೇತನ ಶ್ರೇಣಿ: ಮಾಸಿಕ ಕನಿಷ್ಠ ವೇತನ 17 ಸಾವಿರ ರೂ.ನಿಂದ ಗರಿಷ್ಠ ವೇತನ 1.50 ಲಕ್ಷ ರೂ.ವರೆಗೆ ಪರಿಷ್ಕೃತ ಒಟ್ಟು 25 ವೇತನ ಶ್ರೇಣಿಗಳಿವೆ. ಎಲ್ಲ ಶ್ರೇಣಿಗಳಿಗೂ ಅನ್ವಯವಾಗುವಂತೆ ನೌಕರರ ವೇತನ ಪರಿಷ್ಕರಣೆ 2017ರ ಜುಲೈ 1ರಿಂದ ಜಾರಿಗೆ ಬರಲಿದ್ದು, ವೇತನ ಪರಿಷ್ಕರಣೆಗೆ ಆರ್ಥಿಕ ಲಾಭಗಳು 2018ರ ಎಪ್ರಿಲ್ 1ರಿಂದ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News