ಬಿಜೆಪಿ-ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಲಿದ್ದಾರೆ ಮತದಾರರು : ಸಯ್ಯದ್ ಮೋಹಿದ್ ಅಲ್ತಾಫ್
ಶಿವಮೊಗ್ಗ, ಮಾ. 1: 'ರಾಜ್ಯದ ಹಿತಾಸಕ್ತಿ ಕಡೆಗಣಿಸಿ ಜಾತಿ, ಧರ್ಮ ಆಧಾರದ ಮೇಲೆ ರಾಜಕಾರಣ ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಜೆಡಿಎಸ್ ಪಕ್ಷದ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಮೋಹಿದ್ ಅಲ್ತಾಫ್ ತಿಳಿಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜೆಡಿಎಸ್ ಪಕ್ಷದ ಪರವಾಗಿ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಪ್ರಾಯ ರಾಜ್ಯದ ಜನತೆ ವ್ಯಕ್ತಪಡಿಸಲಾರಮಭಿಸಿದ್ದಾರೆ. ಈ ಕಾರಣದಿಂದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅತ್ಯದಿಕ ಸ್ಥಾನಗಳಲ್ಲಿ ಜಯ ಸಾಧಿಸಲಿದ್ದು, ಪೂರ್ಣ ಬಹುಮತದೊಂದಿಗೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಮತ್ತೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯವು ಜೆಡಿಎಸ್ ಬಗ್ಗೆ ವಿಶೇಷ ಒಲವು ವ್ಯಕ್ತಪಡಿಸುತ್ತಿದೆ. ಜೆಡಿಎಸ್‍ಗೆ ಮತ ಹಾಕಿದರೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್‍ಗೆ ಮತ ಹಾಕಿದರೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುವುದನ್ನು ಅಲ್ಪಸಂಖ್ಯಾತ ಸಮುದಾಯವು ಅರ್ಥ ಮಾಡಿಕೊಳ್ಳಬೇಕಾಗಿದೆ.
ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಯಾವುದೇ ವಿಶೇಷ ಕಾಳಜಿ ಹೊಂದಿಲ್ಲವಾಗಿದೆ. ಕೇವಲ ತನ್ನ ಓಟ್ ಬ್ಯಾಂಕ್ ಆಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿಯೇ ಸಾಚರ್ ಸಮಿತಿ ವರದಿ ಅನುಷ್ಠಾನಗೊಳಿಸಲು ಅವರಿಗೆ ಆಗಲಿಲ್ಲ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅತ್ಯದಿಕ ಸ್ಥಾನಗಳಲ್ಲಿ ಜಯ ಸಾಧಿಸಬೇಕೆಂಬ ಉದ್ಧೇಶ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಘಟಕವು ಕಳೆದ ಡಿಸೆಂಬರ್ ತಿಂಗಳಿನಿಂದ ರಾಜ್ಯಾದ್ಯಂತ 'ಮೈನಾರಿಟಿ ಎಕ್ಸ್ ಪ್ರೆಸ್' ಎಂಬ ಯಾತ್ರೆ ಆಯೋಜಿಸಿದೆ.
28 ಜಿಲ್ಲೆಗಳ 150 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ 14 ಜಿಲ್ಲೆಗಳಲ್ಲಿ ಯಾತ್ರೆ ಪೂರ್ಣಗೊಂಡಿದೆ. ಆದಷ್ಟು ಶೀಘ್ರವಾಗಿ ಉಳಿದ ಜಿಲ್ಲೆಗಳಲ್ಲಿಯೂ ಯಾತ್ರೆ ಸಂಚರಿಸಲಿದೆ. ಯಾತ್ರೆಗೆ ಎಲ್ಲೆಡೆಯೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಜೆಡಿಎಸ್ ಪಕ್ಷ ಪ್ರಥಮ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟಾರೆ 20 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ವರ್ಗದವರಿಗೆ ಟಿಕೆಟ್ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಗೊಂದಲವಿಲ್ಲ: ಶಿವಮೊಗ್ಗ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆಗೆ ತಾವು ಗೈರು ಹಾಜರಾಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲವಾಗಿದೆ. ನಗರದ ಫಾರೂಕಿಯಾ ಶಾದಿ ಮಹಲ್‍ನಲ್ಲಿ ಆಯೋಜಿತವಾಗಿದ್ದ ಸಭೆಯಲ್ಲಿ ತಾವು ಭಾಗವಹಿಸಿದ್ದೆ. ಕಚೇರಿಯಲ್ಲಿ ದಿಢೀರ್ ಆಗಿ ಆಯೋಜಿತವಾಗಿದ್ದ ಸಭೆಯ ಬಗ್ಗೆ ಮಾಹಿತಿಯಿರದ ಕಾರಣದ ಗೊಂದಲ ಉಂಟಾಗುವಂತಾಗಿತ್ತು. ಈ ಬಗ್ಗೆ ತಾವು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್ ಯೂಸೂಫ್ ಭಯ್ಯಾರವರ ಜೊತೆ ಚರ್ಚೆ ನಡೆಸಿದ್ದೆನೆ. ಯಾವುದೇ ಗೊಂದಲವಿಲ್ಲವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮಾಹಿತಿಯ ಕೊರತೆಯಿಂದ ಗೊಂದಲ
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಯೋಜಿತವಾಗಿದ್ದ ಕಾರ್ಯಕರ್ತರ ಸಭೆಗೆ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸಯ್ಯದ್ ಮೋಹಿದ್ ಅಲ್ತಾಫ್‍ರವರು ಗೈರು ಹಾಜರಾಗಲು ಮಾಹಿತಿ ಕೊರತೆಯೇ ಮುಖ್ಯ ಕಾರಣವಾಗಿದೆ. ದಿಢೀರ್ ಆಗಿ ಕಾರ್ಯಕ್ರಮ ಆಯೋಜಿತವಾಗಿದ್ದರಿಂದ ಈ ಗೊಂದಲ ಸೃಷ್ಟಿಯಾಗುವಂತಾಗಿದೆ. ಉಳಿದಂತೆ ಯಾವುದೇ ಸಮಸ್ಯೆಯಿಲ್ಲವಾಗಿದೆ. ಈಗಾಗಲೇ ತಾವು ಘಟಕದ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆನೆ. ನಗರದ ಫಾರೂಕಿಯಾ ಶಾದಿ ಮಹಲ್‍ನಲ್ಲಿ ಆಯೋಜಿತವಾಗಿದ್ದ ಸಭೆಯಲ್ಲಿಯೂ ಭಾಗವಹಿಸಿದ್ದೆನೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಶಿವಮೊಗ್ಗ ನಗರದಲ್ಲಿ ಬೃಹತ್ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆ ಆಯೋಜಿಸಲಾಗುವುದು' ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮಹಮ್ಮದ್ ಯೂಸೂಫ್ ಭಯ್ಯಾ ತಿಳಿಸಿದ್ದಾರೆ.