ರಾಜ್ಯದಲ್ಲಿ 1300 ಕೋಟಿ ರೂ. ವೆಚ್ಚದಲ್ಲಿ 217 ಸೇತುವೆಗಳ ನಿರ್ಮಾಣಕ್ಕೆ ಚಾಲನೆ : ಸಚಿವ ಮಹದೇವಪ್ಪ

Update: 2018-03-01 14:13 GMT

ಶಿವಮೊಗ್ಗ, ಮಾ. 1 : ರಾಜ್ಯ ಸರ್ಕಾರ ರಾಜ್ಯದಲ್ಲಿ ಒಟ್ಟು 1300 ಕೋಟಿ ರೂ. ವೆಚ್ಚದಲ್ಲಿ 217 ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ಈ ಎಲ್ಲಾ ಸೇತುವೆಗಳ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಅವರು ಗುರುವಾರ ಹೊಸನಗರ ತಾಲೂಕಿನ ಹಸಿರುಮಕ್ಕಿ ಗ್ರಾಮದ ಸಮೀಪ ಶರಾವತಿ ಹಿನ್ನೀರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕಾಗಿ ಟೆಂಡರ್ ಅಂತಿಮಗೊಳಿಸಲಾಗಿದ್ದು, ಮುಂದಿನ 30 ತಿಂಗಳ ಒಳಗಾಗಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸೇತುವೆ ನಿರ್ಮಾಣದಿಂದಾಗಿ ಈ ಭಾಗದ ಜನರ ಬಹುದಶಕಗಳ ಕನಸು ನನಸಾಗಲಿದ್ದು, ಹೊಸನಗರ ಮತ್ತು ಸಾಗರ ನಡುವೆ ನೇರ ಸಂಪರ್ಕ ಸಾಧ್ಯವಾಗಲಿದೆ. ಈ ಸೇತುವೆ ನಿರ್ಮಾಣದಿಂದಾಗಿ ಹೊಸನಗರ ಕುಂದಾಪುರ ದೂರ ಬಹಳ ಕಡಿಮೆಯಾಗಲಿದೆ. ಈ ಭಾಗದಲ್ಲಿ ಜನರ ಓಡಾಟಕ್ಕೆ ಮಾತ್ರವಲ್ಲದೆ ಪ್ರವಾಸೋದ್ಯಮಕ್ಕೂ ಇದರಿಂದ ಉತ್ತೇಜನ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.

ಅಕ್ರಮ ಮರಳು ಸಾಗಾಣಿಕೆ ಮೇಲೆ ನಿಯಂತ್ರಣ: ಅಕ್ರಮ ಮರಳು ಸಾಗಾಟ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗುತ್ತಿದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ ವೈಜ್ಞಾನಿಕ ಮರಳು ನೀತಿಯನ್ನು ಜಾರಿಗೊಳಿಸಲಾಗಿದೆ. ನದಿಪಾತ್ರಗಳಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ಮರಳುಗಾರಿಕೆಯನ್ನು ತಡೆಯಲಾಗಿದೆ. ನೆರೆಯ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಲಭ್ಯವಿದ್ದು, ಅದನ್ನು ರಾಜ್ಯಕ್ಕೆ ತಂದು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ .

ರಾಜ್ಯದಲ್ಲಿ ಸುಮಾರು 22ದಶಲಕ್ಷ ಟನ್ ಮರಳು ಅಗತ್ಯವಿದ್ದು, ಇದರಲ್ಲಿ 13-14 ದಶಲಕ್ಷ ಟನ್ ಎಂಸ್ಯಾಂಡ್ ಉತ್ಪಾದಿಸಲಾಗುತ್ತಿದೆ. ಇನ್ನುಳಿದಂತೆ 6-7 ದಶಲಕ್ಷ ಟನ್ ಮರಳು ನದಿಪಾತ್ರದಿಂದ ತೆಗೆಯಲಾಗುತ್ತಿದೆ. ಪ್ರಸ್ತುತ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಾಕಷ್ಟು ಸಮತೋಲನ ಸಾಧಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News