ಗದಗ : ಅಬ್ಬರದ ಬಿರುಗಾಳಿಗೆ ಇಬ್ಬರು ಬಲಿ

Update: 2018-03-01 15:02 GMT

ಗದಗ, ಮಾ. 1: ಮನೆಗೆ ಮೇಲ್ಚಾವಣಿ ಅಳವಡಿಸುತ್ತಿದ್ದ ವೇಳೆ ಹಠಾತ್ತನೆ ಬಿರುಗಾಳಿ ಬೀಸಿದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಮೇಲ್ಚಾವಣಿ ತಗಡಿನ ಸಮೇತ ಕೆಳಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಇಲ್ಲಿನ ರೋಣ ತಾಲೂಕಿ ಮೇಲ್ಮಠ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಸಾವನ್ನಪ್ಪಿದ ಕೂಲಿ ಕಾರ್ಮಿಕರನ್ನು ಅಸೂಟಿ ಗ್ರಾಮದ ಎಚ್ಚರಪ್ಪ ಬಾರಕೇರಿ (19) ಹಾಗೂ ಮಹದೇವಪ್ಪ ಕಮ್ಮಾರ (18) ಎಂದು ಗುರುತಿಸಲಾಗಿದೆ. ಗುರುವಾರ ಇಲ್ಲಿನ ಮೇಲ್ಮಠ ಗ್ರಾಮದ ಅಂದಪ್ಪ ಗೌಡ ಕನಕನಗೌಡರ ಅವರ ತೋಟದ ಮನೆಯಲ್ಲಿ ದನದ ಕೊಟ್ಟಿಗೆಗೆ ಮೇಲ್ಚಾವಣಿ ಅಳವಡಿಸುವ ಕಾರ್ಯದಲ್ಲಿ ಕೂಲಿ ಕಾರ್ಮಿಕರಿಬ್ಬರು ತೆರಳಿದ್ದರು.

ಈ ವೇಳೆ ಏಕಾಏಕಿ ಬಿರುಗಾಳಿ ಬೀಸಿದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಮೇಲ್ಚಾವಣಿಯ ತಗಡಿನ ಸಮೇತ ಕೆಳಗೆ ಬಿದ್ದಿದ್ದಾರೆ. ಇದರಿಂದ ಇಬ್ಬರ ತಲೆಗೆ ತೀವ್ರ ಸ್ವರೂಪದ ಪೆಟ್ಟು ತಗುಲಿದ್ದ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲೆ ಅಸುನೀಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರೋಣ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಈ ಸಂಬಂಧ ರೋಣ ಗ್ರಾಮಾಂತರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News