×
Ad

ರೈತ ಚಳುವಳಿಯಲ್ಲಿ ಗಟ್ಟಿಯಾಗಿ ನಿಂತವರು ಕೆ.ಎಸ್.ಪುಟ್ಟಣ್ಣಯ್ಯ : ಚುಕ್ಕಿ ನಂಜುಂಡಸ್ವಾಮಿ

Update: 2018-03-01 21:55 IST

ಮೈಸೂರು,ಮಾ.1: ಸಂಘಟನೆಯಲ್ಲಿ ಬಿರುಕು ಬಂದರೂ, ಮನಸ್ಸುಗಳು ಒಡೆದರು  ರೈತ ಚಳುವಳಿಯಲ್ಲಿ ಗಟ್ಟಿಯಾಗಿ ನಿಂತವರು ಕೆ.ಎಸ್.ಪುಟ್ಟಣ್ಣಯ್ಯ ಎಂದು  ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಸ್ಮರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ ಸಂಘಟನೆಗಳು ಇನ್ನಿತರ ಸಂಘ ಸಂಸ್ಥೆಗಳ ಜತೆಗೂಡಿ ಪುರಭವನದಲ್ಲಿ ಗುರುವಾರ  ರೈತ ನಾಯಕ ಕೆ.ಎಸ್.ಪುಟ್ಟಣ್ಣಯ ಅವರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ಪುಟ್ಟಣ್ಣಯ್ಯ ಅವರ ಅಗಲಿಕೆಯಿಂದ ಶೂನ್ಯ ಆವರಿಸಿಕೊಂಡಿದೆ. ರೈತ ಸಂಘದ ಮೆದುಳು ಪ್ರೊ.ನಂಜುಂಡಸ್ವಾಮಿ, ಹೃದಯ ಸುಂದರೇಶನ್. ಇವರೆಡರ ಸಮ್ಮಿಲನವಾಗಿ ಪುಟ್ಟಣ್ಣಯ್ಯ ಇದ್ದರು. ಅನುಭವದಿಂದ ಹುಟ್ಟಿದ ಬುದ್ಧಿಜೀವಿ ಪುಟ್ಟಣ್ಣಯ್ಯ. ಅವರು ಇರಲೇಬೇಕಾದ ಕನಿಷ್ಠ ಮಾನವೀಯ ಮೌಲ್ಯಗಳನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದರು. ಅವುಗಳನ್ನು ನಾವು ಕಲಿತು ಮುನ್ನೇಡಸಬೇಕಿದೆ. ಮೂಲೆಗುಂಪಾದ ವಿಚಾರಗಳ ಮೇಲೆ ಗಮನಸೆಳೆಯುತ್ತಿದ್ದರು ಎಂದು ಹೇಳಿದರು. 

ಹಿರಿಯ ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ಜಾತೀಯತೆ ಮೀತಿ ಮೀರಿರುವಾಗ ಕೋಮುವಾದ ಎಲ್ಲರ ಮನೆ ಬಾಗಿಲಿಗೆ ಬಂದಿರುವಾಗ ಪುಟ್ಟಣ್ಣಯ್ಯ ಅವಶ್ಯಕತೆ ಇತ್ತು. ಕೋಮುವಾದದ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದರು. 

ಹಿಂದೆ ರೈತ ಸಂಘ ಮತ್ತು ದಸಂಸ ಒಂದಾಗಲು ಮುಂದಾದಾಗ ರಾಜ್ಯದ ಹಣೆಬರಹ ಬದಲಾಗುತ್ತೆ ಎಂದು ನಿರೀಕ್ಷಿಸಿದ್ದೆ. ಆ ಶಕ್ತಿ ಎರಡೂ ಸಂಘಟನೆಗಳಿತ್ತು. ರೈತರು ದಲಿತರು ಒಟ್ಟಾಗಿ ಕೆಲಸ ಮಾಡಲು ಪುಟ್ಟಣ್ಣಯ್ಯ ತಯಾರಾಗಿದ್ದರು. ಆದರೆ, ಎರಡು ಸಂಘಟನೆಗಳು ಒಂದಾಗಿ ಸಾಗಲಿಲ್ಲ. ಈಗಾಲಾದರೂ ಎರಡು ಸಂಘಟನೆಗಳು ಒಂದಾಗಿ ಸಾಗಬೇಕಿದೆ ಎಂದು ತಿಳಿಸಿದರು. 

ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಟ್ಟಣ್ಣಯ್ಯ ಪ್ರಬುದ್ಧ ಹೋರಾಟಗಾರ. ಆಡು ಭಾಷೆಯಲ್ಲಿಯೇ ಜನರ ಹೃದಯ ಮುಟ್ಟುವ ಮಾತುಗಾರ. ಇತರರ ಕಷ್ಟ ನನ್ನದು. ಆ ಕಷ್ಟವ ಪರಿಹರಿಸುವುದು ಕರ್ತವ್ಯವೆಂದು ನಂಬಿ ಬದುಕಿದ್ದರು. 

ಯುವಕರು ಯಾಕೆ ಹೋರಾಟಕ್ಕೆ ಬರುತ್ತಿಲ್ಲ ಕಾರಣ ಏನು? ಹೋರಾಟದಲ್ಲಿ ಸತ್ವಯಿದೆ ಎಂದು ಅವರೇಕೆ ತಿಳಿದುಕೊಂಡಿಲ್ಲ? ಎಂಬುದರ ನಾವು ಚಿಂತಿಸಬೇಕು. ಬಲಿಷ್ಠ ಸಂಘಟನೆ ಕಟ್ಟಲು ಬದ್ಧರಾಗಬೇಕು. ಬದ್ಧತೆಯಿಂದ ಕೆಲಸ ಮಾಡಿದರೆ ಯಾವುದೂ ದೊಡ್ಡದಲ್ಲ. ಎಲ್ಲ ಸಂಘಟನೆಗಳು ಒಂದಾಗಿ ಜನಪರವಾದ ವಿಚಾರಗಳನ್ನು ತೆಗೆದುಕೊಂಡು ಮುನ್ನೆಡೆಯಬೇಕಿದೆ ಎಂದು ತಿಳಿಸಿದರು. 

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶಾಲವಾದ ದೃಷ್ಟಿಯ ಪುಟ್ಟಣ್ಣಯ್ಯ, ದುಡಿಯುವ ವರ್ಗಗಳ ಜನರ ಮೇಲೆ ಪ್ರಭಾವ ಬೀರಿದ್ದರು. ಪುಟ್ಟಣ್ಣಯ್ಯ ಅವರ ಅಗಲಿಕೆಗೆ ನಾಡು ಕಂಬನಿ ಮಿಡಿದಿದೆ. ಸಾಗರೋಪಾದಿಯಲ್ಲಿ ಜನ ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ನುಡಿದಂತೆ ನಡೆದ ಅವರು  ಹಳ್ಳಿಗಾಡಿನ ನಾಯಕ ಎಂದರು. 

ಕಾವೇರಿ ಚಳವಳಿ ವೇಳೆ ಎಸ್.ಎಂ.ಕೃಷ್ಣ ಮತ್ತು ಕಾಂಗ್ರೆಸ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು ಎಂದು ಕೆಲವರು ಆರೋಪ ಮಾಡಿದರು. ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಇದು ಸುಳ್ಳು ಎಂಬುದು ತಿಳಿದಿತ್ತು. ಆದರೆ, ಕಾಂಗ್ರೆಸ್‍ನೊಂದಿಗೆ ಮೃದು ಧೋರಣೆ ಹೊಂದಿರುವುದು ನಿಜ. ಅದು ಕೋಮುವಾದಿ ಹಿಮ್ಮೆಟ್ಟಿಸಲು, ಸಂವಿಧಾನ ತಿರುಚುತ್ತೇವೆಂದು ಹೇಳುವವರ ವಿರೋಧಿಸುವ ಕಾರಣಗಳಿಗೆ ಕಾಂಗ್ರೆಸ್‍ನೊಂದಿಗೆ ಮೃಧು ಧೋರಣೆ ಹೊಂದಿದ್ದೇವೆ ಎಂದರು. 

ಮೈಸೂರು ವಿವಿ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ವಿಶ್ರಾಂತ ನಿರ್ದೇಶಕ ಡಾ.ಸಿ.ಕೃಷ್ಣ, ಪ್ರೊ.ಕೆ.ಎಸ್.ಭಗವಾನ್, ಹರವು ದೇವೇಗೌಡ, ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್, ಎಸ್‍ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯ ಎಂ.ಶಶಿಧರ, ರೈತ ಸಂಘದ ಎಂ.ಎಸ್.ಅಶ್ವಥನಾರಾಯಣರಾಜೇ ಅರಸ್, ದಂಸದ ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ಸ್ವರಾಜ್ ಇಂಡಿಯಾದ ಎಚ್.ಎ.ನಂಜುಂಡಸ್ವಾಮಿ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಸವರಾಜು, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಷಾದ್ರಿ, ಪ್ರೊ.ಶಬೀರ್ ಮುಸ್ತಾಫ, ಒಡನಾಡಿ ಸ್ಟ್ಯಾನ್ಲಿ, ಸರಗೂರು ನಟರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಡಿ.ಹೊಸಳ್ಳಿ ಶಿವು ಮಾತನಾಡಿದರು. ಸ್ವರಾಜ್ ಇಂಡಿಯಾದ ಅಭಿರುಚಿ ಗಣೇಶ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News