ಶಿವಮೊಗ್ಗ : 33 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ
ಶಿವಮೊಗ್ಗ, ಮಾ. 1: ಶಿವಮೊಗ್ಗ ಜಿಲ್ಲೆಯ 33 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಪರೀಕ್ಷಾ ನಕಲು, ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಕೇಂದ್ರಗಳಲ್ಲಿ ಸಿ. ಸಿ. ಕ್ಯಾಮರಾ ಅಳವಡಿಕೆ ಹಾಗೂ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಪರೀಕ್ಷಾ ಕೇಂದ್ರದ ನಿರ್ದಿಷ್ಟ ಪ್ರದೇಶದವರಿಗೆ ನಿಷೇಧಾಜ್ಞೆ ವಿಧಿಸಲಾಗಿತ್ತು.
ಈ ಬಾರಿ ಶಿವಮೊಗ್ಗ ತಾಲೂಕಿನಲ್ಲಿ ಹೆಚ್ಚುವರಿಯಾಗಿ ಒಂದು ಪರೀಕ್ಷಾ ಕೇಂದ್ರವನ್ನು ಆರಂಭಿಸಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿಲ ಈ ಬಾರಿ ಒಟ್ಟು 19,187 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ 8376 ಬಾಲಕ ಹಾಗೂ 10,811 ಬಾಲಕಿಯರಾಗಿದ್ದಾರೆ.
ಇದರಲ್ಲಿ ಹೊಸದಾಗಿ 15,730 ವಿದ್ಯಾರ್ಥಿಗಳು, 2372 ಪುನರಾವರ್ತಿತ ಹಾಗೂ 1085 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಳ್ಳುವವರಾಗಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಮೂಲಗಳು ಮಾಹಿತಿ ನೀಡಿವೆ.
ಪ್ರಶ್ನೆ ಪತ್ರಿಕೆ ಸಾಗಾಣೆಯಿಂದಿಡಿದು ಪರೀಕ್ಷೆ ಆಯೋಜನೆವರೆಗೆ ಭದ್ರತೆಯಲ್ಲಿ ಯಾವುದೇ ಲೋಪ ಉಂಟಾಗಬಾರದು ಎಂಬ ಉದ್ದೇಶದಿಂದ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ತೆಗೆಯುವುದು ಸೇರಿದಂತೆ ಪ್ರತಿಯೊಂದು ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಕೊಂಡೊಯ್ಯುವ ವಾಹನಕ್ಕೂ ಜಿಪಿಎಸ್ ಅಳವಡಿಕೆ ಮಾಡಲಾಗಿದ್ದು, ತಹಶೀಲ್ದಾರ್ ನೇತೃತ್ವದ ತಂಡ ಪ್ರಶ್ನೆ ಪತ್ರಿಕೆ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಗಿದೆ.
ಡಿ.ಸಿ. ಭೇಟಿ: ಗುರುವಾರ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‍ರವರು ಶಿವಮೊಗ್ಗ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರದಲ್ಲಿರುವ ಭದ್ರತಾ ವ್ಯವಸ್ಥೆ, ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.