×
Ad

ಹಿರಿಯ ವಕೀಲ ಕೇಶವಮೂರ್ತಿ ಪುತ್ರ ಅಮಿತ್ ಶೂಟ್‌ಔಟ್ ಪ್ರಕರಣ : ಎಸ್‌ಪಿಪಿ ಬದಲಿಸಲು ನಿರಾಕರಿಸಿದ ಹೈಕೋರ್ಟ್

Update: 2018-03-01 22:29 IST

ಬೆಂಗಳೂರು, ಮಾ.1: ನಗರದ ಹೊರವಲಯದಲ್ಲಿ 2017ರ ಜನವರಿಯಲ್ಲಿ ನಡೆದಿದ್ದ ವಕೀಲ ಅಮಿತ್ ಕೇಶವಮೂರ್ತಿ ಶೂಟ್‌ಔಟ್ ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿರುವ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರನ್ನು ಬದಲಿಸುವಂತೆ ಕೋರಿ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣದ ವಿಚಾರಣೆಗೆ ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಸಿ.ಎಚ್.ಹನುಂತರಾಯ ಅವರನ್ನು ನೇಮಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ, ಪ್ರಕರಣದ ಆರೋಪಿಗಳಾದ ರಾಜೇಶ್ ಹಾಗೂ ಗೋಪಾಲಕೃಷ್ಣ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಪೀಠದಲ್ಲಿ ಗುರುವಾರ ನಡೆಯಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಎಸ್‌ಪಿಪಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿ ಹೊಂದಿದ್ದು, ಅವರಿಂದ ನಿಷ್ಪಕ್ಷಪಾತ ವಾದ ಮಂಡನೆ ಸಾಧ್ಯವಿಲ್ಲ. ಹೀಗಾಗಿ ಎಸ್‌ಪಿಪಿ ಬದಲಿಸಲು ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಎಸ್‌ಪಿಪಿ ನೇಮಿಸಿ ಸರಕಾರ ಹೊರಡಿಸಿರುವ ಆದೇಶಗಳನ್ನು ಪ್ರಶ್ನಿಸಲು ನಿಮಗೆ ಅಧಿಕಾರವಿಲ್ಲ. ಯಾವ ವಕೀಲರು ವಿಚಾರಣೆಗೆ ಹಾಜರಾಗಬೇಕು. ಯಾವ ನ್ಯಾಯಮೂರ್ತಿಗಳ ಮುಂದೆ ವಿಚಾರಣೆ ನಡೆಯಬೇಕು ಎಂಬುದನ್ನು ನಿರ್ಧರಿಸಲು ನಿಮಗೇನು ಅರ್ಹತೆಯಿದೆ ಎಂದು ಆರೋಪಿಗಳ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಮೇಲಾಗಿ ಇದೊಂದು ಕೊಲೆ ಪ್ರಕರಣವಾಗಿದ್ದು, ಆರೋಪಿಗಳೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎಸ್‌ಪಿಪಿ ಬದಲಾವಣೆಗೆ ಕೋರುವುದು ಎಂದರೆ ಏನರ್ಥ. ಇಂಥ ಅರ್ಜಿಗಳು ನ್ಯಾಯಾಂಗ ವ್ಯವಸ್ಥೆಗೇ ಮಾರಕವಾಗಿದ್ದು, ಅವುಗಳನ್ನು ಪರಿಗಣಿಸುವುದು ಅಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿಗಳನ್ನು ವಜಾಗೊಳಿಸಿತು.

ಪ್ರಕರಣವೇನು: ನೆಲಮಂಗಲ ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಕೇಶವಮೂರ್ತಿ ಅವರ ಪುತ್ರನಾಗಿದ್ದ ಅಮಿತ್ ಮತ್ತು ರೈಲ್ವೇ ಗೊಲ್ಲಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಶೃತಿಗೌಡ ನಡುವೆ ಸ್ನೇಹ ಬೆಳೆದಿತ್ತು. ಈಗಾಗಲೇ ರಾಜೇಶ್ ಎಂಬವರೊಂದಿಗೆ ಶೃತಿ ಮದುವೆಯಾಗಿತ್ತು. 2017ರ ಜ.13ರಂದು ಶೃತಿ ತಮ್ಮ ಸ್ನೇಹಿತೆಯನ್ನು ಭೇಟಿಯಾಗುವುದಾಗಿ ತಿಳಿಸಿ ಕಾರ್‌ನಲ್ಲಿ ತೆರಳಿದ್ದರು.

ಅನುಮಾನಗೊಂಡ ಪತಿ ರಾಜೇಶ್ ಮತ್ತು ತಂದೆ ಗೋಪಾಲಗೌಡ ಮತ್ತೊಂದು ಕಾರಿನಲ್ಲಿ ಶೃತಿ ಅವರನ್ನು ಹಿಂಬಾಲಿಸಿದ್ದರು. ಹೆಸರುಘಟ್ಟ ಸಮೀಪದ ಆಚಾರ್ಯ ಕಾಲೇಜು ಸಮೀಪಕ್ಕೆ ತೆರಳಿದ ಶೃತಿ, ಅಮಿತ್ ಜೊತೆ ಒಟ್ಟಾಗಿ ಕಾರಿನಲ್ಲಿ ಕುಳಿತಿದ್ದರು. ಇದರಿಂದ ಕೋಪಗೊಂಡ ರಾಜೇಶ್ ತಮ್ಮ ರಿವಾಲ್ವರ್‌ನಿಂದ ಅಮಿತ್ ಎದೆಗೆ ಗುಂಡು ಹಾರಿಸಿದ್ದರು.

ಅಮಿತ್‌ನನ್ನು ತಕ್ಷಣ ತುಮಕೂರು ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದ ಶೃತಿ, ಸಮೀಪದ ನೇಸರ ಲಾಡ್ಜ್‌ನ ರೂಂ ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅತ್ತ ಅಮಿತ್ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದ್ದರು. ರಾಜೇಶ್ ಹಾಗೂ ಗೋಪಾಲಕೃಷ್ಣರನ್ನು ಬಂಧಿಸಿದ್ದ ಸೋಲದೇವನಹಳ್ಳಿ ಪೊಲೀಸರು ತನಿಖೆ ನಡೆಸಿದ್ದರು. ಪ್ರಕರಣದ ವಿಚಾರಣೆಗಾಗಿ 2017ರ ಫೆ.3ರಂದು ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರನ್ನು ಸರಕಾರ ಎಸ್‌ಪಿಪಿಯನ್ನಾಗಿ ನೇಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News