ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ

Update: 2018-03-02 12:15 GMT

ಗೋಣಿಕೊಪ್ಪಲು,ಮಾ.02: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್  ಕಾರ್ಯಕರ್ತರ ಹೊಣೆಯಾಗಿದ್ದು, ಇದನ್ನು ಅರಿತು ಪ್ರತಿಯೊಬ್ಬರು ಬಿಡುವಿಲ್ಲದೆ ಪಕ್ಷಕ್ಕಾಗಿ ಕೆಲಸ ಮಾಡಬೇಕೆಂದು ವಿರಾಜಪೇಟೆ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿರುವ ಪ್ರದೀಪ್ ಹೇಳಿದರು.

ಪೊನ್ನಂಪೇಟೆ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಬ್ಲಾಕ್ ಹಾಗೂ ಬೂತ್ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕಾರ್ಯಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಪಕ್ಷದ ಸಂಘಟನೆ ಮತ್ತಷ್ಟು ಸದೃಡವಾಗಿ ಬೆಳೆಯಲಿದೆ. ಕಾರ್ಯಕರ್ತರೇ ಪಕ್ಷದ ಅಸ್ತಿ ಎಂಬುವುದನ್ನು ಅರಿತು ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಪೂರಕ ಬೆಂಬಲವನ್ನು ಎಲ್ಲರು ನೀಡಬೇಕು. ಈಗಾಗಲೇ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇದರಿಂದ ಸರ್ಕಾರದ ಸಾಧನೆಯನ್ನು ಜನರ ಮನೆ ಬಾಗಿಲಗೆ ತಲುಪಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಇದೇ ರೀತಿ ಪಕ್ಷದ ಜನಪರ ಭಾಗ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮೂಲಕ ಮತದಾರರನ್ನು ಸೆಳೆಯಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆ ಪ್ರಾರಂಭಗೊಂಡಿರುವುದು ಸತ್ಯವಾಗಿದ್ದು, ಈ ನಿಟ್ಟಿನಲ್ಲಿ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಈ ಜವಾಬ್ದಾರಿಯನ್ನು ಪ್ರತಿಯೊಬ್ಬ ಕಾರ್ಯಕರ್ತ ಹೊತ್ತುಕೊಳ್ಳಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಚುನಾವಣಾ ಪೂರ್ವ ಪ್ರಚಾರ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಸರ್ಕಾರದ ಜನಪರ ಕಾರ್ಯಗಳನ್ನು ಮತದಾರರ ಬಳಿ ಮುಟ್ಟಿಸಬೇಕು. ಜಿಲ್ಲೆಯ ಅಭಿವೃದ್ದಿಗೊಳ್ಳಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

ಪಕ್ಷದ ಮುಖಂಡ ಉಮೇಶ್ ಕೇಮಚಮ್ಮಯ್ಯ ಮಾತನಾಡಿ, ಪಕ್ಷದ ಸೋಲಿಗೆ ಅಭ್ಯರ್ಥಿ ಘೋಷಣೆ ತಡವಾಗುವುದೇ ಕಾರಣ. ರಾಜ್ಯ ಹಾಗೂ ಜಿಲ್ಲಾ ನಾಯಕರು ಈ ಪ್ರಕ್ರಿಯೆಯನ್ನು ಬೇಗ ಮಾಡಿದರೆ ಜಿಲ್ಲೆಯಲ್ಲಿ ನಮಗೆ ಗೆಲುವು ನಿಶ್ಚಿತ ಎಂದರು.

ಮುಖಂಡ ಕೊಲ್ಲೀರ ಬೋಪಣ್ಣ ಮಾತನಾಡಿ, ಕ್ಷೇತ್ರದಲ್ಲಿ ನಾಯಕತ್ವ ಕೊರತೆ ಇದ್ದು, ಈ ಬಾರಿ ಸೂಕ್ತವಾಗಿ ಜವಾಬ್ದಾರಿ ನಿರ್ವಹಣೆ ಮಾಡದಿದ್ದಲ್ಲಿ ಅಂತವರನ್ನು ಹುದ್ದೆಯಿಂದ ತೆಗೆದು ಹಾಕಬೇಕು. ಇದರಿಂದ ಪಕ್ಷದ ನಾಯಕತ್ವದ ಬಗ್ಗೆ ಹೆಚ್ಚಿನ ಜವಾಬ್ದಾರಿ ಬರುತ್ತದೆ ಎಂದರು.

ಸಭೆಯಲ್ಲಿ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ವಿರಾಜಪೇಟೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಮತ್ರಂಡ ದಿಲ್ಲು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಹಿಂದುಳಿದ ವರ್ಗಗಳ ಅಧ್ಯಕ್ಷ ಶಾಜಿ ಅಚ್ಚುತ್ತನ್, ಮಹಿಳಾ ಘಟಕದ ಅಧ್ಯಕ್ಷೆ ಕಡೇಮಾಡ ಕುಸುಮಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿನಯ್, ಕಿಸಾನ್ ಘಟಕದ ಅಧ್ಯಕ್ಷ ಚೇರಂಡ ಮೋಹನ್, ಜಿ.ಪಂ ಸದಸ್ಯೆ ಶ್ರೀಜಾ, ತಾ.ಪಂ ಸದಸ್ಯೆ ಆಶಾ ಪೂಣಚ್ಚ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News