ಮಡಿಕೇರಿ:‘ಸಿಂಗಲ್ ಲೇ ಔಟ್ ಭೂ ಪರಿವರ್ತನೆ’ ಕಡ್ಡಾಯ ಕ್ರಮ ಖಂಡಿಸಿ ಜೆಡಿಎಸ್ ಪ್ರತಿಭಟನೆ

Update: 2018-03-02 12:19 GMT

ಮಡಿಕೇರಿ, ಮಾ.2: ನಗರ ವ್ಯಾಪ್ತಿಯಲ್ಲಿ ‘ಸಿಂಗಲ್ ಲೇ ಔಟ್ ಭೂ ಪರಿವರ್ತನೆ’ ಕಡ್ಡಾಯ ಗೊಳಿಸಿರುವ ಕ್ರಮವನ್ನು ಮತ್ತು ನಗರಸಭೆಯ ಆಡಳಿತ ವೈಖರಿಯನ್ನು ಖಂಡಿಸಿ  ಜಾತ್ಯತೀತ ಜನತಾ ದಳ ನಗರದಲ್ಲಿ ಪ್ರತಿಭಟನೆ ನಡೆಸಿತು.

ಮಡಿಕೇರಿ ನಗರ ಜೆಡಿಎಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಅವರ ನೇತೃತ್ವದಲ್ಲಿ  ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಘೋಷಣೆಗಳ ಸಹಿತ ನಗರದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ, ಪಕ್ಷದ ಪ್ರಮುಖರಾದ ಬಿ.ಎ. ಜೀವಿಜಯ ಅವರ ಉಪಸ್ಥಿತಿಯಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಕ್ಷದ ಪ್ರಮುಖರಾದ ಬಿ.ಎ.ಜೀವಿಜಯ ಮಾತನಾಡಿ, ಸರ್ಕಾರ ಅವೈಜ್ಞಾನಿಕವಾದ ಸಿಂಗಲ್ ಲೇಔಟ್ ಭೂ ಪರಿವರ್ತನೆ ಸುತ್ತೋಲೆಯನ್ನು ಹೊರಡಿಸಿರುವುದು ನಗರ ಪ್ರದೇಶದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದೇ ರೀತಿ ಗ್ರಾಮೀಣ ಭಾಗಗಳಲ್ಲಿ ರೈತಾಪಿ ವರ್ಗ ಮನೆ ನಿರ್ಮಿಸಲು ಭೂ ಪರಿವರ್ತನೆಯನ್ನು ಕಡ್ಡಾಯಗೊಳಿಸಿದೆ. ಇಂತಹ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆನ್ನುವ ಉದ್ದೇಶದಿಂದ, ಸರಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ಸಕಾರಾತ್ಮಕವಾಗಿ ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವುದು ನಿಶ್ಚಿತ, ಆ ಸಂದರ್ಭ ಇಂತಹ ಜನವಿರೋಧಿ ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಜಿಲ್ಲೆಯ ಶಾಸಕರು ಜನಪರವಾಗಿ ಕಾರ್ಯನಿರ್ವಹಿಸದೆ ನಿಷ್ಕ್ರೀಯರಾಗಿದ್ದರೆ, ಮತ್ತೊಂದೆಡೆ ಜನವಿರೋಧಿ ನಿಲುವುಗಳಿಂದ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯ ಮೇಲೆ ಗದಾಪ್ರಹಾರ ಮಾಡುತ್ತಿದೆಯೆಂದು ಆರೋಪಿಸಿದರು. ಜನವಿರೋಧಿಯಾದ ಭೂ ಪರಿವರ್ತನೆ ಸುತ್ತೋಲೆಯನ್ನು ಶೀಘ್ರ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಯುಜಿಡಿ ಕಾಮಗಾರಿಯಿಂದಾಗಿ ನಗರದ ರಸ್ತೆಗಳಲ್ಲಿ ನಡೆಯಲು ಅಸಾಧ್ಯವಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಇತ್ತೀಚಿನ ದಿನಗಳಲ್ಲಿ ಎದುರಾಗಿದೆ. ನಗರಸಭಾ ಅಧ್ಯಕ್ಷರು ತಮ್ಮ ಕುರ್ಚಿ ಬಿಟ್ಟು ಹೊರ ಬಂದು ಜನರ, ನಗರಸಭಾ ಸದಸ್ಯರ ಅಹವಾಲುಗಳನ್ನು ಆಲಿಸುವ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲವೆಂದು ಆರೋಪಿಸಿದರು. ನಗರಸಭೆಯಲ್ಲಿ ಶ್ರೀಸಾಮಾನ್ಯರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಸಿಂಗಲ್ ಲೇ ಔಟ್ ಭೂ ಪರಿವರ್ತನೆಯ ಸುತ್ತೋಲೆಯನ್ನು ವಿರೋಧಿಸಿದರು.

ನಗರದ ಜೆಡಿಎಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಿಂದೆ ರೈತಾಪಿ ವರ್ಗ ತನ್ನ ಅನುಕೂಲಕ್ಕಾಗಿ 10 ಸೆಂಟ್ ಮಿತಿಯ ಜಾಗವನ್ನು ಕಟ್ಟಡ ನಿರ್ಮಾಣಕ್ಕೆ ಬಳಸುವ ಅವಕಾಶವಿತ್ತು. ಆದರೆ, ಇತ್ತೀಚೆಗೆ ಭೂ ಪರಿವರ್ತನೆಯನ್ನು ಕಡ್ಡಾಯ ಗೊಳಿಸಿ ರಾಜ್ಯ ಸರ್ಕಾರ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ವ್ಯವಸ್ಥೆ ಇದೇ ರೀತಿ ಮುಂದುವರಿದಲ್ಲಿ ಜನರೇ ಕಾನೂನು ಕೈಗೆತ್ತಿಕೊಳ್ಳುವ ಅಪಾಯವಿದೆಯೆಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಎಸ್.ಎನ್.ರಾಜಾರಾವ್, ಇಸಾಕ್ ಖಾನ್, ಮನ್ಸೂರ್ ಆಲಿ, ಸಿ.ಎಲ್. ವಿಶ್ವ, ಜಷೀರ್, ಅಶ್ರಫ್, ಲೀಲಾ ಶೇಷಮ್ಮ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News