ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಫೈಟ್: ಕೊನೆಗೂ ತಾರ್ಕಿಕ ಅಂತ್ಯ
ಶಿವಮೊಗ್ಗ,ಮಾ.2: ಮುಂದಿನ ವಿಧಾನಸಭೆ ಚುನಾವಣೆರಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಬಣಗಳ ನಡುವೆ ನಡೆಯುತ್ತಿರುವ 'ಟಿಕೆಟ್ ಫೈಟ್' ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಸಿಗುವ ಸಾಧ್ಯತೆ ಬಹುತೇಕ ಖಚಿತವಾಗುತ್ತಿದೆ. ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು ಇತ್ತೀಚೆಗೆ ಕೆ.ಎಸ್ಈ ಗೆ ಶಿವಮೊಗ್ಗ ನಗರದಿಂದ ಟಿಕೆಟ್ ನೀಡುವ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. ಇದು ಬಿ.ಎಸ್.ವೈ. ಬಣದಲ್ಲಿ ತಳಮಳ ಸೃಷ್ಟಿಯಾಗುವಂತೆ ಮಾಡಿದ್ದರೆ, ಈಶ್ವರಪ್ಪ ಪಾಳೇಯದಲ್ಲಿ ಸಂತಸಕ್ಕೆ ಎಡೆ ಮಾಡಿಕೊಟ್ಟಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರರಾವ್ ಸೇರಿದಂತೆ ಇತರೆ ರಾಷ್ಟ್ರೀಯ ನಾಯಕರು ಈಶ್ವರಪ್ಪ ಜೊತೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ್ದಾರೆ. 'ಶಿವಮೊಗ್ಗದಿಂದ ನೀವು ಸ್ಪರ್ಧಿಸುವುದು ಖಚಿತ. ಸಕಲ ಸಿದ್ದತೆ ಮಾಡಿಕೊಳ್ಳಿ' ಎಂದು ಈಶ್ವರಪ್ಪಗೆ ಸ್ಪಷ್ಟ ಸೂಚನೆ ರವಾನಿಸಿದ್ದಾರೆ ಎಂದು ಈಶ್ವರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ಹೆಸರು ಬಹಿರಂಗಪಡಿಸಲಿಚ್ಚಿಸದ ಹಿರಿಯ ನಾಯಕರೋರ್ವರು ತಿಳಿಸಿದ್ದಾರೆ.
ತೀವ್ರ ಪೈಪೋಟಿ: ಕಳೆದ ಎರಡು ವರ್ಷಗಳ ಹಿಂದಿನಿಂದಲೂ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆಂಬ ಚರ್ಚೆ ನಡೆಯಲಾರಂಭಿಸಿತ್ತು. ಕಳೆದ ಮೂರುವರೆ ದಶಕಗಳಿಂದ ಕ್ಷೇತ್ರ ಪ್ರತಿನಿಧಿಸಿಕೊಂಡು ಬರುತ್ತಿರುವ ಕೆ.ಎಸ್.ಈಶ್ವರಪ್ಪ ಸ್ಪರ್ಧಿಸುತ್ತಾರಾ? ಇಲ್ಲವೇ ಬಿ.ಎಸ್.ವೈ. ಬಣದಲ್ಲಿ ಗುರುತಿಸಿಕೊಂಡಿರುವ ಪಕ್ಷದ ಜಿಲ್ಲಾಧ್ಯಕ್ಷರೂ ಆದ ರುದ್ರೇಗೌಡ ಕಣಕ್ಕಿಳಿಯುತ್ತಾರಾ? ಎಂಬ ಚರ್ಚೆಗಳು ಬಿರುಸುಗೊಂಡಿದ್ದವು.
ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ಮಾಡಿದ ವೇಳೆಯಂತೂ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯ ಚರ್ಚೆಯ ಮುನ್ನಲೆಗೆ ಬಂದಿತ್ತು. ಬಿ.ಎಸ್.ವೈ- ಕೆ.ಎಸ್.ಈ ಬಣಗಳ ನಡುವಿನ ಕಲಹ ತಾರಕಕ್ಕೇರುವಂತೆ ಮಾಡಿತ್ತು. ಬ್ರಿಗೇಡ್ ಚಟುವಟಿಕೆಯಿಂದ ಕೆ.ಎಸ್.ಈ ಹೊರಬಂದ ನಂತರ ಈ ವಿಷಯದ ಚರ್ಚೆಯು ಮರೆಯಾಗಿತ್ತು. ಆದರೆ ಎರಡೂ ಬಣಗಳು ಟಿಕೆಟ್‍ಗೆ ಒಳಗೊಳಗೆ ಪೈಪೋಟಿ ನಡೆಸುತ್ತಿದ್ದವು. ಭರಪೂರ ಚುನಾವಣಾ ಸಿದ್ದತೆಯಲ್ಲಿ ತೊಡಗಿದ್ದವು. ಅದರಲ್ಲಿಯೂ ಈಶ್ವರಪ್ಪರವರು ಕ್ಷೇತ್ರದಾದ್ಯಂತ ಸಂಚಾರ ನಡೆಸುತ್ತಿದ್ದರು. ಕಾರ್ಯಕರ್ತರು, ಪ್ರಮುಖ ನಾಗರೀಕರ ಮನೆ ಮನೆಗೆ ಭೇಟಿಯಿತ್ತು ಸಮಾಲೋಚನೆ ನಡೆಸುತ್ತಿದ್ದರು. ಈ ಮೂಲಕ ವಿಧ್ಯುಕ್ತವಾಗಿ ಚುನಾವಣಾ ಪ್ರಚಾರವನ್ನೇ ಆರಂಭಿಸಿದ್ದರು.
ಇದೆಲ್ಲದರ ನಡುವೆ ಕಳೆದ ಕೆಲ ವಾರಗಳ ಹಿಂದೆ ಬಿ.ಎಸ್.ವೈ ರವರ ಶಿವಮೊಗ್ಗ ನಿವಾಸದಲ್ಲಿ ಸಭೆ ಸೇರಿದ್ದ ಅವರ ಬೆಂಬಲಿಗರು, ಈಶ್ವರಪ್ಪಗೆ ಟಿಕೆಟ್ ನೀಡಬಾರದು, ಎಸ್.ರುದ್ರೇಗೌಡರನ್ನೇ ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಮುಖಂಡ ಬಿಳಕಿ ಕೃಷ್ಣಮೂರ್ತಿಯವರು, 'ಈಶ್ವರಪ್ಪ ಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಠೇವಣಿಯೂ ಸಿಗುವುದಿಲ್ಲ' ಎಂಬ ಮಾತನ್ನಾಡಿದರು. ಇದು ಈಶ್ವರಪ್ಪ ಪಾಳೇಯದ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ವತಃ ಈಶ್ವರಪ್ಪ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಸುದ್ದಿಗೋಷ್ಠಿಯಲ್ಲಿಯೇ ಕಣ್ಣೀರಿಟ್ಟಿದ್ದರು. ಮತ್ತೊಂದೆಡೆ ಅವರ ಬೆಂಬಲಿಗರು ಬಿಜೆಪಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈಶ್ವರಪ್ಪಗೆ ಟಿಕೆಟ್ ನೀಡಿದಿದ್ದರೆ ಪರಿಣಾಮ ಸರಿಯಿರುವುದಿಲ್ಲವೆಂಬ ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದ್ದರು.
ಗೈರು: ತಮಗೆ ಟಿಕೆಟ್ ತಪ್ಪಿಸಿ ತಮ್ಮ ಆಪ್ತ ರುದ್ರೇಗೌಡರನ್ನು ಕಣಕ್ಕಿಳಿಸಲು ಯತ್ನಿಸುತ್ತಿದ್ದ ಬಿ.ಎಸ್.ವೈ. ವಿರುದ್ದ ಈಶ್ವರಪ್ಪ ಮತ್ತೆ ಮುನಿಸಿಕೊಂಡಿದ್ದರು. ಈ ಕಾರಣದಿಂದಲೇ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕರ್ತರ ಸಮಾವೇಶ ಹಾಗೂ ಶಿವಮೊಗ್ಗ ನಗರದಲ್ಲಿ ಬಿ.ಎಸ್.ವೈ. ಭಾಗವಹಿಸಿದ್ದ ಪಾಸ್‍ಪೋರ್ಟ್ ಕೇಂದ್ರ ಉದ್ಘಾಟನಾ ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ ಎನ್ನಲಾಗಿತ್ತು. ಮತ್ತೊಂದೆಡೆ ಬಿ.ಎಸ್.ವೈ. ವಿರುದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಪ್ರಾರಂಭಿಸುವ ಸಿದ್ದತೆ ಕೂಡ ನಡೆಯಲಾರಂಭಿಸಿತ್ತು. ಇದು ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಭಿನ್ನಮತಕ್ಕೂ ವೇದಿಕೆ ನಿರ್ಮಾಣವಾಗುವ ಲಕ್ಷಣಗಳು ಗೋಚರವಾಗಿದ್ದವು. ಈ ಎಲ್ಲ ಬೆಳವಣಿಗೆ ಗಮನಿಸಿದ ಆ ಪಕ್ಷದ ರಾಷ್ಟ್ರೀಯ ವರಿಷ್ಠರು ಶಿವಮೊಗ್ಗ ನಗರದ ಟಿಕೆಟ್ ರಾಜಕಾರಣಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ್ದು, ಈಶ್ವರಪ್ಪರಿಗೆ ಟಿಕೆಟ್ ಖಚಿತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎಂಎಲ್‍ಸಿ ಅಥವಾ ಲೋಕಸಭೆ ಟಿಕೆಟ್? ಶಿವಮೊಗ್ಗ ನಗರದ ಕ್ಷೇತ್ರದಿಂದ ಈಶ್ವರಪ್ಪರನ್ನು ಕಣಕ್ಕಿಳಿಸಿ, ಟಿಕೆಟ್ ರೇಸ್‍ನಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಆಪ್ತ ರುದ್ರೇಗೌಡರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡುವ ಅಥವಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಚಿಂತನೆಯನ್ನು ಪಕ್ಷದ ಮುಖಂಡರು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಬಿ.ಎಸ್.ವೈ ವಿಭಾಗವು ರುದ್ರೇಗೌಡರ ಪರ ಲಾಬಿ ಮುಂದುವರಿಸಿದ್ದು, ಅವರನ್ನೇ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣಾ ಕಣಕ್ಕಿಳಿಸುವಂತೆ ವರಿಷ್ಠರಿಗೆ ಒತ್ತಾಯಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳುತ್ತಿವೆ.
ಸಿಹಿ ವಿತರಣೆ ಮಾಡಿದ ಬೆಂಬಲಿಗರು? ಪಕ್ಷದ ರಾಷ್ಟ್ರೀಯ ವರಿಷ್ಠರು ಟಿಕೆಟ್ ಖಚಿತಪಡಿಸುತ್ತಿದ್ದಂತೆ ಇತ್ತೀಚೆಗೆ ಕೆ.ಎಸ್.ಈಶ್ವರಪ್ಪರವರು ನಗರದ ಪುರಾತನ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಮ್ಮ ಕುಟುಂಬ ಸದಸ್ಯರ ಸಮೇತ ಭೇಟಿಯಿತ್ತು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರ ಬೆಂಬಲಿಗರು ಸಿಹಿ ವಿತರಣೆ ಕೂಡ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಕೂಡ ಕೇಳಿಬರುತ್ತಿವೆ.