×
Ad

ಸಾಗರ ವಿಧಾನಸಭಾ ಕ್ಷೇತ್ರ: ಬೇಳೂರು ಗೋಪಾಲಕೃಷ್ಣ ಬೆಂಬಲಿಗರಿಂದ ಶಿವಮೊಗ್ಗದಲ್ಲಿ ಶಕ್ತಿ ಪ್ರದರ್ಶನ

Update: 2018-03-02 20:07 IST

ಶಿವಮೊಗ್ಗ, ಮಾ. 2: ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ, ಆ ಪಕ್ಷದಲ್ಲಿನ ಟಿಕೆಟ್ ರಾಜಕಾರಣ ಮತ್ತಷ್ಟು ಬಿರುಸುಗೊಂಡಿದೆ. ಇತ್ತೀಚೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಮಾಜಿ ಸಚಿವ ಹರತಾಳು ಹಾಲಪ್ಪ ಅಭ್ಯರ್ಥಿಯಾಗಲಿದ್ದಾರೆಂಬ ಘೋಷಣೆ ಮಾಡುತ್ತಿದ್ದಂತೆ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಟಿಕೆಟ್ ಲಾಬಿ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಶತಾಯಗತಾಯ ಟಿಕೆಟ್ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಲಾರಂಭಿಸಿದ್ದಾರೆ. 

ಈ ನಡುವೆ ಶುಕ್ರವಾರ ಸಾಗರ ಕ್ಷೇತ್ರದ ಬೇಳೂರು ಗೋಪಾಲಕೃಷ್ಣರವರ ನೂರಾರು ಬೆಂಬಲಿಗರು ಶಿವಮೊಗ್ಗ ನಗರದ ಜಿಲ್ಲಾ ಬಿಜೆಪಿಗೆ ಕಚೇರಿಗೆ ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೇಳೂರು ಪರ ಬ್ಯಾಟಿಂಗ್ ನಡೆಸಿದ್ದಾರೆ. ಸಾಗರ ಕ್ಷೇತ್ರದಿಂದ ಬೇಳೂರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಮುಖಂಡರಿಗೆ ಒತ್ತಾಯಿಸಿದ್ದಾರೆ. 

ಪಕ್ಷದ ಕಚೇರಿಯಲ್ಲಿದ್ದ ಮಾಜಿ ಸಂಸದ ಆಯನೂರು ಮಂಜುನಾಥ್‍ರವರು ಬೇಳೂರು ಬೆಂಬಲಿಗರ ಅಹವಾಲು ಆಲಿಸಿದ್ದಾರೆ. ತಾವು ಸಲ್ಲಿಸಿರುವ ಮನವಿ ಪತ್ರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುವ ಕೆಲಸ ಮಾಡುತ್ತೆನೆ. ಯಾವುದೇ ಕಾರಣಕ್ಕೂ ದುಡಕಬೇಡಿ. ತಾಳ್ಮೆಯಿಂದಿರುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಟಿಕೆಟ್ ಫೈಟ್: ಕಳೆದ ವರ್ಷ ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೊರಬ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಆ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದ ಹರತಾಳು ಹಾಲಪ್ಪರನ್ನು ಸಾಗರದಿಂದ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಇದು ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಗೋಪಾಲಕೃಷ್ಣರ ನಿದ್ದೆಗೆಡುವಂತೆ ಮಾಡಿತ್ತು. 

ಜೊತೆಗೆ ಸಾಗರ ಬಿಜೆಪಿಯಲ್ಲಿ ಬಣ ರಾಜಕಾರಣವೂ ತೀವ್ರಗೊಳ್ಳುವಂತೆ ಮಾಡಿತ್ತು. ಈ ನಡುವೆ ಬೇಳೂರುರವರು ಹಾಲಪ್ಪ ಕಣಕ್ಕಿಳಿಯುವುದಕ್ಕೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದ್ದರು. ಮತ್ತೊಂದೆಡೆ ಹಾಲಪ್ಪರವರು ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ನಡೆಸಲಾರಂಭಿಸಿದ್ದರು. ಇತ್ತೀಚೆಗೆ ಹೊಸನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬೇಳೂರು ವಿರುದ್ದ ಭಾರೀ ಟೀಕಾಪ್ರಹಾರ ಕೂಡ ಹಾಲಪ್ಪ ನಡೆಸಿದ್ದರು. ಇದಾದ ಮರು ದಿನವೇ ಬಿ.ಎಸ್.ಯಡಿಯೂರಪ್ಪರವರು ಶಿವಮೊಗ್ಗದಲ್ಲಿ ಮಾತನಾಡಿ, ಸಾಗರದಿಂದ ಹಾಲಪ್ಪ ಹಾಗೂ ಸೊರಬದಿಂದ ಕುಮಾರ್ ಬಂಗಾರಪ್ಪಗೆ ಟಿಕೆಟ್ ನೀಡುವ ನಿರ್ಧಾರ ಮಾಡಲಾಗಿದೆ. ಬೇಳೂರು ಗೋಪಾಲಕೃಷ್ಣಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಈ ದಿಢೀರ್ ಬೆಳವಣಿಗೆಯು ಬೇಳೂರು ಪಾಳೇಯದಲ್ಲಿ ಶಾಕ್ ಮೂಡಿಸಿತ್ತು. 

ಮತ್ತೊಂದೆಡೆ ಬೇಳೂರುರವರು ಪಕ್ಷದ ವರಿಷ್ಠರು ತಮಗೆ ಟಿಕೆಟ್ ನೀಡಲಿದ್ದಾರೆ ಎಂದು ಪುನರುಚ್ಚರಿಸಿದ್ದರು. ಯಡಿಯೂರಪ್ಪ ಏಕೆ ಹಾಗೆ ಹೇಳಿದ್ದಾರೆ ಎಂಬುವುದು ಗೊತ್ತಿಲ್ಲ ಎಂದಿದ್ದರು. ಹಾಗೆಯೇ ಈ ವಿಷಯದ ಕುರಿತಂತೆ ಯಾವುದೇ ವ್ಯತಿರಿಕ್ತ ಹೇಳಿಕೆ ನೀಡದೆ, ಸಂಯಮ ಕಾಪಾಡಿಕೊಂಡಿದ್ದರು. ಮತ್ತೊಂದೆಡೆ ಇದೀಗ ಅವರ ಬೆಂಬಲಿಗರು ಬೇಳೂರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಒತ್ತಾಯಿಸಲು ನಿರ್ಧರಿಸಿದ್ದಾರೆ. 

ಇದರ ಪ್ರಥಮ ಹಂತವಾಗಿ ಶುಕ್ರವಾರ ಶಿವಮೊಗ್ಗ ನಗರದ ಜಿಲ್ಲಾ ಬಿಜೆಪಿ ಕಚೇರಿಗೆ ಬೇಳೂರುರವರ ನೂರಾರು ಬೆಂಬಲಿಗರು ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಂತರ ಪಕ್ಷದ ರಾಷ್ಟ್ರೀಯ ವರಿಷ್ಠರನ್ನು ಭೇಟಿಯಾಗಿ ಟಿಕೆಟ್‍ಗೆ ಒತ್ತಾಯಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದ್ದು, ಇದು ಸಾಗರ ಬಿಜೆಪಿಯಲ್ಲಿ ಮತ್ತೊಮ್ಮೆ ಬಣ ರಾಜಕಾರಣಕ್ಕೆ ವೇದಿಕೆಯಾಗುವ ಲಕ್ಷಣಗಳು ಗೋಚರವಾಗಲಾರಂಭಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News