×
Ad

ಬೆಂಗಳೂರು ಹಾಳು ಮಾಡಿದ್ದೇ ಬಿಜೆಪಿಯವರು: ಕುಮಾರಸ್ವಾಮಿ ವಾಗ್ದಾಳಿ

Update: 2018-03-02 20:30 IST

ಮೈಸೂರು,ಮಾ.2: ಮೊದಲು ಬೆಂಗಳೂರನ್ನು ಹಾಳುಮಾಡಿದ್ದೇ ಬಿಜೆಪಿಯವರು, ಈಗ ಅವರೇ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಆರಂಭಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯವರ ಬಗ್ಗೆ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರವನ್ನು ಹಾಳುಮಾಡಿದ್ದೇ ಬಿಜೆಪಿಯವರು. ಈಗ ಏಕೆ ರಕ್ಷಿಸುವ ನಾಟಕವಾಡುತ್ತಿದ್ದಾರೋ ಗೊತ್ತಿಲ್ಲ. ಈ ಐದು ವರ್ಷದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಸರಕಾರ ಕೂಡ ಏನನ್ನು ಮಾಡಿಲ್ಲ. ಬೆಂಗಳೂರು ಮೈಸೂರು ಏನಾದರೂ ಅಭಿವೃದ್ಧಿಯಾಗಿದ್ದರೆ ಅದು ನನ್ನ ಅವಧಿಯಲ್ಲಿ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿವೆ. ಇಬ್ಬರು ಪರ್ಸೆಂಟೇಜ್‍ನಲ್ಲಿ ನಿಸ್ಸೀಮರು. ನನ್ನ ಆಡಳಿತದಲ್ಲಿ ಎಷ್ಟು ಪರ್ಸೆಂಟೇಜ್ ಇತ್ತು? ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪರ್ಸೆಂಟೇಜ್ ಇದೆ ಎಂದು ಎಲ್ಲಾ ಗುತ್ತಿಗೆದಾರರಿಗೆ ಗೊತ್ತಿದೆ. ಸಚಿವ ರಮೇಶ್ ಕುಮಾರ್ ಸರ್ಕಾರದ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಸರ್ಕಾರ ಬೇಕಾ? ಪರ್ಸೆಂಟೇಜ್ ರಹಿತ ಸರ್ಕಾರ ಬೇಕಾ.? ಈ ಬಗ್ಗೆ ಜನ ತೀರ್ಮಾನ ಮಾಡಲಿ ಎಂದರು. 

ಅಭಿವೃದ್ದಿ ಹೆಸರಿನಲ್ಲಿ ನಿಮ್ಮ ಪಾಕೇಟ್ ತುಂಬಿಸಿಕೊಳ್ಳುತ್ತಿದ್ದೀರಿ. ಮೈಸೂರು ಅಲ್ಪ ಸ್ವಲ್ಪ ಅಭಿವೃದ್ಧಿಯಾಗಿದೆ ಎಂದರೆ ಅದು ನನ್ನಿಂದ. ಮೈಸೂರು ಅಭಿವೃದ್ಧಿಯಲ್ಲೂ ಸಿದ್ದರಾಮಯ್ಯ ಕೊಡುಗೆ ಏನು ಇಲ್ಲ. ಬೆಂಗಳೂರಿನ ಮಡಿವಾಳ ಎಲೆಕ್ಟ್ರಾನಿಕ್ ಸಿಟಿ ಪ್ಲೈ ಓವರ್ ಅಡಿಪಾಯ ಹಾಕಿದ್ದು ನಾನು. ಅರ್ಧ ಕೆಲಸ ಮಾಡಿ ಈಗ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಪಕ್ಷದಲ್ಲಿ ಇರುವವರು ಇರಬಹುದು. ಹೋಗುವವರು ಹೋಗಬಹುದು. ಇದು ಯಾರೊಬ್ಬರ ಮನೆಯ ಆಸ್ತಿಯಲ್ಲ. ಎಂಎಲ್‍ಸಿ ಸಂದೇಶ್ ನಾಗರಾಜ್ ಕುಟುಂಬದವರು ಮಾತನಾಡುವುದನ್ನು ಬಿಡಬೇಕು. ಹಿಂದೆ ಒಂದು ಮುಂದೆಯೊಂದು ಮಾತನಾಡುವುದನ್ನು ಬಿಡಬೇಕು. ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರಿಂದ ಪಕ್ಷಕ್ಕೆ ಏನು ಆಗಿದೆ ಎಂಬುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಬಾಗಿಲು ತೆರೆದಿದೆ. ಒಳಗಿನವರು ಹೊರ ಹೋಗಬಹುದು. ಹೊರಗಿನವರು ಒಳ ಬರಬಹುದು. ವೈಯುಕ್ತಿಕ ವ್ಯಾಮೋಹ ಇಟ್ಟುಕೊಂಡು ಟಿಕೆಟ್ ನೀಡಿಲ್ಲ. ಪಕ್ಷ ಅಧಿಕಾರಕ್ಕೆ ತರಲು ಪ್ಲ್ಯಾನ್ ಮಾಡಿಯೇ ಪಟ್ಟಿ ರಿಲೀಸ್ ಮಾಡಿದ್ದೇವೆ ಎಂದು ಸ್ಪಷ್ಟ ಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News