ತುಮಕೂರು: ಜಿಲ್ಲಾಸ್ಪತ್ರೆಯ ಎನ್‍ಐಸಿಯುನಲ್ಲಿ ಬೆಂಕಿ ಅವಘಡ

Update: 2018-03-02 15:36 GMT

ತುಮಕೂರು,ಮಾ.02: ತುಮಕೂರು ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‍ಐಸಿಯು)ದಲ್ಲಿ 6:30ರ ಸುಮಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಅಲ್ಲಿನ ನರ್ಸ್ ಚಿಕ್ಕಸಿದ್ದಮ್ಮ, ಬ್ರದರ್ ರಮೇಶ್ ಅವರ ಸಮಯ ಪ್ರಜ್ಞೆಯಿಂದ ಎನ್‍ಐಸಿಯುನಲ್ಲಿದ್ದ 19 ನವಜಾತ ಶಿಶುಗಳು ಪ್ರಾಣಾಪಾಯದಿಂದ ಪಾರಾಗಿವೆ.

ನವಜಾತ ಶಿಶುಗಳ ಆರೈಕೆಗಾಗಿಯೇ ಇರುವ ಎನ್‍ಐಸಿಯು ಘಟಕದ ಹವಾನಿಯಂತ್ರಕದಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ನರ್ಸ್ ಹಾಗೂ ಅಲ್ಲಿನ ಸಿಬ್ಬಂದಿಯು ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಎನ್.ಐ.ಸಿ.ಯುನ ಕಿಟಕಿಯ ಗಾಜುಗಳನ್ನು ಒಡೆದು, ಮಕ್ಕಳನ್ನು ವಾರ್ಡಿನಿಂದ ಶಿಫ್ಟ್ ಮಾಡಿದ ಪರಿಣಾಮ 19 ಮಕ್ಕಳು ಬದುಕುಳಿದಿದೆ.

ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಶಂಕರ್ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತಕ್ಷಣವೇ ಎನ್.ಐ.ಸಿ.ಯು ಘಟಕವನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರ ಶಾಸಕ ಡಾ.ರಫೀಕ್ ಅಮಹದ್, ಎಸ್‍ಪಿ ಡಾ.ದಿವ್ಯ ಗೋಪಿನಾಥನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ನವಜಾತಶಿಶುಗಳ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಎನ್.ಐಸಿಯು ಇನ್ನೊಂದು ಘಟಕದಲ್ಲಿ ಕೆಲ ಮಕ್ಕಳನ್ನು ಇಟ್ಟುಕೊಂಡು, ಉಳಿದ ಮಕ್ಕಳನ್ನು ತಾತ್ಕಾಲಿಕವಾಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

ಎನ್‍ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಚಿಕ್ಕ ಸಿದ್ದಮ್ಮ ಹಾಗೂ ಬ್ರದರ್ ರಮೇಶ್ ಅವರ ಸಮಯ ಪ್ರಜ್ಞೆ ಹಾಗೂ ಕಾರ್ಯವನ್ನು ಸಾರ್ವಜನಿಕರು, ಮಕ್ಕಳ ಪೋಷಕರು ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News