×
Ad

ಜಾತಿ ವಿನಾಶಕ್ಕೆ ‘ಮೀಸಲಾತಿ’ ಸೌಲಭ್ಯ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-03-02 21:25 IST

ಬೆಂಗಳೂರು, ಮಾ. 2: ‘ಮೀಸಲಾತಿ ಸೌಲಭ್ಯ ಕಲ್ಪಿಸುವುದರಿಂದ ಜಾತಿ ಗಟ್ಟಿಗೊಳ್ಳುವುದಿಲ್ಲ, ಬದಲಿಗೆ ಜಾತಿ ವಿನಾಶಗೊಳ್ಳಲಿದೆ. ಕೆಳಜಾತಿ-ಕೆಳವರ್ಗದ ಜನರು ಸಾಮಾಜಿಕ, ಆರ್ಥಿಕ,ಶೈಕ್ಷಣಿಕವಾಗಿ ಮುಂಚೂಣಿಗೆ ಬಂದರೆ ಜಾತಿ ಅಳಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ‘ನಿಜಶರಣ ಅಂಬಿಗರ ಚೌಡಯ್ಯ ನಿಗಮ’ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶೋಷಿತ ವರ್ಗಗಳಿಗೆ ಮೀಸಲಾತಿ ಮತ್ತು ಅಭಿವೃದ್ಧಿ ನಿಗಮಗಳ ಸ್ಥಾಪನೆಯಿಂದ ಆ ಸಮುದಾಯ ಮುಖ್ಯವಾಹಿನಿಗೆ ಬರಲು ಸಹಕಾರಿ ಎಂದು ನುಡಿದರು.

ಬಡತನ, ಅನಕ್ಷರತೆ, ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಜಾತಿಗೆ ಚಲನಶೀಲತೆ ಇಲ್ಲ. ಹೀಗಾಗಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಅದನ್ನು ತೆಗೆದು ಹಾಕುವ ಅಗತ್ಯ ಮತ್ತು ಅನಿವಾರ್ಯ ಇದೆ ಎಂದ ಸಿದ್ದರಾಮಯ್ಯ, ಬಡವ ಬಲ್ಲಿದ ಎನ್ನುವ ತಾರತಮ್ಯ ದೂರವಾದರೆ ಮಾತ್ರ ಸ್ವಾತಂತ್ರ್ಯದ ಸಾರ್ಥಕತೆ ಎಲ್ಲರೂ ಸಿಗುತ್ತದೆ ಎಂದು ಹೇಳಿದರು.

ವಿದ್ಯೆ, ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಸಾಮಾಜಿಕ, ಆರ್ಥಿಕ ನ್ಯಾಯ ಸಿಗಲಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಇದನ್ನು ದೇವರಾಜ ಅರಸು ಪಾಲಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮೊಟ್ಟಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿದ್ದರು ಎಂದು ಸ್ಮರಿಸಿದರು.

ಬೆಸ್ತ, ಮೀನುಗಾರ, ಕೋಲಿ, ಕಬ್ಬಲಿಗ ಸಮುದಾಯ ಸೇರಿ ವಿವಿಧ 30ಕ್ಕೂ ಹೆಚ್ಚಿರುವ ಉಪಜಾತಿಗಳಿಗೆ ರಾಜ್ಯ ಸರಕಾರ ಹಲವು ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಸಮುದಾಯದ ಯುವಕ-ಯುವತಿಯರು ಇದರ ಸದುಪಯೋಗ ಪಡೆದುಕೊಂಡು ಮುಂಚೂಣಿಗೆ ಬರಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಸಚಿವ ಎಂ.ಆರ್. ಸೀತಾರಾಮ್, ನಿಗಮದ ಅಧ್ಯಕ್ಷ ಜಗನ್ನಾಥ್ ಜಾಮದಾರ್, ಶಾಸಕ ಮಾಲೀಕಯ್ಯ ಗುತ್ತೇದಾರ್, ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹ್ಸಿನ್, ಡಾ.ಎನ್.ವಿ. ಪ್ರಸಾದ್ ಹಾಜರಿದ್ದರು.

‘ಕೋಲಿ, ಕಬ್ಬಲಿಗ, ಬೆಸ್ತ, ಮೀನುಗಾರ ಸಮುದಾಯದ ವಿವಿಧ ಉಪಜಾತಿಗಳನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಬೇಕೆಂದು ಕೋರಿ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ಕೋರಿದ್ದ ಸ್ಪಷ್ಟಣೆಯನ್ನೂ ನೀಡಿದೆ. ಈ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡಿ ಮೀಸಲಾತಿ ಕಲ್ಪಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ’

-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News