×
Ad

ತಜ್ಞರ ಸಮಿತಿಯು ಕಾರ್ಯ ಚಟುವಟಿಕೆ ನಡೆಸದಂತೆ ಪ್ರತಿಬಂಧಿಸಲು ಅರ್ಜಿ ಸಲ್ಲಿಕೆ: ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2018-03-02 22:07 IST

ಬೆಂಗಳೂರು, ಮಾ.2: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ರಚಿಸಲಾಗಿರುವ ತಜ್ಞರ ಸಮಿತಿಯು ಯಾವುದೇ ಕಾರ್ಯ ಚಟುವಟಿಕೆ ನಡೆಸದಂತೆ ಪ್ರತಿಬಂಧಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಎಲ್‌ಐ) ಸಲ್ಲಿಸಲಾಗಿದೆ.

ಈ ಕುರಿತಂತೆ ಹೈಕೋರ್ಟ್ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಾ.9ಕ್ಕೆ ವಿಚಾರಣೆ ನಡೆಸಲಾಗುತ್ತಿದೆ. ಆಗಲೇ ಈ ಅರ್ಜಿಯನ್ನೂ ವಿಚಾರಣೆ ನಡೆಸಲಾಗುವುದು ಎಂದ ನ್ಯಾಯಪೀಠ ಇದೇ 9ಕ್ಕೆ ವಿಚಾರಣೆ ಮುಂದೂಡಿದೆ.

ಸರಕಾರ ತಜ್ಞರ ಸಮಿತಿ ನೇಮಿಸಿರುವುದು ಸಂವಿಧಾನದ ಅನುಸಾರ ವ್ಯಕ್ತಿಯೊಬ್ಬನ ಧಾರ್ಮಿಕ ಆಚರಣೆ ಸ್ವಾತಂತ್ರಕ್ಕೆ ವಿರುದ್ಧವಾಗಿದೆ. ವೀರಶೈವ ಮತ್ತು ಲಿಂಗಾಯತ ಧರ್ಮ ಅನುಯಾಯಿಗಳ ಭಾವನೆಗೆ ಧಕ್ಕೆ ತರುವಂತಿದೆ ಎಂಬುದು ಅರ್ಜಿದಾರರ ಆಕ್ಷೇಪ. ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಪಿ.ಶಂಕರ್ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News