ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ 164.68 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ
ಮೈಸೂರು,ಮಾ.2: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2017-18ನೇ ಸಾಲಿನ ಪರಿಷ್ಕೃತ ಆದಾಯ-ವೆಚ್ಚ ಹಾಗೂ 2018-19ನೇ ಸಾಲಿನ ಅಂದಾಜು ಆದಾಯ-ವೆಚ್ಚದ ವಿವರಗಳನ್ನು ಆಯುಕ್ತ ಕಾಂತರಾಜು ಮಂಡಿಸಿದರು.
ಮುಡಾ ಕಚೇರಿಯಲ್ಲಿ ಬಜೆಟ್ ಮಂಡಿಸಲಾಗಿದ್ದು, 2017-18ನೇ ಸಾಲಿನ ಆದಾಯಕ್ಕೆ ಸಂಬಂಧಿಸಿದಂತೆ ನಿವೇಶನ ಹಂಚಿಕೆ, ನಿವೇಶನಗಳ ಹರಾಜಿನಿಂದ ವಾಣಿಜ್ಯ ಸಂಕೀರ್ಣ ಬಾಡಿಗೆ ವಸೂಲಾತಿ,ನಾಗರಿಕ ಸೌಕರ್ಯ ನಿವೇಶನಗಳಿಂದ ಅಭಿವೃದ್ಧಿ ಹಾಗೂ ಬೆಳವಣಿಗೆ ಶುಲ್ಕ, ಕಲ್ಯಾಣ ಮಂಟಪಗಳ ಬಾಡಿಗೆ ನಿವೇಶನಗಳ ಮೇಲಿನ ಕಂದಾಯ, ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ಹಾಗೂ ಇತರೆ ಆದಾಯ ಮೂಲಗಳಿಂದ ಪ್ರಾಧಿಕಾರವು ರೂ.50000.00ಲಕ್ಷಗಳ ಆದಾಯವನ್ನು ನಿರೀಕ್ಷೆ ಮಾಡಿತ್ತು. ಆದರೆ ಏಪ್ರೀಲ್ 2017ರ ಮಾಹೆಯಿಂದ ಡಿಸೆಂಬರ್ 2017ರ ಅಂತ್ಯಕ್ಕೆ ವಾಸ್ತವಿಕ ಆದಾಯ ರೂ.28,332.31 ಲಕ್ಷಗಳು ಸ್ವೀಕೃತಿಯಾಗಿದ್ದು, ಜನವರಿ 2018ರಿಂದ ಮಾರ್ಚ್ 2018ರ ಅಂತ್ಯದವರೆಗೆ ರೂ.22,069.09 ಲಕ್ಷಗಳನ್ನು ನಿರೀಕ್ಷಿಸಿ 2017-18ನೇ ಸಾಲಿಗೆ ಒಟ್ಟು 50401.40ಲಕ್ಷಗಳಿಗೆ ಅಂದಾಜು ಆದಾಯವನ್ನು ಪರಿಷ್ಕರಿಸಲಾಗಿದೆ ಎಂದರು.
2017-18ನೇ ಸಾಲಿನ ವೆಚ್ಚಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಪ್ರಾಧಿಕಾರವು ಪ್ರಮುಖ ರಸ್ತೆಗಳ ಕಾಮಗಾರಿ, ಕ್ರೀಡಾಂಗಣಗಳ ಅಭಿವೃದ್ಧಿ, ಉದ್ಯಾನವನ, ಆಸ್ತಿಗಳ ಸಂರಕ್ಷಣೆ ಹಾಗೂ ನಾಗರಿಕ ಸೌಲಭ್ಯ,ಕೆರೆಗಳ ಅಭಿವೃದ್ಧಿ ಸೇರದಂತೆ ಹಲವು ಕಾಮಗಾರಿಗಳಿಗೆ ಒಟ್ಟು 49723.41 ಲಕ್ಷಗಳ ಅನುದಾನ ಕಾಯ್ದಿರಿಸಿದ್ದು, ಡಿಸೆಂಬರ್ 2017ರ ಅಂತ್ಯಕ್ಕೆ ರೂ. 26,318.15ಲಕ್ಷಗಳ ವೆಚ್ಚ ಭರಿಸಲಾಗಿದೆ. ಜನವರಿ 2018ರಿಂದ ಮಾರ್ಚ್ 2,018ರ ಅಂತ್ಯಕ್ಕೆ ರೂ.24,014.05 ಲಕ್ಷಗಳ ವೆಚ್ಚ ಭರಿಸಲು ಉದ್ದೇಶಿಸಿ ಒಟ್ಟು 50,332.20 ಲಕ್ಷಗಳಿಗೆ ಅಂದಾಜು ವೆಚ್ಚ ಪರಿಷ್ಕರಿಸಲಾಗಿದೆ.
2018-19ನೇ ಸಾಲಿನಲ್ಲಿ ಪ್ರಾಧಿಕಾರವು ವಿವಿಧ ಮೂಲಗಳಿಂದ ಒಟ್ಟು ರೂ.32,335 ಲಕ್ಷ ಆದಾಯವನ್ನು ನೀರೀಕ್ಷಿಸುತ್ತಿದೆ.ಹುಡ್ಕೋ ಮನೆಗಳ ಕಂತಿನ ಬಾಕಿ ವಸೂಲಾತಿ ರೂ. 200 ಲಕ್ಷ ಆದಾಯ, ಹೊಸ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ 3800 ಲಕ್ಷಗಳ ಆದಾಯ ಮೂಲೆ ನಿವೇಶನ ಮತ್ತು ಮಧ್ಯಂತರ ನಿವೇಶನಗಳ ಹರಾಜುರೂ.13000 ಲಕ್ಷಗಳ ಆದಾಯ, ಬಿಡಿಮನೆಗಳ ಹರಾಜು ರೂ.1,000 ಲಕ್ಷ, ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆ ರೂ.1000 ಲಕ್ಷ, ಹೊಸ ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆ ರೂ.3000 ಲಕ್ಷ, ಖಾಸಗಿ ಬಡಾವಣೆಗಳ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಶುಲ್ಕ ರೂ.500 ಲಕ್ಷ, ನಗರ ಯೋಜನಾ ಅಭಿವೃದ್ಧಿ ಮತ್ತು ಬೆಳವಣಿಗೆ ಶುಲ್ಕರೂ.4000, ಇತರೆ ಮೂಲಗಳಿಂದ ರೂ.5825 ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿದೆ.
2018-19ನೇ ಸಾಲಿಗೆ ವಿವಿಧ ಕಾಮಗಾರಿಗಳು, ಸಮಗ್ರ ಅಭಿವೃದ್ಧಿಗಾಗಿ 925.73ಲಕ್ಷಗಳ ಅನುದಾನ ಕಾಯ್ದಿರಿಸಲಾಗಿದೆ. ಹೊಸಬಡಾವಣೆಗಳ ನಿರ್ಮಾಣ ಅಭಿವೃದ್ಧಿ ರೂ.269.34ಲಕ್ಷ, ಉದ್ಯಾನವನದ ಅಭಿವೃದ್ಧಿ ಮತ್ತು ಹಸರೀಕರಣ ರೂ.176.99ಲಕ್ಷ, ಕಾಯ್ದಿರಿಸಲಾಗಿದ್ದು, ಪ್ರಾಧಿಕಾರದ ಆಸ್ತಿ ಸಂರಕ್ಷಣೆಗೆ ಕ್ರಮವಹಿಸಲಾಗಿದೆ. ಕೆರೆಗಳ ಅಭಿವೃದ್ಧಿ ರೂ.50 ಲಕ್ಷ, ಪ್ರಾಧಿಕಾರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಿಗೆ ಒಳಚರಂಡಿ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗೆ ರೂ. 931.68 ಲಕ್ಷಗಳ ವೆಚ್ಚ ಭರಿಸಲು ಉದ್ದೇಶಿಸಲಾಗಿದೆ ಎಂದರು.
2018-19ನೇ ಸಾಲಿನಲ್ಲಿ ಗುಂಪು ವಸತಿ ಯೋಜನೆ ಹೊಸ ಯೋಜನೆಯಾಗಿದ್ದು, ನಗರದಲ್ಲಿ ಸ್ವಂತ ಸೂರು ಹೊಂದಿಲ್ಲದ ನಾಗರಿಕರಿಗೆ ಪ್ರಾಧಿಕಾರದ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ಪ್ರದೇಶದಲ್ಲಿ ಕೈಗೆಟುಕುವ ಬೆಲೆಯ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಾಧಿಕಾರದ ರಾಮಕೃಷ್ಣನಗರ ಇ, ಎಫ್ ಬ್ಲಾಕ್, ಬೋಗಾದಿ ಗೂಲುಲಂ 3ನೇ ಹಂತ ಮತ್ತು ಹಿನಕಲ್ ರಸ್ತೆಯ ಪೂರ್ವ ಭಾಗ ಸ್ಥಳಗಳಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಐಡೆಕ್ ಸಂಸ್ಥೆಯನ್ನು ಡಿಪಿಆರ್ ತಯಾರಿಸಲು ನೇಮಿಸಲಾಗಿದ್ದು, ಗೋಕುಲಂ 3ನೇ ಹಂತದಲ್ಲಿ ಪ್ರಾಯೋಗಿಕವಾಗಿ ತೆಗೆದುಕೊಳ್ಳಲು ಪ್ರಸ್ತುತ ಸಾಲಿನಲ್ಲಿ ರೂ.30 ಲಕ್ಷಗಳ ಅನುದಾನ ಕಾಯ್ದಿರಿಸಲಾಗಿದೆ.
ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ರೂ.30 ಲಕ್ಷ ಕಾಯ್ದಿರಿಸಲಾಗಿದೆ. ಬಾಲಭವನ ಅಭಿವೃದ್ಧಿಗೆ ರೂ.15 ಲಕ್ಷ, ಬಲ್ಲಹಳ್ಳಿ ವಸತಿ ಬಡಾವಣೆಯಲ್ಲಿ ಶೇ.50:50 ರ ಅನುಪಾತದಲ್ಲಿ ಪ್ರಾಧಿಕಾರದ ವತಿಯಿಂದ ಜಯಪುರ ಹೋಬಳಿಯ ಬಲ್ಲಹಳ್ಳಿಯಲ್ಲಿ 484.00ಎಕ್ರೆ ಗುಂಟೆ ವಿಸ್ತೀರ್ಣದ ಪ್ರದೇಶಕ್ಕೆ ರೂ.258.00ಕೋಟಿ ವೆಚ್ಚದಲ್ಲಿ ಯೋಜನೆಯನ್ನು ತಯಾರಿಸಿದ್ದು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. 28.09.2016ರಂದು 381ಎಕ್ರೆ 01ಗುಂಟೆ ವಿಸ್ತೀರ್ಣಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉದ್ದೇಶಿತವಸತಿ ಬಡಾವಣೆಯಲ್ಲಿ ವಿವಿಧ ಅಳತೆಯ 6155 ನಿವೇಶನಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ರೂ.500.00ಲಕ್ಷ ಅನುದಾನ ಕಾಯ್ದಿರಿಸಲಾಗಿದೆ.
ಕೆಂಚಲಗೂಡು ವಸತಿ ಬಡಾವಣೆಯಲ್ಲಿ 50:50ರ ಅನುಪಾತದಲ್ಲಿ ರೂ.500 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿ ಕಾಯ್ದಿರುವ ಆಕಾಂಕ್ಷಿಗಳಿಗೆ ನಿವೇಶನ ನೀಡಬಹುದಾಗಿದೆ ಎಂದರು. ಕೆಂಚಲಗೂಡು ಗುಂಪು ವಸತಿ ಯೋಜನೆಗೆ ರೂ.500 ಲಕ್ಷರೂ, ಪ್ರಮುಖ ರಸ್ತೆಗಳ ನಿರ್ಮಾಣ, ವೃತ್ತಗಳ ಅಭಿವೃದ್ಧಿಗೆ ರೂ.200 ಲಕ್ಷ,ಮಲಿನ ನೀರಿನ ಶುದ್ಧೀಕರಣ ಘಟಕಗಳ ನಿರ್ಮಾಣ ರೂ.25.00ಲಕ್ಷ, ಬಡಾವಣೆಗಳನ್ನು ಮೈಸೂರು ಮನಪಾಗೆ ಹಸ್ತಾಂತರಿಸುವುದು, ಆಟೋನಗರ ರೂ.100 ಲಕ್ಷ, ವಿಶೇಷ ಕಾರ್ಯಪಡೆಗೆ ರೂ.25 ಲಕ್ಷ, ಉದ್ಯಾನವನಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಆಯ್ದ ಉದ್ಯಾನವನಗಳಿಗೆ ಹೈಟೆಕ್ ಸ್ಪರ್ಶ, ಸೋಲಾರ್ ವಿದ್ಯುತ್ ದೀಪ, ಹಸರೀಕರಣ, ಸರ್ಕಾರಿ ಸಂಸ್ಥೆಗಳಿಗೆ ನಾಗರಿಕ ಸೌಕರ್ಯ ನಿವೇಶನಗಳ ಮಂಜೂರು,ನಗರ ಯೋಜನೆ, ನೀರು ಸರಬರಾಜು ಯೋಜನೆ, ಭೂಸ್ವಾದೀನ ವೆಚ್ಚ, ಸಿಬ್ಬಂದಿ ಆಡಳಿತ ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಆಡಳಿತ ತರಬೇತಿ ಸೇರಿದಂತೆ ಒಟ್ಟಾರೆ 2018-19ನೇ ಸಾಲಿನಲ್ಲಿ ರೂ.32335 ಲಕ್ಷಗಳ ಆದಾಯವನ್ನು ಹಾಗೂ ರೂ.32170.32 ಲಕ್ಷಗಳ ವೆಚ್ಚವನ್ನು ಭರಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರಸ್ತುತ ಸಾಲಿಗೆ ರೂ.164.68 ಲಕ್ಷಗಳ ಉಳಿತಾಯ ಆಯವ್ಯಯ ಮಂಡಿಲಾಗಿದೆ. ಬಜೆಟ್ ಮಂಡನೆಯ ವೇಳೆ ಪ್ರಾಧಿಕಾರದ ಅಧ್ಯಕ್ಷ ಡಿ.ಧ್ರುವಕುಮಾರ್, ಶಾಸಕ ಜಿ.ಟಿ.ದೇವೇಗೌಡ, ಕಳಲೆ ಕೇಶವಮೂರ್ತಿ, ಮುಡಾ ಸದಸ್ಯರಾದ ಶಿವಮಲ್ಲು, ಜಯಕುಮಾರ್, ಸೋಮಶೇಖರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.