ಮೈಸೂರು: ಮಗನ ಕೊಲೆಗೆ ಯತ್ನಿಸಿದ ತಂದೆಗೆ ನಾಲ್ಕು ವರ್ಷ ಜೈಲು ಶಿಕ್ಷೆ
Update: 2018-03-02 22:30 IST
ಮೈಸೂರು,ಮಾ.2: ಕ್ಷುಲ್ಲಕ ಕಾರಣಕ್ಕೆ ತನ್ನ ಮಗನನ್ನೇ ಕೊಲ್ಲಲು ಯತ್ನಿಸಿದ ತಂದೆಗೆ ಜಿಲ್ಲಾ ಮೂರನೇ ಹೆಚ್ಚುವರಿ ಸತ್ರ ನ್ಯಾಯಾಲಯ ನಾಲ್ಕು ವರ್ಷ ಜೈಲು, ಐದು ಸಾವಿರ ರೂ ದಂಡ ವಿಧಿಸಿದೆ.
ನಂಜನಗೂಡು ತಾಲೂಕಿನ ಸಿಂಧುವಳ್ಳಿಪುರ ಗ್ರಾಮದ ಶಿವಣ್ಣ ಎಂಬಾತನೇ ಶಿಕ್ಷೆಗೆ ಗುರಿಯಾದವನಾಗಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಈತ ತನ್ನ ಆರು ವರ್ಷದ ಮಗ ಚಂದ್ರುವಿನ ಮುಖವನ್ನು ಉರಿಯುತ್ತಿದ್ದ ಒಲೆಗೆ ಹಿಡಿದು ಕೊಲೆಗೆ ಯತ್ನಿಸಿದ್ದ. ಈ ಸಂದರ್ಭ ಚಂದ್ರುವಿನ ಮುಖ ಹಾಗೂ ಕೈಗಳಿಗೆ ಸುಟ್ಟ ಗಾಯಗಳಾಗಿತ್ತು.
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಆರೋಪಿಯ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಸುಧೇಂದ್ರನಾಥ್ ತೀರ್ಪು ಪ್ರಕಟಿಸಿದ್ದು, ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 5ಸಾವಿರರೂ. ದಂಡ ವಿಧಿಸಿದ್ದಾರೆ. ಸರಕಾರಿ ಅಭಿಯೋಜಕ ವಾಸಂತಿ ಎಂ.ಅಂಗಡಿ ಸರ್ಕಾರದ ಪರ ವಾದ ಮಂಡಿಸಿದ್ದರು.