ಚಿಕ್ಕಮಗಳೂರು: ಬಿಜೆಪಿ ಉಚ್ಚಾಟಿತ ಸದಸ್ಯೆಯಿಂದ ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ
ಚಿಕ್ಕಮಗಳೂರು, ಮಾ.2: ಇಲ್ಲಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದ ಬಿಜೆಪಿ ಪಕ್ಷದ ಬಿ.ಎಸ್.ಚೈತ್ರಶ್ರೀ ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಗುರುವಾರ ಅವರು ಬೆಂಗಳೂರಿನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.
ಬಿ.ಎಸ್.ಚೈತ್ರಶ್ರೀ ಪಕ್ಷದ ಆದೇಶ ಪಾಲನೆ ಮಾಡಿಲ್ಲ ಎಂಬ ಆರೋಪದ ಮೇರೆಗೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದ್ದು, ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ಅವರ 20 ತಿಂಗಳ ಅಧಿಕಾರವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಚೈತ್ರಶ್ರೀ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಇನ್ನೂ 20 ತಿಂಗಳ ಕಾಲಾವಧಿಗೆ ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರಿಯುವುದಾಗಿ ಪಟ್ಟು ಹಿಡಿದು ರಾಜೀನಾಮೆ ನೀಡಲು ನಿರಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಆದೇಶ ಪಾಲಿಸದ ಆರೋಪದಡಿಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅವರನ್ನು 6 ವರ್ಷದ ವರೆಗೆ ಅಮಾನತು ಮಾಡಿ ಇತ್ತೀಚೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆದೇಶ ಹೊರಡಿಸಿದ್ದರು.
ಈ ಹಿನ್ನೆಲೆಯಲ್ಲಿ ಚೈತ್ರಶ್ರೀ ಗುರುವಾರ ಬೆಂಗಳೂರಿನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಚೈತ್ರಶ್ರೀ ರಾಜೀನಾಮೆಯಿಂದಾಗಿ ಸದ್ಯ ಜಿಪಂ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಮುಂದಿನ ಉಳಿಕೆ ಅವಧಿಗೆ ಜಿಪಂ ಅಧ್ಯಕ್ಷರು ಯಾರಾಗುತ್ತಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ವರಿಷ್ಠರಾದ ಯಡಿಯೂರಪ್ಪ ಅವರ ಸೂಚನೆ ಪ್ರಕಾರ ರಾಜೀನಾಮೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ಮುಖಂಡರು, ಜಿಲ್ಲಾ ನಾಯಕರೊಂದಿಗೆ ಚರ್ಚಿಸಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತೇನೆ. ಪಕ್ಷ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ.
- ಬಿ.ಎಸ್.ಚೈತ್ರಶ್ರೀ