ಮಡಿಕೇರಿ: ಅನಧಿಕೃತ ಹೋಂ ಸ್ಟೇಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

Update: 2018-03-02 17:30 GMT

ಮಡಿಕೇರಿ, ಮಾ.2: ಅನಧಿಕೃತ ಹೋಂ ಸ್ಟೇಗಳ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಅನಧಿಕೃತವಾಗಿ ನಡೆಸುತ್ತಿರುವವರ ಹೋಂ ಸ್ಟೇಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ.        

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.    

ಹೋಂ ಸ್ಟೇ ಆರಂಭಿಸುವ ಸಂಬಂಧ ಈಗಾಗಲೇ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಪಾಲನೆ ಮಾಡಬೇಕು. ಸರ್ಕಾರದ ನಿಯಮವನ್ನು ಉಲ್ಲಂಘಿಸಿ ನಡೆಸುತ್ತಿರುವ ಅನಧಿಕೃತ ಹೋಂ ಸ್ಟೇಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು. ಅನಧಿಕೃತ ಹೋಂಸ್ಟೇಗಳ ವಿರುದ್ಧ ಪ್ರಕರಣ ದಾಖಲಿಸುವ ಮೊದಲು ಹೋಂ ಸ್ಟೇ ಆರಂಭಿಸುವ ಬಗ್ಗೆ ಸರ್ಕಾರದ ನಿರ್ದೇಶನ ಪಾಲಿಸುವ ಸಂಬಂಧ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ಏರ್ಪಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಸಲಹೆ ಮಾಡಿದರು.    

ಹೋಂ ಸ್ಟೇ ಸಂಬಂಧಿಸಿದಂತೆ ಪೂರಕ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದ್ದು, ಹೋಂ ಸ್ಟೇ ಅಸೋಸಿಯೇಷನ್ ಹಾಗೂ ಇತರ ಸಂಘ ಸಂಸ್ಥೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು. ಸದ್ಯದಲೇ ಹೋಂ ಸ್ಟೇ ಸಂಬಂಧಿಸಿದಂತೆ ಮತ್ತೊಮ್ಮೆ ಸಭೆಯನ್ನು ಆಹ್ವಾನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಹೋಂ ಸ್ಟೇಗಳಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದ ಅರ್ಜಿಗಳನ್ನು ಪರಿಶೀಲಿಸಿ ನಿರಾಪೇಕ್ಷಣಾ ಪತ್ರ ನೀಡಬೇಕಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕಿದೆ ಎಂದು ಅವರು ಸಲಹೆ ನೀಡಿದರು. 

ಹೋಂ ಸ್ಟೇ ಅಸೋಸಿಯೇಷನ್‍ನ ಸದಸ್ಯರಾದ ಬಿ.ಜಿ.ಅನಂತಶಯನ, ರಾಜಾಸೀಟು ಅಭಿವೃದ್ಧಿ, ಪ್ರವಾಸಿಗರ ವಾಹನ ನಿಲುಗಡೆ ವ್ಯವಸ್ಥೆ ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ ಎಂದರು. 

ಮತ್ತೊಬ್ಬ ಸದಸ್ಯರಾದ ಕರುಂಬಯ್ಯ ಅವರು ಮಾತನಾಡಿ, ನೋಂದಾಣಿಯಾಗಿರುವ ಹಾಗೂ ನೋಂದಾಣಿಯಾಗದಿರುವ ಹೋಂ ಸ್ಟೇಗಳ ಬಗ್ಗೆ ಪೂರ್ಣವಾಗಿ ಮಾಹಿತಿ ಕಲೆ ಹಾಕಬೇಕಿದೆ ಎಂದರು. ಮೊಂತಿ ಗಣೇಶ ಅವರು ಹೋಂಸ್ಟೆ ನೋಂದಣಿಯನ್ನು ಆನ್‍ಲೈನ್ ಹಾಗೂ ಆಫ್‍ಲೈನ್ ಮೂಲಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.  

ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಚಂಗಪ್ಪ, ಕೊಡಗು ಪ್ರಾಕೃತಿಕವಾಗಿ ಸಮೃದ್ಧವಾಗಿದ್ದು, ಅದನ್ನು ಉಳಿಸುವಂತಾಗಬೇಕು. ಕೊಡಗಿನ ಸ್ವಾಭಾವಿಕ ಸೌಂದರ್ಯವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು. ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಹೋಂ ಸ್ಟೇ ಸಂಬಂಧಿಸಿದಂತೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.   

ಪೌರಾಯುಕ್ತರಾದ ಬಿ.ಶುಭ ಅವರು ಹೋಂ ಸ್ಟೇ ಸಂಬಂಧಿಸಿದಂತೆ ನಗರ ಸಭೆ ವತಿಯಿಂದ ನಿರಾಪೇಕ್ಷಣ ಪತ್ರವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಿ.ಜಗನಾಥ್, ಜಿಲ್ಲೆಯಲ್ಲಿ ಹೋಂ ಸ್ಟೇ ಅನುಮೋದನೆ ಕೋರಿ ಆನ್‍ಲೈನ್ ಮೂಲಕ 725 ಮಂದಿ ನೋಂದಾಣಿ ಮಾಡಿಸಿದ್ದಾರೆ. 350 ಮಂದಿ ತೆರಿಗೆ ಪಾವತಿಸಿದ್ದಾರೆ ಎಂದು ಮಾಹಿತಿ ನೀಡಿದರು.   

ಹೋಂ ಸ್ಟೇ ಅಸೋಸಿಯೇಷನ್ ಸದಸ್ಯರಾದ ದಿಲೀಪ್ ಚಗಂಪ್ಪ, ಅಂಬೆಕಲ್ ನವೀನ್, ಸೆಸ್ಕ್, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು.  

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪುಷ್ಕರ್, ಜಂಗಲ್ ಲಾಡ್ಜ್ ಮತ್ತು ರೇಸಾರ್ಟ್ ವ್ಯವಸ್ಥಾಪಕ ನಿರ್ದೇಶಕರಾದ ವಿಜಯಶರ್ಮ ಅವರು ಅನಧೀಕೃತ ಹೋಂ ಸ್ಟೇ ನಿಯಂತ್ರಣ ಬಗ್ಗೆ ಹಲವು ಸಲಹೆ ನೀಡಿದರು.  

ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಗೋಪಾಲ ಕೃಷ್ಣ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News