ಸೊರಬ: ಏತ ನೀರಾವರಿ ಯೋಜನೆಗೆ ಸಚಿವರಿಂದ ಶಿಲಾನ್ಯಾಸ

Update: 2018-03-02 17:55 GMT

ಸೊರಬ,ಮಾ.2: ಮಲೆನಾಡಿನಲ್ಲಿ ಮನೆ ಬಾಗಿಲಲ್ಲೇ ನದಿಗಳು ಹರಿಯುತ್ತಿದ್ದರೂ ಬೇಸಿಗೆಯಲ್ಲಿ ರೈತರ ಜಮೀನು ಸೇರಿದಂತೆ ಕುಡಿಯುವ ನೀರಿಗೂ ಜನತೆ ಪರದಾಡುವಂತಾಗುತ್ತದೆ. ಸರ್ಕಾರದಿಂದ ಮಂಜೂರಾಗಿರುವ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಬದುಕನ್ನು ಬಂಗಾರವಾಗಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದರು.

ತಾಲೂಕಿನ ಜಡೆ ಹೋಬಳಿ ಕಚವಿ ಗ್ರಾಮದ ಬಳಿ 15 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ನೀರಾವರಿ ಇಲ್ಲದೇ ರೈತರು ಪರದಾಡುವಂತಾಗಿದೆ. ಕಳೆದ ಮೂರು ವರ್ಷಗಳಿಂದ ಬರದಿಂದ ಬಳಲುತ್ತಿದ್ದ ಈ ಭಾಗದ ಜನತೆಗೆ ಯೋಜನೆ ಆಶಾಕಿರಣವಾಗಿದೆ. ಯೋಜನೆಗಳನ್ನು ನೀಡುವ ಜವಾಬ್ಧಾರಿ ಜನಪ್ರತಿನಿದಿಯದ್ದಾಗಿದೆ. ಆದರೆ ಯೋಜನೆಯ ಸಮರ್ಪಕ ಬಳಕೆ ಹಾಗೂ ಗುಣಮಟ್ಟವನ್ನು ಉಳಿಸಿಕೊಂಡು ಹೋಗಲು ಸುತ್ತ ಮುತ್ತಲ ಗ್ರಾಮಸ್ಥರು ಪ್ರಯತ್ನಿಸಿದಾಗ ಯೋಜನೆ ತಂದ ಜನಪ್ರತಿನಿಧಿಯ ಹೆಸರು ಕಡೆಯವರೆಗೂ ಉಳಿಯಲು ಸಾಧ್ಯ. 32 ಕೆರೆಗಳಿಗೆ ನೀರು ತುಂಬುವ ಯೋಜನೆ ಇದಾಗಿದ್ದು, ಇದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡು, ನೀರು ಪೋಲಾಗದಂತೆ ನೋಡಿ ಕೊಳ್ಳಲು ಸಮಿತಿಯೊಂದನ್ನು ರಚನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಗರ್ ಹುಕುಂ ಹಕ್ಕು ಪತ್ರವನ್ನು ನೀಡುವ ಬಗ್ಗೆ ಕಾರ್ಯಗತ ಮಾಡಲು ಶ್ರಮಿಸಿದ ಶಾಸಕ ಮಧು ಬಂಗಾರಪ್ಪನವರನ್ನು ಶ್ಲಾಘಿಸಿ, ಪ್ರತಿವಾರ ಸಭೆ ಕರೆದು 5 ಸಾವಿರಕ್ಕಿಂತಲೂ ಹೆಚ್ಚು ಅರ್ಜಿ ವಿಲೇವಾರಿಮಾಡಲು ಕಾರಣಕರ್ತರಾಗಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಸುಮಾರು 2 ಸಾವಿರಕ್ಕಿಂತಲೂ ಅರ್ಜಿಗಳು ಉಳಿದಿದ್ದು, ಅವುಗಳನ್ನು ಕೂಡಾ ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಲಾಗುವುದು ಎಂದರು.

ಶಾಸಕ ಮಧುಬಂಗಾರಪ್ಪ ಮಾತನಾಡಿ ,ಕಚವಿ, ಮೂಗೂರು, ಮೂಡಿ ಏತ ನೀರಾವರಿ ಹಾಗೂ ಜಂಗಿನಕೊಪ್ಪದಿಂದ ಕುಬಟೂರು ಕೆರೆಗೆ ತುಂಬಿಸುವ ಯೋಜನೆ ಬಂಗಾರಪ್ಪನವರ ಕನಸು. ಕಚವಿ ಏತ ನೀರಾವರಿ ಯೋಜನೆ ಮಂಜೂರಾತಿ ಪಡೆದು ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು. ಉಳಿದ ಯೋಜನೆಗಳನ್ನು ಕಾರ್ಯಗತ ಮಾಡಲು ಶ್ರಮಿಸುತ್ತೇನೆ. ಕಚವಿ ಏತ ನೀರಾವರಿ ಯೋಜನೆಯಿಂದ ಇನ್ನೂ ಅನೇಕ ಕೆರೆಗಳನ್ನು ತುಂಬಲು ಅನುಕೂಲವಿರುವ ಗ್ರಾಮದ ಕೆರೆಗಳನ್ನು ಗುರುತಿಸಿ ಕಾಮಗಾರಿಗೆ ಹೆಚ್ಚಿನ ಹಣ ಒದಗಿಸಲಾಗುವುದು. ಕಾನೂನು ತಿದ್ದುಪಡಿ ಮಾಡಿ ಬಗರ್‍ಹುಕುಂ ರೈತರಿಗೆ ಹಕ್ಕುಪತ್ರ ನೀಡುವಲ್ಲಿ ಕಾಗೋಡು ತಿಮ್ಮಪ್ಪನವರ ಆಸಕ್ತಿ ಪ್ರಾಮುಖ್ಯತೆ ಪಡೆದಿದ್ದು ಹೆಚ್ಚಿನ ರೈತರಿಗೆ ಹಕ್ಕು ಪತ್ರ ಪಡೆಯಲು ನೆರವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಕಲ್ಪನಾ ಲೋಕಪ್ಪ ವಹಿಸಿದ್ದರು. ಜಿ.ಪಂ ಸದಸ್ಯರಾದ ಶಿವಲಿಂಗೇಗೌಡ, ವೀರೇಶ ಕೊಟಿಗೇರ, ತಾ.ಪಂ ಉಪಾಧ್ಯಕ್ಷ ಸುರೇಶ ಹಾವಣ್ಣನವರ, ಸದಸ್ಯೆ ಅಂಜಲಿ ಸಂಜೀವ, ಎ.ಪಿ.ಎಂ.ಸಿ ಅಧ್ಯಕ್ಷ ರಾಜು ಎಂ ಕುಪ್ಪಗಡ್ಡೆ, ಪ್ರಮುಖರಾದ ಸದಾನಂದಗೌಡ, ಋಷಿಗೌಡ, ಪುಷ್ಪಾ, ತಿಪ್ಪಣ್ಣ ಕೌಲೇರ, ಗಣಪತಿ ಹೆಚ್, ಕೆ.ಪಿ ರುದ್ರಗೌಡ, ವೀರಪ್ಪ ಜಡೆ, ರೇಷ್ಮಾ ಬಾನು, ಇಂದಿರಮ್ಮ, ಮಂಜು, ಮತ್ತಿತರರಿದ್ದರು. 

ಫೆÇೀಟೊಸೊರಬ2-1 ತಾಲೂಕಿನ ಕಚವಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆಗೆ ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಗುದ್ದಲಿ ಪೂಜೆ ನೆರವೇರಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News