ಪ್ರಧಾನಿಯ ಒಂದು ಕೈಯಲ್ಲಿ ಸಂವಿಧಾನ, ಇನ್ನೊಂದು ಕೈಯಲ್ಲಿ ವಿಜ್ಞಾನವಿರಲಿ

Update: 2018-03-02 18:54 GMT

‘ಮುಸ್ಲಿಮರ ಒಂದು ಕೈಯಲ್ಲಿ ಕುರ್‌ಆನ್ ಮತ್ತು ಇನ್ನೊಂದು ಕೈಯಲ್ಲಿ ಕಂಪ್ಯೂಟರ್ ಇರಬೇಕು’ ಎಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ‘ಇಸ್ಲಾಮಿಕ್ ಹೆರಿಟೇಜ್: ಪ್ರಮೋಟಿಂಗ್ ಅಂಡರ್‌ಸ್ಟಾಂಡಿಂಗ್ ಆ್ಯಂಡ್ ಮಾಡರೇಶನ್’ ಕುರಿತ ಸಮಾವೇಶದಲ್ಲಿ ಅವರು ನೀಡಿರುವ ಈ ಮಹತ್ವದ ಕರೆ ಬರೇ ಭಾರತೀಯ ಮುಸ್ಲಿಮರಿಗೆ ಮಾತ್ರವಲ್ಲ, ವಿಶ್ವದ ಮುಸ್ಲಿಮರೆಲ್ಲರಿಗೆ ಅನ್ವಯವಾಗಬೇಕಾಗಿದೆ. ಜೋರ್ಡಾನ್‌ನ ಎರಡನೇ ದೊರೆ ಅಬ್ದುಲ್ಲಾ ಇಬ್ನ್ ಅಲ್ ಹುಸೈನ್ ಅವರ ಸಮ್ಮುಖದಲ್ಲಿ ಮೋದಿಯವರು ಈ ಸಂದೇಶವನ್ನು ನೀಡಿದ್ದಾರೆ.

‘‘ಭಯೋತ್ಪಾದನೆ ಮತ್ತು ತೀವ್ರವಾದದ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟ ಅಲ್ಲ. ಪ್ರತೀ ಧರ್ಮವೂ ಮಾನವ ವೌಲ್ಯವನ್ನು ಉತ್ತೇಜಿಸುತ್ತದೆ’’ ಎನ್ನುವ ಅವರ ಮಾತು ಕೂಡ ಅಷ್ಟೇ ಮಹತ್ವಪೂರ್ಣವಾದುದು. ಭಾರತದ ಮುಸ್ಲಿಮರು ಮಾತ್ರವಲ್ಲ, ವಿಶ್ವದ ಮುಸ್ಲಿಮ್ ಸಮುದಾಯದ ಏಳಿಗೆಯನ್ನು ಈ ಮಾತುಗಳು ಬೆಸೆದುಕೊಂಡಿವೆ. ತಮ್ಮ ಬದುಕನ್ನು ಬರೇ ಧರ್ಮಗ್ರಂಥಕ್ಕಷ್ಟೇ ಸೀಮಿತಗೊಳಿಸದೆ, ವಿಜ್ಞಾನ, ತಂತ್ರಜ್ಞಾನದಂತಹ ಆಧುನಿಕ ಒಳನೋಟಗಳಿಗೆ ಮುಸ್ಲಿಮರು ತೆರೆದುಕೊಳ್ಳಬೇಕು ಎನ್ನುವುದು ಅವರ ಮಾತಿನ ಇಂಗಿತವಾಗಿದೆ. ಒಂದು ರೀತಿಯಲ್ಲಿ ಮುಸ್ಲಿಮರು ಸದಾ ಬದುಕಿನಲ್ಲಿ ಬಳಸುವ ‘ಇಹ-ಪರ’ ಎನ್ನುವ ಶಬ್ದಗಳಿಗೆ ಪೂರಕವಾಗಿದೆ ನರೇಂದ್ರ ಮೋದಿಯವರ ಮಾತುಗಳು. ಕಂಪ್ಯೂಟರ್ ಇಹವನ್ನು ಪ್ರತಿನಿಧಿಸಿದರೆ, ಕುರ್‌ಆನ್ ಪರವನ್ನು ಪ್ರತಿನಿಧಿಸುತ್ತದೆ. ವಿಜ್ಞಾನ, ತಂತ್ರಜ್ಞಾನ ಸಹಿತ ಲೌಕಿಕ ಸಂಗತಿಗಳನ್ನು ಸಂಪೂರ್ಣ ತಿರಸ್ಕರಿಸಿ, ವಾಸ್ತವಕ್ಕೆ ವಿಮುಖವಾಗಿ ಏಕಮುಖವಾಗಿ ಕೇವಲ ಪರವನ್ನಷ್ಟೇ ಚಿಂತಿಸುವುದರಿಂದ ಮುಸ್ಲಿಮ್ ಸಮುದಾಯ ಏಳಿಗೆ ಹೊಂದುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಮಾತಿನ ಅರ್ಥ.

ಇದೇ ರೀತಿ ಬರೇ ವಿಜ್ಞಾನ ಮತ್ತು ತಂತ್ರಜ್ಞಾನದ ಸುಳಿಯೊಳಗೆ ಸಿಲುಕಿ ಮನುಷ್ಯ ನೈತಿಕತೆ ಮತ್ತು ಮಾನವೀಯತೆಯನ್ನು ಮರೆತರೆ ಅಲ್ಲೂ ಆತ ವಿಫಲನಾಗುತ್ತಾರೆ. ಧರ್ಮ ಮತ್ತು ವಿಜ್ಞಾನದ ನಡುವಿನ ಸಮನ್ವಯತೆಯನ್ನು ಅವರು ಬಯಸಿದ್ದಾರೆ. ಹಾಗೆ ನೋಡಿದರೆ ಇದು ಬರೇ ಮುಸ್ಲಿಮರಿಗಷ್ಟೇ ಅನ್ವಯವಾಗುವ ಮಾತುಗಳಲ್ಲ. ವಿಜ್ಞಾನ, ತಂತ್ರಜ್ಞಾನಗಳನ್ನೆಲ್ಲ ಪಕ್ಕಕ್ಕೆಸೆದು ಮತ್ತೆ ಸನಾನತ ಕಾಲಕ್ಕೆ ಮರಳುವ ಮನಸ್ಥಿತಿಯೊಂದು ದೇಶದಲ್ಲಿ ತಲೆಯೆತ್ತಿದೆ. ಅವರು ‘ಗೋಮೂತ್ರದಿಂದ ಕ್ಯಾನ್ಸರ್ ವಾಸಿಯಾಗುತ್ತದೆ’ ಎಂದು ವಾದಿಸತೊಡಗಿದ್ದಾರೆ. ವಿಠ್ಠಲ ಎಂದು ಜಪಿಸಿದರೆ ಹೃದಯಾಘಾತವಾಗುವುದಿಲ್ಲ ಎಂದು ಕರೆ ಕೊಡುತ್ತಿದ್ದಾರೆ. ‘ಪ್ಲಾಸ್ಟಿಕ್ ಸರ್ಜರಿಗಳೆಲ್ಲ ಪುರಾಣ ಕಾಲದಲ್ಲೇ ನಡೆದಿದ್ದವು’ ಎಂದು ಮೊಂಡು ವಾದ ಹಿಡಿಯುತ್ತ್ತಿದ್ದಾರೆ. ವಾಸ್ತುಶಾಸ್ತ್ರ, ಗಿಣಿ ಶಾಸ್ತ್ರಗಳನ್ನು ವಿಜ್ಞಾನವೆಂದು ಘೋಷಿಸುವ ಸಿದ್ಧತೆಯಲ್ಲಿದ್ದಾರೆ. ಕಪಟ ಸನ್ಯಾಸಿಗಳು, ಬಾಬಾಗಳು ಜನರ ಕೈಯಲ್ಲಿರುವ ವಿಜ್ಞಾನ, ತಂತ್ರಜ್ಞಾನ ಇತ್ಯಾದಿಗಳನ್ನು ಕಿತ್ತುಕೊಂಡು ಆ ಜಾಗದಲ್ಲಿ ಮನುಶಾಸ್ತ್ರ, ಭಗವದ್ಗೀತೆಯನ್ನು ಸ್ಥಾಪಿಸುವ ಪ್ರಯತ್ನವನ್ನು ಬಹಿರಂಗವಾಗಿಯೇ ನಡೆಸುತ್ತಿದ್ದಾರೆ. ಗೋವು ಆಮ್ಲಜನಕವನ್ನು ಸೇವಿಸಿ, ಆಮ್ಲಜನಕವನ್ನೇ ಹೊರಬಿಡುತ್ತದೆ ಎಂದು ಹೇಳಿದರೆ ಅದನ್ನು ಜನರು ಮುಗ್ಧವಾಗಿ ನಂಬುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ನ್ಯಾಯಾಧೀಶರೊಬ್ಬರು, ಪುರಾಣ ಕತೆಗಳನ್ನು ಉಲ್ಲೇಖಿಸಿ, ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರು ಕುಡಿದು ಗರ್ಭ ಧರಿಸುತ್ತದೆ ಎಂದು ಹೇಳಿಕೆ ನೀಡುತ್ತಾರೆ. ಇಂದು ಈ ದೇಶದಲ್ಲಿ ಮುಸ್ಲಿಮರು ಮಾತ್ರವಲ್ಲ, ಎಲ್ಲ ಧರ್ಮಗಳು ತಮ್ಮ ಒಂದು ಕೈಯಲ್ಲಷ್ಟೇ ತಮ್ಮ ಧರ್ಮಗ್ರಂಥವನ್ನು ಹಿಡಿದುಕೊಂಡು ಮಗದೊಂದು ಕೈಯಲ್ಲಿ ವಿಜ್ಞಾನ, ತಂತ್ರಜ್ಞಾನವನ್ನು ಹಿಡಿದುಕೊಳ್ಳಬೇಕು.

ವಿಜ್ಞಾನ ತಂತ್ರಜ್ಞಾನ ತನ್ನ ಜಾಗವನ್ನು ಗುರುತಿಸಿಕೊಂಡ ಹಾಗೆಯೇ, ಧರ್ಮಗ್ರಂಥವೂ ತಮ್ಮ ಜಾಗವನ್ನು ಗುರುತಿಸಿಕೊಳ್ಳಬೇಕು. ಇವೆರಡನ್ನೂ ಕಲಸು ಮೇಲೋಗರ ಮಾಡುವ ಪ್ರಯತ್ನವನ್ನು ಯಾವಾಗ ರಾಜಕಾರಣಿಗಳು ಮತ್ತು ಅಧ್ಯಾತ್ಮವಾದಿಗಳು ಮಾಡುತ್ತಾರೆಯೋ ಆಗ ಸಮುದಾಯ ಹಿನ್ನಡೆಯನ್ನು ಅನುಭವಿಸುತ್ತದೆ. ಮೋದಿ ನೇತೃತ್ವದ ಆಡಳಿತ ಜಾರಿಗೆ ಬಂದಂದಿನಿಂದ ವಿಜ್ಞಾನ ಮೂಲೆಗುಂಪಾಗಿದೆ. ಆ ಜಾಗದಲ್ಲಿ ಕಪಟ ಬಾಬಾಗಳು ಮತ್ತು ಅನಕ್ಷರಸ್ಥ ರಾಜಕಾರಣಿಗಳು ಪುರಾಣ, ವಾಸ್ತುಶಾಸ್ತ್ರಗಳನ್ನು ತುರುಕಿದ್ದಾರೆ. ಇದು ದೇಶದ ಮುನ್ನಡೆಗೆ ಭಾರೀ ಸವಾಲನ್ನು ಸೃಷ್ಟಿಸಿದೆ..

ಇದೇ ಸಂದರ್ಭದಲ್ಲಿ ಉಗ್ರವಾದದ ಕುರಿತಂತೆಯೂ ಅವರು ಮಂಡಿಸಿರುವ ನಿಲುವು ಶ್ಲಾಘನೀಯ. ಇಂದು ದೇಶದಲ್ಲಿ ಧರ್ಮದ ಮರೆಯಲ್ಲಿ ಉಗ್ರವಾದ ನಿಧಾನಕ್ಕೆ ಹೆಡೆ ಬಿಚ್ಚುತ್ತಿದೆ. ಮಾಲೆಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟದಂತಹ ಪ್ರಕರಣದಲ್ಲಿ ಬಂಧನಕ್ಕೊಳಗಾದವರು ಯಾವ ಕಾರಣಕ್ಕೂ ಹಿಂದೂ ಧರ್ಮವನ್ನು ಪ್ರತಿನಿಧಿಸುವವರಲ್ಲ. ಅವರು ಸಂಘಪರಿವಾರದ ರಾಜಕಾರಣದ ಒಂದು ಭಾಗವಾಗಿದ್ದಾರೆ. ಧರ್ಮ ಪ್ರತಿಪಾದಿಸುವ ವೌಲ್ಯಗಳಿಗೂ ಅವರಿಗೂ ಯಾವ ಸಂಬಂಧವೂ ಇಲ್ಲ. ಆದುದರಿಂದಲೇ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಾಗ ಅದು ‘ಹಿಂದೂಧರ್ಮೀಯರ ವಿರುದ್ಧ ನಡೆಸುವ ಸಂಚು’ ಎಂದು ಬಿಜೆಪಿ ನಾಯಕರು ಭಾವಿಸಬಾರದು. ದೇಶದ ವಿರುದ್ಧ ಯಾರೇ ಸಂಚು ಹೂಡಿದರು ಯಾವ ಜಾತಿ ಧರ್ಮ ಭೇದಗಳಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಾಗತಿಕ ಉಗ್ರವಾದದ ಕುರಿತಂತೆ ಆತ್ಮವಿಶ್ವಾಸದಿಂದ ಮಾತನಾಡುವ ಪ್ರಧಾನಿ ಮೋದಿಯವರು ತಮ್ಮ ಪಾದಬುಡದಲ್ಲಿ ಹರಿದಾಡುತ್ತಿರುವ ಸಂಘಪರಿವಾರದ ಉಗ್ರವಾದದ ಕುರಿತಂತೆ ಕಠಿಣ ನಿಲುವನ್ನು ತಾಳಲು ವಿಫಲರಾಗಿದ್ದಾರೆ. ದೇಶದ ವಿರುದ್ಧ ಸಂಚು ನಡೆಸಿದ ಒಬ್ಬೊಬ್ಬರೇ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ.

ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ರಾಜಕಾರಣಿಗಳು ಬಹಿರಂಗವಾಗಿ ದೇಶಪ್ರೇಮಿಯೆಂದು ಕರೆಯುವ ಮೂಲಕ, ಖಾಲಿಸ್ತಾನ್‌ನ ಭಿಂದ್ರನ್‌ವಾಲೆ, ಕಾಶ್ಮೀರದ ಅಫ್ಝಲ್‌ಗುರುವನ್ನು ದೇಶಪ್ರೇಮಿಗಳನ್ನಾಗಿಸುತ್ತಿದ್ದಾರೆ. ಹಾಗೆ ಕರೆದವರ ಮೇಲೆ ಸರಕಾರ ಈವರೆಗೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಪ್ರಧಾನಿ ಮೋದಿ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿರಬಹುದು. ಆದರೆ ಪ್ರಧಾನಿಯಾಗಿ ಅವರ ಕೈಯಲ್ಲಿ ಯಾವ ಧರ್ಮಗ್ರಂಥವೂ ಇರಬಾರದು. ಆ ಜಾಗದಲ್ಲಿ ಸಂವಿಧಾನವಿರಬೇಕು. ಮಗದೊಂದು ಕೈಯಲ್ಲಿ ಸರ್ವಜನರನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸುವ ವಿಜ್ಞಾನವಿರಬೇಕು. ಆಗ ಮಾತ್ರ ಒಂದು ದೇಶದ ಅಭಿವೃದ್ಧಿ ಸಾಧ್ಯ. ಆಗ ಮಾತ್ರ ಉಗ್ರವಾದದ ಬಗ್ಗೆ ಯಾವ ದ್ವಂದ್ವಗಳೂ ಇಲ್ಲದೆ ಹೋರಾಡಲು ಸಾಧ್ಯ. ಕಪಟಬಾಬಾಗಳು, ಸನ್ಯಾಸಿಗಳು ವಿಜ್ಞಾನದ ಮರೆಯಲ್ಲಿ ಆಶ್ರಯ ಪಡೆಯದಂತೆ ತಡೆಯಲು ಸಾಧ್ಯ. ಇದು ಸಾಧ್ಯವಾಗದೇ ಇದ್ದಾಗ, ವೇದಿಕೆಯಲ್ಲಿ ನಿಂತು ಉಗ್ರವಾದದ ಕುರಿತಂತೆ, ವಿಜ್ಞಾನ, ತಂತ್ರಜ್ಞಾನದ ಕುರಿತಂತೆ ಅದೇನು ಭಾಷಣ ಬಿಗಿದರೂ ಪ್ರಯೋಜನವಾಗದು. ಈ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ತಮ್ಮ ಭಾಷಣವನ್ನು ತಾವೇ ಬದುಕಿನಲ್ಲಿ ಅಳವಡಿಸುವ ದಿನಗಳು ಬರಲಿ ಎನ್ನುವುದು ದೇಶವಾಸಿಗಳ ಮನದಿಂಗಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News