ನಾಗರಹೊಳೆ: ಆನೆ ದಾಳಿಗೆ ಹುಲಿ ಯೋಜನೆ ನಿರ್ದೇಶಕ ಬಲಿ

Update: 2018-03-03 14:42 GMT

ಮೈಸೂರು,ಮಾ.3: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಅರಣ್ಯ ಪ್ರದೇಶದ ಬಳಿಯ ಡಿ.ಬಿ.ಕುಪ್ಪೆ ಬಳಿ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಮಣಿಕಂಠನ್ (45) ಅವರು ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ನಾಗರಹೊಳೆ ಅರಣ್ಯದ ಡಿ.ಬಿ.ಕೊಪ್ಪ ವಲಯ ವ್ಯಾಪ್ತಿಯಲ್ಲಿ ಮೊನ್ನೆಯಷ್ಟೇ 150 ಎಕರೆ ಪ್ರದೇಶದಲ್ಲಿದ್ದ ಗಿಡ-ಮರ ಪ್ರಾಣಿ-ಪಕ್ಷಿಗಳನ್ನು ಆಹುತಿ ತೆಗೆದುಕೊಂಡ ಕಾಡ್ಗಿಚ್ಚು ಮತ್ತು ಇದರಿಂದ ಸಂಭವಿಸಿದ್ದ ಹಾನಿಯನ್ನು ಪರಿಶೀಲಿಸಲು ಶನಿವಾರ ಬೆಳಿಗ್ಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.

ಮಣಿಕಂಠನ್ ಅವರು ದಕ್ಷ ಅರಣ್ಯಾಧಿಕಾರಿ ಎಂದು ಗುರುತಿಸಿಕೊಂಡಿದ್ದು, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಅರಣ್ಯದಲ್ಲಿ ಬೆಂಕಿ ಅವಘಡಗಳು ಸಂಭವಿಸದಂತೆ ಬೆಂಕಿ ತಡೆಗೋಡೆ ನಿರ್ಮಿಸುವ ಸಂಬಂಧ ತಮ್ಮ ಸಹ ಸಿಬ್ಬಂದಿಗಳೊಂದಿಗೆ ಚರ್ಚಿಸುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಒಂಟಿ ಸಲಗ ಮಣಿಕಂಠನ್ ಅವರನ್ನು ಮಾರಣಾಂತಿಕವಾಗಿ ಗಾಯಗೊಳಿಸಿತು. ಬಿಳಿ ಅಂಗಿ ಧರಿಸಿದ್ದ ಮಣಿಕಂಠನ್ ಅವರ ಮೇಲೆ ಪೊದೆಯಿಂದ ಏಕಾಏಕಿ ಬಂದ ಆನೆ ಎರಗಿದೆ. ಇವರ ಜೊತೆಗಿದ್ದ ಆರ್.ಎಫ್.ಒ ಸುಬ್ರಮಣ್ಯ ಅವರು ಓಡಿ ತಪ್ಪಿಸಿಕೊಂಡಿದ್ದಾರೆ.

ಆನೆ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಮಣಿಕಂಠನ್ ಅವರನ್ನು ಎಚ್ ಡಿ ಕೋಟೆಯ ಸರಕಾರಿ ಆಸ್ಪತ್ರೆಗೆ ಅವರನ್ನು ಕರೆತರುವಷ್ಟರಲ್ಲಿ ಅವರ ಪ್ರಾಣ ಹೋಗಿತ್ತು ಎನ್ನಲಾಗಿದೆ.

ತಾಲೂಕು ಆಸ್ಪತ್ರೆಯಲ್ಲಿ ಶೀಥಲೀಕರಣ ಘಟಕವಿಲ್ಲ. ಇದರ ಜೊತೆಗೆ ಮಣಿಕಂಠನ್ ಅವರು ಮೂಲತಃ ತಮಿಳುನಾಡಿನ ಮಧುರೈ ಜಿಲ್ಲೆಯವರಾಗಿದ್ದು, ಅವರ ದೇಹವನ್ನು ದೂರದೂರಿಗೆ ಸಾಗಿಸಬೇಕಿರುವ ಕಾರಣ ಮಣಿಕಂಠನ್ ಅವರ ದೇಹವನ್ನು ಮೈಸೂರಿಗೆ ತರಲಾಯಿತು.

ಇಲ್ಲಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತ ಮಣಿಕಂಠನ್ ಅವರ ಮರೋಣೋತ್ತರ ಪರೀಕ್ಷೆ ನಡೆಸಲಾಯಿತು. 

ಎರಡು ವರ್ಷಗಳ ಹಿಂದೆ ನಾಗರಹೊಳೆ ವಲಯದ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದ ಮಣಿಕಂಠನ್ ಅವರು, ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಗಮನಸೆಳೆದಿದ್ದರು. ಅರಣ್ಯದಲ್ಲಿ ಸೌರಶಕ್ತಿ ಚಾಲಿತ ಬೋರ್ ವೆಲ್ ಕೊರೆದು ವನ್ಯ ಜೀವಿಗಳ ಕುಡಿಯುವ ನೀರಿನ ಕೊರತೆ ನೀಗಿಸುವ ಉಪಾಯ ಮಾಡಿದ್ದರು. 

ಸಕಲ ಸರಕಾರಿ ಗೌರವ ವಂದನೆ: ಅಶೋಕಪುರಂ ನಲ್ಲಿರುವ ಅರಣ್ಯ ಭವನಕ್ಕೆ ಪಾರ್ಥೀವ ಶರೀರವನ್ನು ತಂದು, ನಂತರ ಅರಣ್ಯ ಇಲಾಖೆಯ ನಿಯಮದಂತೆ ಮೃತ ಅಧಿಕಾರಿಗೆ ಇಲಾಖೆಯ ಗೌರವ ಸಲ್ಲಿಸಲಾಯಿತು. ಜೊತೆಗೆ ಸರಕಾರದ ವತಿಯಿಂದ ಸಕಲ ಸರಕಾರಿ ಗೌರವವನ್ನು ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಡಿ.ರಂದೀಪ್ ಸರಕಾರದ ಪರವಾಗಿ ಗೌರವ ವಂದನೆ ಸಲ್ಲಿಸಿದರು. ಸಂಸದ ಧ್ರುವನಾರಾಯಣ ಅವರು ಎಚ್.ಡಿ.ಕೋಟೆ ಆಸ್ಪತ್ರೆಗೆ ತೆರಳಿ ಅಂತಿನ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News