ಮಡಿಕೇರಿ: ಅರ್ಜುನ ಪ್ರಶಸ್ತಿ ವಿಜೇತ ಹಾಕಿ ಆಟಗಾರ ಎಸ್.ವಿ.ಸುನಿಲ್ ಮದುವೆ

Update: 2018-03-03 11:31 GMT

ಮಡಿಕೇರಿ, ಮಾ.3: ಕ್ರೀಡಾ ಕ್ಷೇತ್ರದಲ್ಲಿನ ಅತ್ಯುನ್ನತ ಗೌರವವಾದ ಅರ್ಜುನ ಪ್ರಶಸ್ತಿಗೆ ಭಾಜನರಾದ ಸೋಮವಾರಪೇಟೆಯ ಹಾಕಿ ಕಲಿ ಎಸ್.ವಿ.ಸುನಿಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮಾ.4 ರಂದು ಭಾನುವಾರ ಬೆಳಗ್ಗೆ 8.50 ಗಂಟೆಗೆ ಮೀನ ಲಗ್ನದ ಮುಹೂರ್ತದಲ್ಲಿ ಮೂಡಬಿದ್ರೆಯ ತಾರಾನಾಥ ಆಚಾರ್ಯರ ಪುತ್ರಿ ನಿಶಾ ಅವರನ್ನು ಸುನಿಲ್ ವರಿಸಲಿದ್ದಾರೆ. ವಿವಾಹ ಸಮಾರಂಭ ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ದೇವಾಲಯದ ಶ್ರೀಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. 

ಕ್ರೀಡಾಕ್ಷೇತ್ರದ ಗಣ್ಯರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿದೆ. ಮಾ.5 ರಂದು ಸಂಜೆ 7 ಗಂಟೆಗೆ ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಆರತಕ್ಷತೆ ನಡೆಯಲಿದೆ.

ಸುನಿಲ್ ಕ್ರೀಡಾ ಹೆಜ್ಜೆ
ಭಾರತ ಹಾಕಿ ತಂಡದ ಮುನ್ನಡೆಗೆ ಬಲ ನೀಡಿರುವ ಎಸ್.ವಿ.ಸುನಿಲ್ ಕಷ್ಟದ ಹಾದಿಯಲ್ಲಿ ಸಾಗಿ ಕ್ರೀಡಾ ಪ್ರೇಮಿಗಳು ಇಷ್ಟಪಡುವಂತೆ ಬೆಳೆದ ಯುವ ಕ್ರೀಡಾ ತಾರೆ. ಹಾಕಿ ಕ್ರೀಡೆಯತ್ತ ಬಾಲ್ಯದಲ್ಲಿಯೇ ಚಿತ್ತ ಹರಿಸಿದ ಈ ಆಟಗಾರ ರಾಷ್ಟ್ರೀಯ ಕ್ರೀಡೆಯಿಂದಲೇ ಬದುಕು ಕಟ್ಟಿಕೊಂಡವರು. ಕೊಡಗಿನ ಸೋಮವಾರಪೇಟೆಯ ಬಯಲಲ್ಲಿ ಆರಂಭವಾದ ಹಾಕಿ ಆಟದ ಓಟವು ಅಂತಾರಾಷ್ಟ್ರೀಯ ಮಟ್ಟವನ್ನು ಮುಟ್ಟಿದೆ. ಒಂದು ಕಾಲದಲ್ಲಿ ಹಾಕಿ ಸ್ಟಿಕ್ ಖರೀದಿ ಮಾಡಲು ಕೂಡ ಕೈಯಲ್ಲಿ ಪುಡಿಗಾಸು ಇರಲಿಲ್ಲ. ಹೀಗಾಗಿ ಗದ್ದೆಯಂಚಿಗೆ ಬೆಳೆದಿದ್ದ ಮರದ ಬಾಗಿದ ಕೊಂಬೆಯೇ ಸ್ಟಿಕ್ ಆಗಿತ್ತು. ಕೊಂಬೆಯನ್ನು ಕತ್ತರಿಸಿ ಅದಕ್ಕೇ ಸ್ಟಿಕ್ ಶೇಪ್ ನೀಡಿ ಆಡಿದ್ದು ಆರಂಭ. ಆಗ ಯಾರೂ ಈ ಆಟಗಾರ ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆಯುತ್ತಾನೆಂದು ಯೋಚಿಸಿರಲಿಲ್ಲ. ಸ್ವತಃ ಸುನಿಲ್ ಕೂಡ ಅಂಥದೊಂದು ಕನಸನ್ನು ಆ ಕಾಲದಲ್ಲಿ ಕಂಡಿರಲಿಲ್ಲ. ಆದರೆ ಕ್ರೀಡಾ ಬದುಕಿನ ಹಾದಿಯು ರೋಚಕ ಎನ್ನುವ ಮಟ್ಟದಲ್ಲಿ ತಿರುವು ಪಡೆದುಕೊಂಡಿತು. ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕರ್ನಾಟಕದ ಪ್ರತಿಭಾವಂತ ಹಾಕಿ ತಾರೆಗಳಲ್ಲಿ ಎಸ್.ವಿ.ಸುನಿಲ್ ಅವರು ಕೂಡ ಒಬ್ಬರಾಗಿದ್ದು, ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸುನಿಲ್ ಸಾಧನೆ

ಎಸ್.ವಿ.ಸುನಿಲ್ ಏಷ್ಯಾ ಗೇಮ್ ನಲ್ಲಿ ಚಿನ್ನದ ಪದಕ, ಕಾಮನ್ ವೆಲ್ತ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಹಾಗೂ ವಿಶ್ವ ಲೀಗ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಶಾರ್ಪ್ ಶೂಟರ್ ನಂಜಪ್ಪ ಕಾಮನ್ ವೆಲ್ತ್ ಗೇಮ್ ನಲ್ಲಿ ಬೆಳ್ಳಿ ಪದಕ, ಐಎಸ್‍ಎಸ್‍ಎಫ್ ವಲ್ಡ್ ಚಾಂಪಿಯನ್ ಷಿಪ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. 

2007ರಲ್ಲಿ ಏಷ್ಯಾ ಕಪ್, 2009 ಹಾಗೂ 2010ರಲ್ಲಿ ಅಜ್ಲನ್ ಷಾ ಕಪ್, 2011ರಲ್ಲಿ ಚೀನಾದ ಒರ್ಡೊಸ್‍ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಕರ್ನಾಟಕದ ಸುನಿಲ್ ಪಾತ್ರ ಮಹತ್ವದ್ದು. 2012ರ ಲಂಡನ್ ಒಲಿಂಪಿಕ್ಸ್ ನಲ್ಲೂ ಕೊಡಗು ಮೂಲದ ಈ ಆಟಗಾರ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News