ಈಶಾನ್ಯ ರಾಜ್ಯಗಳ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ: ಸಿದ್ದರಾಮಯ್ಯ

Update: 2018-03-03 12:28 GMT

ಹುಬ್ಬಳ್ಳಿ, ಮಾ. 3: ತ್ರಿಪುರ, ನಾಗಲ್ಯಾಂಡ್ ಸೇರಿ ಈಶಾನ್ಯ ಭಾರತದ ರಾಜ್ಯಗಳ ಚುನಾವಣೆ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಯಾವುದೇ ರಾಜ್ಯದ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಪ್ರಭಾವಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳ ಫಲಿತಾಂಶದಿಂದ ಆಶ್ಚರ್ಯವೇನಿಲ್ಲ. ಜನತೆ ನೀಡಿದ ತೀರ್ಪನ್ನು ಒಪ್ಪಿಕೊಳ್ಳಬೇಕು. ನಾವು ತ್ರಿಪುರ, ನಾಗಲ್ಯಾಂಡ್ ನಲ್ಲಿ ಗೆಲ್ಲುವ ಭ್ರಮೆಯಲ್ಲಿ ಇರಲಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಬ್ಯಾಲೆಟ್ ಪೇಪರ್‌ನಲ್ಲಿ ರಾಜ್ಯದ ಚುನಾವಣೆ ನಡೆಸಬೇಕೆನ್ನುವ ಅಭಿಪ್ರಾಯವಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಆಗಬೇಕು. ಅನೇಕ ದೇಶಗಳಲ್ಲಿ ಇವಿಎಂ ರದ್ದುಗೊಳಿಸಿ ಬ್ಯಾಲೆಟ್ ಪೇಪರ್ ಬಳಸುತ್ತಿವೆ. ಹೀಗಾಗಿ ಕರ್ನಾಟಕ ರಾಜ್ಯದ ಚುನಾವಣೆಯಲ್ಲೂ ಬ್ಯಾಲೆಟ್ ಪೇಪರ್ ಬಳಸಬೇಕೆಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿಯವರ ಕನಸು ನನಸಾಗಲ್ಲ. ರಾಜ್ಯದಲ್ಲಿ ಬಿಜೆಪಿಯವರೇ ಮುಕ್ತರಾಗುತ್ತಾರೆ. ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆ ಮುಂದೂಡಲು ಆಗುವುದಿಲ್ಲ. ಚುನಾವಣೆ ಮುಂದೂಡಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

‘ಲಿಂಗಾಯತ ಸ್ವತಂತ್ರ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಅಲ್ಪಸಂಖ್ಯಾತ ಆಯೋಗಕ್ಕೆ ವರದಿ ನೀಡಿದ್ದು, ಆ ವರದಿ ಸರಕಾರದ ಮುಂದೆ ಬಂದಿಲ್ಲ. ತ್ವರಿತವಾಗಿ ವರದಿ ನೀಡಿ ಸರಕಾರ ಸಮಿತಿಗೆ ಯಾವುದೇ ಒತ್ತಡವನ್ನು ಹಾಕಿರಲಿಲ್ಲ’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News