ಆಝಾನ್ ಕೇಳಿ ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ

Update: 2018-03-03 17:17 GMT

ಹೊಸದಿಲ್ಲಿ, ಮಾ.3: ತ್ರಿಪುರಾ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಸಮೀಪದ ಮಸೀದಿಯಿಂದ ಆಝಾನ್ ಪ್ರಾರಂಭವಾದಾಗ ಭಾಷಣವನ್ನು ನಿಲ್ಲಿಸಿದ ಘಟನೆ ನಡೆದಿದೆ

ಪಕ್ಷದ ಮುಖ್ಯಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದ ಸಂದರ್ಭ ಸಮೀಪದ ಮಸೀದಿಯಿಂದ ಆಝಾನ್ ಮೊಳಗಿದೆ. ಈ ಸಂದರ್ಭ ತನ್ನ ಭಾಷಣ ನಿಲ್ಲಿಸಿದ ಮೋದಿ ಕಾರ್ಯಕರ್ತರಿಗೆ ಆಝಾನ್ ಬಗ್ಗೆ ಸೂಚನೆ ನೀಡಿದ್ದಾರೆ.

ಆಝಾನ್ ಮುಗಿದ ನಂತರ ಭಾಷಣವನ್ನು ಮುಂದುವರಿಸಿ ಮಾತನಾಡಿದ ಅವರು, ಈ ಗೆಲುವನ್ನು ‘ಹುತಾತ್ಮ ಬಿಜೆಪಿ ಕಾರ್ಯಕರ್ತರಿಗೆ’ ಅರ್ಪಿಸುತ್ತಿದ್ದೇನೆ. ಹಲವು ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಭಯ ಹಾಗು ಭ್ರಮೆಯನ್ನು ಹರಡಿದ್ದಕ್ಕಾಗಿ ಎಡರಂಗಕ್ಕೆ ಜನರು ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ಈಶಾನ್ಯ ರಾಜ್ಯ ತ್ರಿಪುರದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಎಡರಂಗದಿಂದ ಅಧಿಕಾರವನ್ನು ಕಿತ್ತುಕೊಂಡಿದೆ. ಮತ್ತೊಂದೆಡೆ ನಾಗಾಲ್ಯಾಂಡ್‌ನಲ್ಲೂ ಅಭೂತಪೂರ್ವ ಪ್ರದರ್ಶನ ನೀಡಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ. ಮೇಘಾಲಯದಲ್ಲೂ ತನ್ನ ಖಾತೆ ತೆರೆಯುವ ಮೂಲಕ ಉತ್ತಮ ಪ್ರದರ್ಶನ ತೋರಿದೆ. ಪ್ರಧಾನಿ ಮೋದಿ ಪ್ರತಿ ಬಾರಿಯೂ ಈಶಾನ್ಯ ರಾಜ್ಯಗಳ ಬಗ್ಗೆ ಮಾತನಾಡುವಾಗ ವಾಸ್ತುಶಾಸ್ತ್ರದ ಉಲ್ಲೇಖವನ್ನು ಮಾಡುತ್ತಾರೆ. 2013ರಲ್ಲಿ ಮಣಿಪುರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಮೋದಿ, ಮನೆಯ ಈಶಾನ್ಯ ಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಭಾರತ ಕೂಡಾ ಈಶಾನ್ಯ ರಾಜ್ಯಗಳು ಏಳಿಗೆಯಾದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದ್ದರು. 2014ರಲ್ಲಿ ಚುನಾವಣೆಯಲ್ಲಿ ಜಯಿಸಿದ ನಂತರ ಮಾಡಿದ ಭಾಷಣದಲ್ಲೂ ವಾಸ್ತುಶಾಸ್ತ್ರದ ಪ್ರಕಾರ ಈಶಾನ್ಯ ಕೋನವು ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ದೇಶದ ಏಳಿಗೆಗಾಗಿ ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿಗೊಳಿಸುವುದು ಮುಖ್ಯವಾಗಿದೆ ಎಂದು ತಿಳಿಸಿದ್ದರು. ತ್ರಿಪುರದಲ್ಲಿ ನಮ್ಮ ಪಯಣವು ಶೂನ್ಯದಿಂದ ಅಧಿಕಾರದೆಡೆಗೆಯಾಗಿದೆ. ಸೂರ್ಯ ಮುಳುಗಿದಾಗ ಅದರ ಬಣ್ಣ ಕೆಂಪಾಗಿರುತ್ತದೆ. ಆದರೆ ಅದೇ ಸೂರ್ಯ ಉದಯಿಸುವಾಗ ದರ ಬಣ್ಣ ಕೇಸರಿಯಾಗಿರುತ್ತದೆ ಎಂದು ಪ್ರಧಾನಿ ಮಾರ್ಮಿಕವಾಗಿ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News