ವಾಣಿಜ್ಯ ಸಮರಗಳು ಒಳ್ಳೆಯದು

Update: 2018-03-03 16:45 GMT

ವಾಶಿಂಗ್ಟನ್, ಮಾ. 3: ವಾಣಿಜ್ಯ ಸಮರಗಳು ಒಳ್ಳೆಯದು ಹಾಗೂ ಅವುಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಉಕ್ಕು ಮತ್ತು ಅಲ್ಯೂಮೀನಿಯಂ ಆಮದುಗಳ ಮೇಲೆ ಸುಂಕ ವಿಧಿಸುವ ತನ್ನ ಪ್ರಸ್ತಾಪಕ್ಕೆ ವ್ಯಾಪಕ ಕಳವಳ ವ್ಯಕ್ತವಾದ ಬಳಿಕ ಟ್ರಂಪ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಮದುಗಳ ಮೇಲೆ ಸುಂಕ ವಿಧಿಸಿದರೆ ಅದಕ್ಕೆ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಮೆರಿಕದ ವ್ಯಾಪಾರ ಭಾಗೀದಾರರು ಈಗಾಗಲೇ ಎಚ್ಚರಿಕೆಗಳನ್ನು ನೀಡಿದ್ದಾರೆ ಹಾಗೂ ಶೇರು ಮಾರುಕಟ್ಟೆ ಕುಸಿದಿದೆ.

ಅಮೆರಿಕದ ಕ್ರಮಕ್ಕೆ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಐರೋಪ್ಯ ಒಕ್ಕೂಟವೂ ಪರಿಶೀಲನೆ ನಡೆಸುತ್ತಿದೆ. ಆಮದು ಸುಂಕವು ಸ್ವೀಕಾರಾರ್ಹವಲ್ಲ ಎಂದು ಫ್ರಾನ್ಸ್ ಹೇಳಿದರೆ, ಸಂಯಮ ಪ್ರದರ್ಶಿಸುವಂತೆ ಚೀನಾ ಅಮೆರಿಕವನ್ನು ಒತ್ತಾಯಿಸಿದೆ.

ಅಮೆರಿಕಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಉಕ್ಕು ಮತ್ತು ಅಲ್ಯೂಮಿಯಂ ರಫ್ತು ಮಾಡುವ ಕೆನಡವು, ಅಮೆರಿಕದ ಕ್ರಮಗಳು ತನ್ನ ಮೇಲೆ ಪರಿಣಾಮ ಬೀರಿದರೆ ಅದರ ವಿರುದ್ಧವೂ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದೆ.

ಈ ವಾರ ಡಾಲರ್ ಮೌಲ್ಯವು ಹೆಚ್ಚಿನ ಕರೆನ್ಸಿಗಳ ವಿರುದ್ಧ ಕುಸಿದಿದೆ. ಜಪಾನ್ ಕರೆನ್ಸಿ ಯೆನ್ ವಿರುದ್ಧ ಡಾಲರ್ 2 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ.

ಉಕ್ಕು ಆಮದಿನ ಮೇಲೆ 25 ಶೇಕಡ ಮತ್ತು ಅಲ್ಯೂಮೀನಿಯಂ ಆಮದಿನ ಮೇಲೆ 10 ಶೇಕಡ ಸುಂಕವನ್ನು ಮುಂದಿನ ವಾರ ಔಪಚಾರಿಕವಾಗಿ ಘೋಷಿಸಲಾಗುವುದು ಎಂಬುದಾಗಿ ಟ್ರಂಪ್ ಗುರುವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News