ಸ್ಥಳೀಯ ಭಾಷೆಗಳ ಬಗ್ಗೆ ಕೇಂದ್ರದ ಅಸಡ್ಡೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-03-04 12:02 GMT

ಯಾದಗಿರಿ, ಮಾ. 4: ಕೇಂದ್ರ ಸರಕಾರ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳ ಬಗ್ಗೆ ಅಸಡ್ಡೆ ತೋರುತ್ತಿದ್ದು, ಹಿಂದಿ ಹೇರಿಕೆಗೆ ಹುನ್ನಾರ ನಡೆಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ರವಿವಾರ ಇಲ್ಲಿನ ವಿದ್ಯಾಮಂಗಲದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿ-ಇಂಗ್ಲಿಷ್, ಹಿಂದಿ-ಸಂಸ್ಕೃತ ಹೀಗೆ ಹಿಂದಿಯನ್ನೇ ಮುಂದು ಮಾಡುತ್ತಿರುವ ಕೇಂದ್ರ ಸರಕಾರ, ಸ್ಥಳೀಯ ಭಾಷೆಗಳ ಅಭಿವೃದ್ಧಿಯನ್ನು ಮೊಟಕುಗೊಳಿಸಲು ಮುಂದಾಗಿದೆ ಎಂದು ದೂರಿದರು.

ಹಿಂದಿ ಹೇರಿಕೆಯ ಬಗ್ಗೆ ಕೇಂದ್ರವನ್ನು ಪ್ರಶ್ನಿಸಿದರೆ ಮಾತೃಭಾಷಾ ನೀತಿಯನ್ನು ಮುಂದೆ ತರುತ್ತಿದೆ. ಎಷ್ಟು ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಮಾತೃಭಾಷೆ ಆಗಿದೆ ಎಂಬುದನ್ನು ಕೇಂದ್ರ ತೋರಿಸಬೇಕು. ವಿಪರ್ಯಾಸ ಎಂದರೆ ಮಾತೃಭಾಷಾ ದೃಷ್ಟಿಕೋನದಲ್ಲಿ ಸ್ಥಳೀಯ ಭಾಷೆಗಳ ಬಗ್ಗೆ ನ್ಯಾಯಾಲಯಗಳೂ ಹೊಸ ವ್ಯಾಖ್ಯಾನ ನೀಡುತ್ತಿವೆ ಎಂದು ಸಿದ್ದರಾಮಯ್ಯ ಖೇದ ವ್ಯಕ್ತಪಡಿಸಿದರು.

ಮಾತೃಭಾಷೆ ಯಾವುದೇ ಇರಲಿ, ಅಲ್ಲಿನ ಪರಿಸರದ, ನೆಲಮೂಲದ ರಾಜ್ಯ ಭಾಷೆಯೇ ಪ್ರಥಮ ಭಾಷೆಯಾಗಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಭಾಷಾ ನೀತಿಯನ್ನು ರೂಪಿಸಬೇಕು. ಆ ನೀತಿಯಲ್ಲಿ ರಾಜ್ಯ ಭಾಷೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಿದ್ದರಾಮಯ್ಯ, ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News