×
Ad

ದತ್ತಾತ್ರೇಯ ಪೀಠದ ಹೆಸರು ಬದಲು ಪ್ರಶ್ನಿಸಿ ಕೋರ್ಟ್‌ಗೆ: ಸಿ.ಟಿ.ರವಿ

Update: 2018-03-04 17:36 IST

ಬೆಂಗಳೂರು, ಮಾ.4: ಬಾಬಾ ಬುಡಾನ್ ದತ್ತಾತ್ರೇಯ ಪೀಠ ಈಗಾಗಲೇ ಮುಜರಾಯಿ ಇಲಾಖೆ ವಶದಲ್ಲಿಯಿದ್ದು, ಅದನ್ನು ವಕ್ಫ್ ಬೋರ್ಡ್‌ಗೆ ನೀಡುವ ಕುತಂತ್ರ ನಡೆದಿತ್ತು ಎಂದು ಮಾಜಿ ಸಚಿವ ಸಿ.ಟಿ.ರವಿ ಆಪಾದಿಸಿದ್ದಾರೆ.

ರವಿವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಬಾ ಬುಡಾನ್ ದತ್ತಾತ್ರೇಯ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಮುಜರಾಯಿ ಆಯುಕ್ತರು ವರದಿಯಲ್ಲಿ ಈಗಾಗಲೇ ಹೇಳಿದ್ದಾರೆ. ಆದರೆ, ರಾಜ್ಯ ಸರಕಾರವು ಹಿಂದೂಗಳ ಪರವಾಗಿ ಇದ್ದೇವೆ ಎನ್ನುತ್ತಲೇ ದತ್ತಾತ್ರೇಯ ದೇವಾಲಯದಲ್ಲಿ ಮುಜಾವರ್ ಎನ್ನುವವರನ್ನು ಅರ್ಚಕರನ್ನಾಗಿ ನೇಮಕ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂಬ ಹೆಸರನ್ನು ನಾಮಕರಣ ಮಾಡಿರುವ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಸಿ.ಟಿ.ರವಿ ಎಚ್ಚರಿಸಿದರು.

ನಿವೃತ್ತ ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಸಮಿತಿಯ ವರದಿಯನ್ನು ನಾವು ಹೇಗೆ ಒಪ್ಪುವುದು. ಅಲ್ಲದೆ, ಅವರೊಬ್ಬ ಎಡಪಂಥಿಯ ವಿಚಾರವುಳ್ಳವರಾಗಿದ್ದು, ಅವರು ತಮಗೆ ಬೇಕಾದ ರೀತಿಯಲ್ಲಿ ವರದಿ ತಯಾರಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ ಎಂದು ಟೀಕಿಸಿದರು.

ಮೊದಲು ಮಸೀದಿಗಳಲ್ಲಿ ಹಿಂದೂ ಪೂಜಾರಿಗಳನ್ನು ನೇಮಕ ಮಾಡಬೇಕು. ಆ ನಂತರ ನಾವು ಮುಸ್ಲಿಮರನ್ನು ದೇವಾಲಯದಲ್ಲಿ ಅರ್ಚಕರನ್ನಾಗಿ ನೇಮಕ ಮಾಡಲು ಒಪ್ಪುತ್ತೇವೆ. ಅಲ್ಲದೆ, ರಾಜ್ಯ ಸರಕಾರ ಮುಸ್ಲಿಮರ ಓಲೈಕೆಗೆ ರಾಜಕೀಯವನ್ನು ಮುಂದುವರಿಸಿದೆ ಎಂದು ಲೇವಡಿ ಮಾಡಿದರು.

ದತ್ತಾತ್ರೇಯ ಪೀಠದ ಹೆಸರನ್ನು ಬದಲಿಸುವ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ಕೊಟ್ಟವರಾರು ಎಂದು ಪ್ರಶ್ನಿಸಿದ ಸಿ.ಟಿ.ರವಿ, ಮೊದಲಿನಿಂದಲೂ ಅದು ದತ್ತಾತ್ರೇಯ ದೇವಾಲಯವಾಗಿದೆ. ಹೀಗಾಗಿ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದೇವೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸರಕಾರದ ಎಲ್ಲ ದಾಖಲೆಗಳಲ್ಲಿ ದತ್ತಾತ್ರೇಯ ಪೀಠ ಅಂತಲೇ ಇದೆ. ಅದನ್ನು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಅಂತ ಕರೆಯುವ ಹಕ್ಕು ಕಾಂಗ್ರೆಸ್‌ಗಾಗಲಿ, ರಾಜ್ಯ ಸರಕಾರಕ್ಕಾಗಲಿ ಇಲ್ಲ. ಮಸೀದಿಗಳಲ್ಲಿ ಹಿಂದೂ ಅರ್ಚಕರನ್ನು ನೇಮಿಸಿಕೊಂಡರೆ, ನಾವೂ ಹಿಂದೂ ದೇವಾಲಯದಲ್ಲಿ ಪೂಜೆ ಮಾಡಲು ಮುಜಾವರ್ ಅವರನ್ನು ನೇಮಕ ಮಾಡಲು ಒಪ್ಪುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News